ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಗುರುವಾರ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟವು ಪ್ರತಿಭಟನೆ ನಡೆಸಿತು.
ದಲಿತ ಸಮುದಾಯದ ಯುವಕಾಂಗ್ರೆಸ್ ಮುಖಂಡ ಜಗದೀಶ್, ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಶಾಸಕರು ಧಮ್ಕಿ ಹಾಕಿದ್ದಾರೆ. ಜಗದೀಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ದೂರಿದರು.
ಒಕ್ಕೂಟದ ಮುಖಂಡ ನಾರಾಯಣ ಸ್ವಾಮಿ ಮಾತನಾಡಿ, ಪ್ರದೀಪ್ ಈಶ್ವರ್ ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರ ಮತ ಪಡೆದು ಗೆಲುವು ಸಾಧಿಸಿದ್ದಾರೆ. ಆದರೆ ಈಗ ದಲಿತ ಮುಖಂಡರ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ನಾನು ಬಡವರ ಮಗ, ದಲಿತರ ಮಗ ಎನ್ನುತ್ತಾರೆ. ಆದರೆ ಎರಡು ಕೋಟಿ ಬೆಲೆಯ ಕಾರು ಅವರ ಬಳಿ ಇದೆ. ನಮ್ಮ ಸಮುದಾಯದವರಿಗೆ ಓಡಾಡಲು ಸರಿಯಾದ ಬೈಕ್ ಗಳೇ ಇಲ್ಲ ಎಂದರು.
ಇವರ ದುರಹಂಕಾರದ ಮಾತಿನಿಂದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿತು. ನಗರಸಭೆ ಚುನಾವಣೆಯಲ್ಲಿ ಸೋತರು. ಗ್ರಾಮಗಳಲ್ಲಿ ರಸ್ತೆಗಳು ಇಲ್ಲ. ಆದರೆ ಬರಿ ಮಾತನಾಡುತ್ತಾರೆ. ಕೆಲಸಗಳನ್ನು ಮಾಡುತ್ತಿಲ್ಲ ಎಂದು ದೂರಿದರು.
ಪರಿಶಿಷ್ಟ ರಿಂದಲೇ ಅವರು ಗೆದ್ದಿರುವುದು. ನಾವು ಪ್ರತಿಭಟನೆಗೆ ಅಳವಡಿಸಿರುವ ಬ್ಯಾನರ್ ನಲ್ಲಿ ಅವರ ಶಾಸಕರ ಹೆಸರು ಇದೆ. ಪೊಲೀಸರ ಮೇಲೆ ಒತ್ತಡ ಹಾಕಿ ಬ್ಯಾನರ್ ನಲ್ಲಿ ಹೆಸರು ತೆಗೆಸುತ್ತಾರೆ ಎಂದು ಕಿಡಿಕಾರಿದರು.