ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯೋತ್ಸವ ನೆನಪಿಸುವ ಕಪ್ಪುಬಿಳುಪು ಚಿತ್ರ

ಶಿಡ್ಲಘಟ್ಟ: 40 ವರ್ಷದ ಹಿಂದಿನ ಆಚರಣೆಯ ಸ್ಮರಣೆ
Last Updated 31 ಅಕ್ಟೋಬರ್ 2020, 4:17 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕಪ್ಪು ಬಿಳುಪಿನ ಛಾಯಾಚಿತ್ರಗಳು ಇಂದಿಗೂ ಕಣ್ಮನ ಸೆಳೆಯುತ್ತವೆ. ಕೆಲವರಿಗಂತೂ ಕಪ್ಪು ಬಿಳುಪಿನ ಚಿತ್ರಗಳು ಎಂದೊಡನೆಯೇ ಗತಕಾಲದ ಮಧುರ ನೆನಪುಗಳ ಮೆರವಣಿಗೆ. ಅವು ಹಿಂದಿನವರ ಸಾಮಾಜಿಕ, ಸಾಂಸ್ಕೃತಿಕ, ಅಭಿರುಚಿ, ವೇಷಭೂಷಣ ಮುಂತಾದವುಗಳನ್ನು ನೆನಪಿಸುವ ಮತ್ತು ಆಗಿನ ಕಾಲದರ್ಶನ ಮಾಡಿಸುತ್ತವೆ. ಇಂಥಹ ಅಪರೂಪದ ಕಪ್ಪುಬಿಳುಪಿನ ಛಾಯಾಚಿತ್ರಗಳ ಸಂಗ್ರಹಗಳು ವಿರಳ.

ಸುಮಾರು ನಲವತ್ತು ವರ್ಷಗಳ ಹಿಂದಿನ ಅಂದರೆ 1970ರ ಒಂದು ಕಪ್ಪು ಬಿಳುಪು ಚಿತ್ರವೊಂದು ಶಿಡ್ಲಘಟ್ಟದ ಆಗಿನ ಯುವಕರ ಕನ್ನಡಪ್ರೇಮ, ಅದರಿಂದ ಪ್ರೇರಿತರಾಗಿ ಅವರು ಕಂಡುಕೊಂಡ ಸಾಂಸ್ಕೃತಿಕ ಹಾದಿಗಳ ದರ್ಶನ ಮಾಡಿಸುತ್ತದೆ. ಈ ಅಪರೂಪದ ಚಿತ್ರವು ಚಿಂತಾಮಣಿ ಕಸಾಪ ಅಧ್ಯಕ್ಷ ಮು.ಪಾಪಣ್ಣ ಅವರ ಸಂಗ್ರಹದಲ್ಲಿದೆ.

ಈ ಅಪರೂಪದ ಕಪ್ಪು ಬಿಳುಪಿನ ಗ್ರೂಪ್ ಫೋಟೊ ತೆಗೆದಿರುವುದು 1970ರಲ್ಲಿ ಶಿಡ್ಲಘಟ್ಟದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದದಲ್ಲಿ. ಕನ್ನಡ ಕಲಾ ಸಂಘದ ನೇತೃತ್ವದಲ್ಲಿ ಆಗ ಪ್ರತಿವರ್ಷ ನಗರದ ಕೋಟೆ ವೃತ್ತದಲ್ಲಿರುವ ಶಾಲೆಯ ಆವರಣದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿತ್ತು.

ಈ ಫೋಟೊದಲ್ಲಿ ಎಡಕಲ್ಲುಗುಡ್ಡದ ಮೇಲೆ ಚಲನಚಿತ್ರದಲ್ಲಿ ಜಯಂತಿಯ ಗಂಡನ ಪಾತ್ರ ವಹಿಸಿದ್ದ ಚಿತ್ರನಟ ರಂಗ, ನಾಂದಿ, ಉಯ್ಯಾಲೆ, ಮುಕ್ತಿ ಚಿತ್ರಗಳನ್ನು ನಿರ್ದೇಶಿಸಿ ಉತ್ತಮಶ್ರೇಣಿಯ ನಿರ್ದೇಶಕರು ಎಂದು ಖ್ಯಾತಿ ಪಡೆದಿದ್ದ ಎನ್. ಲಕ್ಷ್ಮೀನಾರಾಯಣ್, ಚಿತ್ರ ಸಾಹಿತಿ ನರೇಂದ್ರಬಾಬು ಇದ್ದಾರೆ. ಅವರನ್ನು ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಲಾಗಿತ್ತು. ಅಂದಿನ ಶಿಡ್ಲಘಟ್ಟ ಶಾಸಕ ಜಾತವಾರ ವೆಂಕಟಪ್ಪ ಮತ್ತು ಮುನಿಸಿಪಲ್ ಅಧ್ಯಕ್ಷ ಸಿ.ಆರ್.ನಾರಾಯಣಸ್ವಾಮಿ ಕೂಡ ಚಿತ್ರದಲ್ಲಿದ್ದಾರೆ. ಇವರೊಂದಿಗೆ ಆಗಿನ ಕನ್ನಡ ಕಲಾ ಸಂಘದ ಟಿ.ಕೆ.ರಾಮಚಂದ್ರ, ವಿ.ನಾರಾಯಣಸ್ವಾಮಿ, ಶಿಕ್ಷಕ ರಾಯಪ್ಪ, ಬ್ಯಾಂಕ್ ಕೃಷ್ಣ, ಸುಬ್ಬು, ಪ್ರಕಾಶ, ಆನಂದ, ಕೆನರಾ ಬ್ಯಾಂಕ್ ಪ್ರಕಾಶ್, ಶ್ರೀನಿವಾಸ್, ಮು.ಪಾಪಣ್ಣ, ವಿಜಯಕುಮಾರ್, ಕುಚ್ಚಣ್ಣ ಶ್ರೀನಿವಾಸ್, ಪಶುವೈದ್ಯ ಡಾ. ರಾಜಣ್ಣ ಇದ್ದಾರೆ.

ಶಿಡ್ಲಘಟ್ಟದಲ್ಲಿನ ಈ ಸಾಂಸ್ಕೃತಿಕ ಸೌರಭದ ಪ್ರಭಾವದಿಂದ ಈ ಚಿತ್ರದಲ್ಲಿರುವ ಇಬ್ಬರು ಸ್ನೇಹಿತರು, ಮುಂದೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ವಿ.ನಾರಾಯಣಸ್ವಾಮಿ ಮತ್ತು ಐಪಿಎಸ್ ಅಧಿಕಾರಿಯಾದ ಕುಚ್ಚಣ್ಣ ಶ್ರೀನಿವಾಸ್ ಚಲನಚಿತ್ರವೊಂದರ ನಿರ್ಮಾಣಕ್ಕೆ ಕಾರಣರಾದರು. 1988 ರಲ್ಲಿ ನಟ ರಮೇಶ್ ಅರವಿಂದ್ ಅವರ ನಟನೆಯ ಮೊದಲ ಚಿತ್ರ ‘ಮಧುಮಾಸ’ವನ್ನು ವಿ.ನಾರಾಯಣಸ್ವಾಮಿ ನಿರ್ದೇಶಿಸಿದರೆ, ಕುಚ್ಚಣ್ಣ ಶ್ರೀನಿವಾಸ್ ಕಥಾ ಸಾಹಿತ್ಯ ಒದಗಿಸಿದ್ದರು. ಅದು ಮುಂದುವರೆದು ಅವರು ಹಲವು ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

‘1970 ರಲ್ಲಿ ರಾಮಚಂದ್ರ ಮತ್ತು ನಾನು ಬೆಂಗಳೂರಿನ ಚಿತ್ರನಟ ರಂಗ ಅವರನ್ನು ಕರೆಯಲು ಹೋಗಿದ್ದೆವು. ಅವರದ್ದು ಶೀಟ್ ಹೊದಿಕೆಯ ಪುಟ್ಟ ಮನೆ. ಒಳ್ಳೆಯ ನಟ ಎಂದು ಗುರುತಿಸಿದ್ದರೂ ಆರ್ಥಿಕವಾಗಿ ಉತ್ತಮರಾಗಿರಲಿಲ್ಲ. ಕಲಾವಿದರ ಬದುಕು ಕಷ್ಟ ಕಣಪ್ಪ. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ನಟಿಸುತ್ತಿರುವೆ. ಅದರಿಂದ ಹೆಸರು ಬರಬಹುದು. ನಮ್ಮ ಕಾರ್ಯಕ್ರಮಕ್ಕೆ ಸಂತೋಷದಿಂದ ಒಪ್ಪಿ ಬಂದರು. ಕೋಟೆ ವೃತ್ತದ ಶಾಲೆಯ ಆವರಣದಲ್ಲಿ ವೇದಿಕೆ ನಿರ್ಮಿಸಲು ಬೆಂಚುಗಳನ್ನು ಉಲ್ಲೂರುಪೇಟೆ ಶಾಲೆಯಿಂದ ತಳ್ಳುವ ಗಾಡಿಯಲ್ಲಿ ಇರಿಸಿ ನಾವುಗಳೇ ಎಳೆದುಕೊಂಡು ಹೋಗಿದ್ದೆವು. ಕನ್ನಡದ ಕೆಲಸಕ್ಕೆ ಎಲ್ಲರೂ ಒಗ್ಗೂಡಿ ಶ್ರಮಿಸುತ್ತಿದ್ದೆವು’ ಎಂದು ಚಲನಚಿತ್ರ ನಿರ್ದೇಶಕ ವಿ.ನಾರಾಯಣಸ್ವಾಮಿ ಫೋಟೊ ನೋಡಿ ಹಳೆಯ ದಿನಗಳನ್ನು ಮೆಲುಕು ಹಾಕಿದರು.

‘ಕನ್ನಡ ಕಲಾಸಂಘದಿಂದ ಕನ್ನಡ ರಾಜ್ಯೋತ್ಸವವನ್ನು ಆ ದಿನಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿತ್ತು. ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರನಟ ರಾಜೇಶ್ ಮುಂತಾದವರನ್ನು ಕರೆಸಿದ್ದ ನೆನಪಿದೆ. ನನ್ನ ಬಾಲ್ಯವನ್ನು ರೂಪಿಸಿದ, ಸಾಂಸ್ಕೃತಿಕ ಜಗತ್ತನ್ನು ಪರಿಚಯಿಸಿದ ಆ ಮಧುರ ನೆನಪುಗಳು, ಈ ಕಪ್ಪು ಬಿಳುಪಿನ ಫೋಟೊದೊಂದಿಗೆ ನನ್ನಲ್ಲಿ ಭದ್ರವಾಗಿದೆ. ರಾಜ್ಯೋತ್ಸವದ ಕಾರ್ಯಕ್ರಮ ಮುಗಿಸಿಕೊಂಡು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮೊಟ್ಟಮೊದಲ ಸ್ಟುಡಿಯೋ ವೆಂಕೋಬರಾವ್ ಅವರ ಡೀಲಕ್ಸ್ ಫೋಟೊ ಸ್ಟುಡಿಯೋದಲ್ಲಿ ಈ ಫೋಟೊ ತೆಗೆಸಿದ್ದು ನೆನಪಿದೆ” ಎಂದು ಚಿಂತಾಮಣಿ ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷ ಮು.ಪಾಪಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT