ಬುಧವಾರ, ಏಪ್ರಿಲ್ 21, 2021
31 °C
ಕರ್ನಾಟಕ ಪಬ್ಲಿಕ್‌ ಶಾಲೆಗೆ ಶಾಸಕ ಶಿವಶಂಕರರೆಡ್ಡಿ ಭೇಟಿ

ಮಕ್ಕಳ ಭವಿಷ್ಯಕ್ಕೆ ಸರ್ಕಾರಿ ಶಾಲೆ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ತಾಲ್ಲೂಕಿನ ಡಿ. ಪಾಳ್ಯದಲ್ಲಿನ ಕರ್ನಾಟಕ ‌ಪಬ್ಲಿಕ್ ಶಾಲೆಗೆ ಶಾಸಕ ಎನ್‌.ಎಚ್. ಶಿವಶಂಕರರೆಡ್ಡಿ ಶನಿವಾರ ಭೇಟಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿ 10ನೇ ತರಗತಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಇದೇ ವೇಳೆ ಶಾಲೆಯ ವಿದ್ಯಾರ್ಥಿಗಳು ಸ್ಥಳೀಯ ‌ಸಮಸ್ಯೆ ಹಾಗೂ ಶೈಕ್ಷಣಿಕ ಪ್ರಗತಿಗೆ ಆಸರೆಯಾಗುವ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಶಾಸಕ ಶಿವಶಂಕರರೆಡ್ಡಿ ‌ಮಾತನಾಡಿ, ಗ್ರಾಮೀಣ ‌ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಬಗ್ಗೆ ಜನರಿಗೆ ಪ್ರೀತಿ, ವಿಶ್ವಾಸ ಮತ್ತು ನಂಬಿಕೆ ಇದೆ. ಇದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರ ಮೇಲಿದೆ‌. ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಖ್ಯಾತಿ ಹೊಂದಿದ ಸಾಕಷ್ಟು ಮಂದಿ ಸಾಧಕರು ಸರ್ಕಾರಿ ಶಾಲೆಯಲ್ಲಿಯೇ ಓದಿ ಬೆಳೆದವರು. ಇತ್ತೀಚೆಗೆ ಪೋಷಕರಲ್ಲಿ ಇಂಗ್ಲೀಷ್ ಕಲಿಕೆಯ ವ್ಯಾಮೋಹ ಹಾಗೂ ಖಾಸಗೀ ಶಾಲೆಗಳ ವೈಭವೀಕರಣದಿಂದ ಸರ್ಕಾರಿ ಶಾಲೆಗಳ ಅಸ್ತಿತ್ವ ಕಡಿಮೆಯಾಗುತ್ತಿದೆ ಎಂದರು.

ಸರ್ಕಾರಿ ಶಾಲೆಗಳು ಗ್ರಾಮೀಣ ‌ಪ್ರತಿಭೆಗಳನ್ನು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ‌ಮಟ್ಟಕ್ಕೆ ಬೆಳೆಸಲು ಭದ್ರ ಬುನಾದಿಯಾಗಿವೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯಲ್ಲಿ ಓದುವ ಪ್ರತಿಯೊಬ್ಬರೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣದ ಜತೆಗೆ ಭವಿಷ್ಯ ರೂಪಿಸಿಕೊಳ್ಳುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಈ ಶಾಲೆಗಳಲ್ಲಿ ಓದಿದ ಪ್ರತೀ ವಿದ್ಯಾರ್ಥಿಗೆ ಸರ್ಕಾರಿ ಕೆಲಸ ಸಿಗುತ್ತದೆ ಎಂಬ ನಂಬಿಕೆ ಇಲ್ಲ. ಆದರೆ ನಿಮ್ಮಲ್ಲಿನ ಬುದ್ಧಿಶಕ್ತಿಗೆ ಅನುಗುಣವಾಗಿ ಶಾಲಾ, ಕಾಲೇಜು ಹಂತದಿಂದಲೇ ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕಾಗಿದೆ. ಇದಕ್ಕಾಗಿ ಶಾಲೆಯಲ್ಲಿ ಬೇಕಾಗುವ ಸೌಲಭ್ಯಗಳನ್ನು ಕಲ್ಪಿಸಲು ನಾವು ಬದ್ಧರಿದ್ದೇವೆ. ನಿಮ್ಮ ಉತ್ತಮ ಶಿಕ್ಷಣದಿಂದ ಜನ್ಮ ನೀಡಿದ ಪೋಷಕರು ಹಾಗೂ ಅಕ್ಷರ ಕಲಿಸಿದ ಗುರುಗಳಿಗೆ ಗೌರವ ತರುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಬಳಿಕ ಕರ್ನಾಟಕ ಪಬ್ಲಿಕ್ ಶಾಲೆಯ ಆಡಳಿತ ಮೇಲುಸ್ತುವಾರಿ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಕಾರ್ಯ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದರು. ಬಳಿಕ ಶಾಲೆ ಮತ್ತು ಕಾಲೇಜು ಆಡಳಿತ ಮಂಡಳಿಯಿಂದ ಶಾಸಕರನ್ನು ಅಭಿನಂದಿಸಲಾಯಿತು.

ಶಾಲಾ ಮಕ್ಕಳಿಗೆ ಅವಶ್ಯಕವಿರುವ ಶುದ್ಧ ಕುಡಿಯುವ ‌ನೀರು ಘಟಕ, ಬೋರ್‌ವೆಲ್ ವ್ಯವಸ್ಥೆ, ರಂಗಮಂದಿರ ನಿರ್ಮಾಣ ಸೇರಿದಂತೆ ಇನ್ನಿತರ ಅಭಿವೃದ್ಧಿ ‌ಕಾರ್ಯಗಳನ್ನು ಶೀಘ್ರದಲ್ಲೇ ಶಾಸಕರ ಹಾಗೂ ಜಿ.ಪಂ ಅನುದಾನದಲ್ಲಿ ಮಾಡಿಸುವ ಭರವಸೆಯನ್ನು ಶಾಸಕರು‌ ನೀಡಿದರು.

ಪ್ರಾಂಶುಪಾಲರಾದ ಕೆ. ಸತ್ಯೇಂದ್ರ, ಜಿ.ಪಂ ಸದಸ್ಯೆ ಎ.ಅರುಂಧತಿ ಅಶ್ವತ್ಥಪ್ಪ, ಗ್ರಾ.ಪಂ ಅಧ್ಯಕ್ಷೆ ವಾಣಿ ಮಂಜುನಾಥ್, ವೈದ್ಯಾಧಿಕಾರಿ ಡಾ.ಸತೀಶ್, ಮುಖ್ಯಶಿಕ್ಷಕ ಬಿ.ಕೆ. ರಾಜು, ಪಿಡಿಒ ಎಂ.ಎಸ್. ವಿಜಯಲಕ್ಷ್ಮಿ, ಉಪನ್ಯಾಸಕರಾದ ಎಸ್. ಇಂದ್ರಾಣಿ, ಎಂ.ಎನ್. ಶಶಿಧರ್, ಜಿ. ಭ್ರಮರಾಂಭ, ಚಿನ್ನಪ್ಪರೆಡ್ಡಿ, ನಾಗರಾಜ್, ಕೆ.ಎಸ್. ಮಂಜುನಾಥ್, ವೈ.ಎನ್. ಚೌಡೇಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.