ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕಾಲಿನ ನ್ಯೂನತೆಯಲ್ಲೂ ಊನವಾಗದ ಕೃಷಿಕ

15 ವರ್ಷದಿಂದ ಹಿಪ್ಪುನೇರಳೆ ಕೃಷಿ
Last Updated 12 ಫೆಬ್ರುವರಿ 2021, 2:30 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಸ.ರಘುನಾಥರ ‘ನಾನು ಕುಂಟಿದರೂ ದಾರಿ ಕುಂಟುವುದಿಲ್ಲ’ ಎಂಬ ಕವನದ ಸಾಲಿನಂತೆ ಕೈ, ಕಾಲು ಮತ್ತು ಬಾಯಿ ಊನವಾದರೂ ಸ್ವಾಭಿಮಾನದಿಂದ ದುಡಿದು ಬದುಕುವ ಛಲವನ್ನು ಹೊಂದಿದ್ದಾರೆ ಶಿಡ್ಲಘಟ್ಟ ತಾಲ್ಲೂಕಿನ ವರದನಾಯಕನಹಳ್ಳಿಯ ಗಂಗಾಧರ.

15 ವರ್ಷಗಳ ಹಿಂದೆ ಪಾರ್ಶ್ವವಾಯುವಿನ ಹೊಡೆತಕ್ಕೆ ಸಿಲುಕಿ ಒಂದು ಕೈ ಸ್ವಾಧೀನ ಕಳೆದುಕೊಂಡರು ಗಂಗಾಧರ. ಅದರೊಂದಿಗೆ ಒಂದು ಕಾಲು ಕೂಡ ಸೊಟ್ಟಗಾಯಿತು. ಮಾತು ನಿಂತಿತು. ಇಷ್ಟೆಲ್ಲಾ ನ್ಯೂನತೆಗಳಿದ್ದರೂ ಅವರಲ್ಲಿನ ರೈತ ಊನಗೊಳ್ಳಲಿಲ್ಲ.

ತಮ್ಮ ಪಾಲಿಗೆ ಬಂದಿರುವ ಒಂದು ಎಕರೆ ಭೂಮಿಯಲ್ಲಿ ಹಿಪ್ಪುನೇರಳೆ ಸೊಪ್ಪನ್ನು ಬೆಳೆಯುತ್ತಾರೆ. ಒಂದು ಕೈಯಲ್ಲೇ ಹನಿ ನೀರಾವರಿ ಸರಿಪಡಿಸುವುದು, ಗೊಬ್ಬರ ಹಾಕುವುದು, ಚನಿಕೆ ಹಿಡಿದು ಕೆಲಸ ಮಾಡುತ್ತಾರೆ. ಹಿಂದೆ ಕುರಿಗಳನ್ನು ಸಹ ಸಾಕುತ್ತಿದ್ದ ಇವರು ಈಚೆಗೆ ನಿಲ್ಲಿಸಿದ್ದಾರೆ. ಮೌನವಾಗಿಯೇ ತಮ್ಮ ಎಲ್ಲಾ ಕೆಲಸಗಳನ್ನೂ ಸಹ ಶ್ರದ್ಧೆಯಿಂದ ಮಾಡುತ್ತಾರೆ.

ಕಾಲೇಜಿಗೆ ಹೋಗುವ ಮಗಳು ಮೌನಿಕ ಮತ್ತು ಹೆಂಡತಿ ಮುನಿಆಂಜಿನಮ್ಮ ಸಾಧ್ಯವಾದಷ್ಟು ಇವರಿಗೆ ನೆರವಾಗುತ್ತಾರೆ. ಒಂದೆಕರೆ ಭೂಮಿ ಮಾತ್ರ ಜೀವನಕ್ಕೆ ಆಸರೆ. ಹಾಗಾಗಿ ಕೃಷಿ ಹೊಂಡವೊಂದನ್ನು ನಿರ್ಮಿಸಿಕೊಂಡರೆ ಬೇಸಿಗೆಯಲ್ಲಿ ಸಹ ಬೆಳೆ ಚೆನ್ನಾಗಿ ಬೆಳೆಯಬಹುದು ಎಂದು ಸನ್ನೆ ಮಾತಿನಲ್ಲೇ ಹೇಳುತ್ತಾರೆ ಗಂಗಾಧರ.

‘ನಾವು ಚಿಕ್ಕಂದಿನಲ್ಲಿ ಗಂಗಾಧರ ಅವರ ಕ್ರಾಂತಿ ಗೀತೆಗಳನ್ನು ಹಾಡುವುದನ್ನು ಕೇಳುತ್ತಿದ್ದೆವು. ಅದರಿಂದ ಸ್ಫೂರ್ತಿ ಹೊಂದುತ್ತಿದ್ದೆವು. ಈಗವರು ಸದಾ ಮೌನವಾಗಿ ಕೈಕಾಲು ಊನವಾಗಿದ್ದರೂ ಕೆಲಸ ಮಾಡುವುದನ್ನು ನೋಡುತ್ತೇವೆ. ಈಗಲೂ ಇವರು ತಮ್ಮ ಕಾಯಕ ನಿಷ್ಠೆಯಿಂದ ನಮಗೆಲ್ಲಾ ಸ್ಫೂರ್ತಿಯಾಗಿದ್ದಾರೆ. ಇವರು ಬೆಳೆಯುವ ಸೊಪ್ಪಿಗೆ ಅಧಿಕಾರಿಗಳು ಉತ್ತಮ ಬೆಲೆ ಕೊಡಿಸುವ ಮೂಲಕ ನೆರವಾಗಬೇಕು. ವಿವಿಧ ಸಂಘಟನೆಗಳು ಈ ರೀತಿಯ ಎಲೆಮರೆಯ ಕಾಯಿಯಂತಹವರನ್ನು ಗುರುತಿಸಿ ಗೌರವಿಸಿ ನೆರವಾಗಬೇಕು’ ಎನ್ನುತ್ತಾರೆ ವರದನಾಯಕನಹಳ್ಳಿಯ ಈಧರೆ ತಿರುಮಲ ಪ್ರಕಾಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT