ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ಗೆ ದಿನಗಣನೆ, ಗರಿಗೆದರಿದ ಕನಸುಗಳು

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರತ್ತ ಜಿಲ್ಲೆಯ ಜನರ ಚಿತ್ತ, ಈ ಬಾರಿಯಾದರೂ ಬಯಲುಸೀಮೆ ಜಿಲ್ಲೆಯ ಜನರ ಬವಣೆ ಕಳೆಯುವುದೆ ಎನ್ನುವ ಕಾತರ
Last Updated 29 ಫೆಬ್ರುವರಿ 2020, 19:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಅತ್ತ ರಾಜಧಾನಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯ ಬಜೆಟ್‌ ಮಂಡಿಸಲು ಕಸರತ್ತು ನಡೆಸಿದ್ದರೆ, ಇತ್ತ ಜಿಲ್ಲೆಯ ಜನರಲ್ಲಿ ಹೊಸ ಕನಸುಗಳು ಗರಿಗೆದರುತ್ತಿವೆ. ಪ್ರಸಕ್ತ ಬಜೆಟ್‌ನಲ್ಲಿ ಯಡಿಯೂರಪ್ಪ ಅವರು ಜಿಲ್ಲೆಗೆ ಏನೆಲ್ಲ ಕೊಡುಗೆಗಳನ್ನು ಕೊಡಬಹುದು ಎನ್ನುವ ಲೆಕ್ಕಾಚಾರ ಅಲ್ಲಲ್ಲಿ ಜೋರಾಗಿ ನಡೆದಿದೆ.

ಪ್ರತಿ ರಾಜ್ಯ ಬಜೆಟ್‌ನಲ್ಲಿ ನಮ್ಮ ಜಿಲ್ಲೆಗೆ ಏನೆಲ್ಲ ದಕ್ಕುತ್ತದೆ ಎಂದು ಚಾತಕ ಪಕ್ಷಿಯಂತೆ ಕಾಯ್ದು ನೋಡುವ ಜಿಲ್ಲೆಯ ಜನರಿಗೆ ಆಯ್ಯವ್ಯಯಗಳು ನಿರಾಸೆ ಮೂಡಿಸಿದ್ದೇ ಹೆಚ್ಚು. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುಗೊಂಡು 12 ವರ್ಷಗಳು ಪೂರೈಸಿದರೂ ಜಿಲ್ಲೆಯೊಂದಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ಈವರೆಗೆ ಸಿಕ್ಕಿಲ್ಲ. ಈ ಬಜೆಟ್‌ನಲ್ಲಾದರೂ ನಮ್ಮ ಕನಸುಗಳು ಕೈಗೂಡಿವೆಯೇ ಎನವ ಆಸೆ ಈ ಬಯಲು ಸೀಮೆ ಜಿಲ್ಲೆಯ ಜನರದು.

ಸದಾ ಅಭಿವೃದ್ಧಿಯ ಕನವರಿಕೆಯಲ್ಲಿಯೇ ಇರುವ ಜಿಲ್ಲೆಯ ಜನರು ‘ಶಾಶ್ವತ ನೀರಾವರಿ’ ಎನ್ನುವ ಪದವನ್ನು ನಿದ್ದೆಯಲ್ಲೂ ಬಡಬಡಿಸುತ್ತಾರೆ. 1,500 ಅಡಿ ಕೊರೆದರೂ ಜೀವಜಲ ಉಕ್ಕದ ಈ ಭಾಗಕ್ಕೆ ತುರ್ತಾಗಿ ಶಾಶ್ವತವಾಗಿ ನೀರು ಒದಗಿಸುವ ಯೋಜನೆ ಬೇಕು ಎನ್ನುವುದು ಪಕ್ಷಾತೀತವಾಗಿ ಎಲ್ಲರ ಒತ್ತಾಯ.

ಈ ಭಾಗಕ್ಕೆ ಎತ್ತಿನಹೊಳೆ ಯೋಜನೆ ಅಡಿ ನೀರು ಹರಿಸುವ ಯೋಜನೆ ರೂಪು ತಳೆದು ಸುಮಾರು ಎಂಟು ವರ್ಷಗಳೇ ಕಳೆದಿವೆ. ಆದರೆ ಜಿಲ್ಲೆಯಲ್ಲಿ ಈವರೆಗೆ ಎತ್ತಿನಹೊಳೆ ಯೋಜನೆಗೆ ಸಂಬಂಧಪಟ್ಟಂತೆ ಒಂದೇ ಒಂದು ಇಂಚು ಭೂಸ್ವಾಧೀನ ಪ್ರಕ್ರಿಯೆಯಾಗಲಿ, ಒಂದೇ ಒಂದು ನಯಾಪೈಸೆ ಕಾಮಗಾರಿ ಕೂಡ ನಡೆದಿಲ್ಲ.

ಎತ್ತಿನಹೊಳೆ ಯೋಜನೆಗಾಗಿ ಕಳೆದ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಣೆಯಾಗಿಲ್ಲ. ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಬಯಲು ಸೀಮೆಯ ಮೂರು ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಎಚ್.ಎನ್.ವ್ಯಾಲಿ ಯೋಜನೆಗೆ ಮುಖ್ಯವಾಗಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕು ಎನ್ನುವುದು ಬಹುತೇಕರ ಆಗ್ರಹ. ಕಳೆದ ಬಜೆಟ್‌ನಲ್ಲಿ ಸಹ ಅದು ಪ್ರಸ್ತಾಪವಾಗಲಿಲ್ಲ. ಅದರ ನಡುವೆಯೇ ಈಗಾಗಲೇ ಚಿಕ್ಕಬಳ್ಳಾಪುರದ ಕಂದವಾರ ಕೆರೆಗೆ ಎಚ್.ಎನ್.ವ್ಯಾಲಿ ನೀರು ಪರೀಕ್ಷಾರ್ಥ ಮಾತ್ರ ಹರಿದು ಸ್ಥಗಿತಗೊಂಡಿದೆ.

ಈ ಬಜೆಟ್‌ನಲ್ಲಿ ಮುಖ್ಯವಾಗಿ ಜಿಲ್ಲೆಗೆ ನೀರುಣಿಸುವ ಈ ಎರಡು ಪ್ರಮುಖ ಯೋಜನೆಗಳ ಕುರಿತು ಸರ್ಕಾರದ ಧೋರಣೆ ಏನಾಗಿದೆ ಎನ್ನುವ ಕುತೂಹಲ ಸದ್ಯ ಹೋರಾಟಗಾರರು ಮತ್ತು ರಾಜಕಾರಣಿಗಳಲ್ಲಿ ಮನೆ ಮಾಡಿದೆ.

‘ಅನೇಕ ಸರ್ಕಾರಗಳು, ಬಜೆಟ್‌ಗಳನ್ನು ನೋಡಿದರೂ, ಈವರೆಗೆ ಈ ಭಾಗಕ್ಕೆ ಸುರಕ್ಷಿತ ಕುಡಿಯುವ ನೀರು, ಕೃಷಿಗೆ ನೀರು ಒದಗಿಸುವ ಕೆಲಸವನ್ನು ಯಾರೊಬ್ಬರೂ ಮಾಡಲಿಲ್ಲ. ಬಯಲು ಸೀಮೆ ಜಿಲ್ಲೆಗಳ ನೀರು, ನೀರಾವರಿ ವಿಚಾರದಲ್ಲಿ ಇನ್ನಾದರೂ ಹೊಸ ಚಿಂತನೆಗಳು ಆರಂಭವಾಗಬೇಕಿದೆ. ನಮಗೆ ಸಮರ್ಪಕವಾಗಿ ನೀರು ಹರಿಸಬೇಕಾದರೆ ಸರ್ಕಾರ ಪರಮಶಿವಯ್ಯ ಅವರ ವರದಿ ಅನುಷ್ಠಾನದ ಕಡೆಗೆ ಗಮನ ಕೊಡಬೇಕು’ ಎನ್ನುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ.

‘40 ವರ್ಷಗಳಿಂದ ಜಿಲ್ಲೆಗೆ ನೀರಾವರಿ ವಿಚಾರದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಈಗಲಾದರೂ ವೈಜ್ಞಾನಿಕ ಹೆಜ್ಜೆಗಳನ್ನು ಇಡಬೇಕು. ಅಂತರ್ಜಲ ಅತಿ ಬಳಕೆಯಿಂದ ಆಗುತ್ತಿರುವ ಅನಾಹುತ ತಪ್ಪಿಸಲು ಅಂತರ್ಜಲ ಅಭಿವೃದ್ಧಿಗೆ ವಿದೇಶಗಳ ಮಾದರಿಯಲ್ಲಿ ವೈಜ್ಞಾನಿಕ ವ್ಯವಸ್ಥೆ ಜಾರಿಗೆ ನೀಲನಕ್ಷೆ ತಯಾರಿಸಿ, ಅದಕ್ಕೆ ಹಣ ಮೀಸಲಿಡಬೇಕು. ರೈತರು ಹಣ ಹಾಕಿ ಕೊರೆಯಿಸಿದ ಲಕ್ಷಾಂತರ ಕೊಳವೆಬಾವಿಗಳು ವಿಫಲವಾಗಿವೆ. ಇವುಗಳ ವೈಜ್ಞಾನಿಕ ಅಧ್ಯಯನ ನಡೆಸಿ, ಸಾಮೂಹಿಕ ಮರುಪೂರಣ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಹೇರಳವಾಗಿ ಬೆಳೆಯುವ ಹೂವು, ಹಣ್ಣು, ತರಕಾರಿಗಳು ಆಗಾಗ ಬೆಲೆ ಕಳೆದುಕೊಂಡು ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಸರ್ಕಾರ ಬೃಹತ್ ಶೈತ್ಯಾಗಾರ ನಿರ್ಮಿಸಬೇಕು. ನಮಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರದಲ್ಲಿಯೇ ಇರುವುದರಿಂದ ಬಯಲು ಸೀಮೆಯ ಕೃಷಿ ಉತ್ಪನ್ನಗಳನ್ನು ವಿದೇಶಗಳಿಗೆ ಸುಲಭವಾಗಿ ರಫ್ತು ಮಾಡಲು ಅನುಕೂಲವಾಗುವಂತೆ ವಿಶೇಷ ರಫ್ತು ನೀತಿ ಜಾರಿಗೆ ತರುವ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸುವ ಕೆಲಸವಾಗಬೇಕಿದೆ’ ಎನ್ನುತ್ತಾರೆ ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ.

ಶಿಡ್ಲಘಟ್ಟದಲ್ಲಿ ಜವಳಿ ಪಾರ್ಕ್‌ ಸ್ಥಾಪನೆಯ ಭರವಸೆ ಏಳು ವರ್ಷಗಳು ಕಳೆದರೂ ಇಂದಿಗೂ ಈಡೇರಿಲ್ಲ. ಜಿಲ್ಲಾ ಕೇಂದ್ರದಲ್ಲಿ ತಲೆ ಎತ್ತಬೇಕಾದ ಬಟಾನಿಕಲ್‌ ಪಾರ್ಕ್‌ ಗಾಜಿನ ಮನೆಗೆ ಸೀಮಿತಗೊಂಡು ಹಾಳುಕೊಂಪೆಯ ಸ್ವರೂಪದಲ್ಲಿಯೇ ಉಳಿದಿದೆ. ಹೂಳು, ಅತಿಕ್ರಮಣದಿಂದ ನಲುಗಿರುವ ಜಿಲ್ಲೆಯ ಕೆರೆ, ಕುಂಟೆಗಳು, ಕಾಲುವೆಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್‌ ಎದುರು ನೋಡುತ್ತಿದ್ದವರಿಗೆ ಕಳೆದ ಬಜೆಟ್‌ ನಿರಾಶೆಯ ಛಾಯೆ ಮೂಡಿಸಿದೆ. ಹವಾಮಾನ ಮುನ್ಸೂಚನಾ ಕೇಂದ್ರ ತೆರೆದರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎನ್ನುವ ಬೇಡಿಕೆ ಕೂಡ ಕೇಳಿ ಬರುತ್ತಿದೆ. ಈ ಎಲ್ಲ ವಿಚಾರಗಳಲ್ಲಿ ಎಷ್ಟು ಈಡೇರಲಿವೆ ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ.

ಕಳೆದ ವರ್ಷ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ₹100 ಕೋಟಿ, ಬಾಗೇಪಲ್ಲಿಯ ಪಾತಪಾಳ್ಯದ ಗಂಟ್ಲಮಲ್ಲಮ್ಮ ಕಣಿವೆ ಬಳಿ ಆಣೆಕಟ್ಟು ನಿರ್ಮಾಣಕ್ಕೆ ₹20 ಕೋಟಿ, ಹೊಸ ಕ್ರೀಡಾ ವಸತಿ ಶಾಲೆ ಆರಂಭ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್‌ಗಳ ಪತ್ತೆ ಮಾಡುವ ಯಂತ್ರಗಳ ಮಂಜೂರು ಮಾಡುವ ಜತೆಗೆ ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಹೋಬಳಿ ಕೇಂದ್ರವನ್ನು ಹೊಸ ತಾಲ್ಲೂಕು ಆಗಿ ಘೋಷಣೆ ಮಾಡಿದ್ದರು. ಈ ಬಾರಿ ಯಡಿಯೂರಪ್ಪ ಅವರು ಜಿಲ್ಲೆಗೆ ಹೊಸತಾಗಿ ಏನೆಲ್ಲ ಘೋಷಿಸುತ್ತಾರೆ ಎನ್ನುವುದು ಶೀಘ್ರದಲ್ಲಿಯೇ ಬಯಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT