ಭಾನುವಾರ, ಅಕ್ಟೋಬರ್ 24, 2021
20 °C

ಬಾಗೇಪಲ್ಲಿ: ಭಾರಿ ಮಳೆಗೆ ಉರುಳಿ ಬಿದ್ದ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ, ಶನಿವಾರ ಬೆಳಿಗ್ಗೆ ಭಾರಿ ಮಳೆ ಆಗಿದ್ದು, ಮಾಡಪ್ಪಲ್ಲಿ ಗ್ರಾಮದಲ್ಲಿ ಮನೆ ಕುಸಿತಗೊಂಡಿದೆ. ಮನೆಯಲ್ಲಿದ್ದ ವೃದ್ಧ ದಂಪತಿ ಪಾರಾಗಿದ್ದು, ದೇವಿಕುಂಟೆ ಗ್ರಾಮದ ಸೇತುವೆ ಕುಸಿತವಾಗಿ ಬಸ್ ಸಿಲುಕಿದೆ. ತಗ್ಗಿನ ಪ್ರದೇಶಗಳು, ರಸ್ತೆ, ಚರಂಡಿ ಜಲಾವೃತಗೊಂಡು, ಜನ ಜೀವನ ಅಸ್ತವ್ಯಸ್ಥವಾಗಿದೆ.

ತಾಲ್ಲೂಕಿನ ಮಾಡಪ್ಪಲ್ಲಿ ಗ್ರಾಮದಲ್ಲಿ ಮಳೆ ಹೆಚ್ಚಾಗಿದೆ. ಗ್ರಾಮದ ವೃದ್ಧ ದಂಪತಿ ಪೆದ್ದಮದ್ದಿಗೀರಪ್ಪ, ಲಕ್ಷ್ಮಮ್ಮ ಎಂಬುವವರ ಹಳೇ ಮನೆಯ ಚಾವಣಿ ಕುಸಿದಿದೆ. ಸಿಮೆಂಟ್ ಪದರ, ಕಲ್ಲುಗಳು ಉರುಳಿದ್ದರಿಂದ ಮನೆಯಲ್ಲಿದ್ದ ವಸ್ತುಗಳು ಜಖಂ ಆಗಿದೆ. 

ತಾಲ್ಲೂಕಿನ ದೇವಿಕುಂಟೆ ಗ್ರಾಮಕ್ಕೆ ಸಂಚರಿಸುವ ಮಾರ್ಗದ ರಸ್ತೆಯಲ್ಲಿ ಭಾರಿ ಮಳೆಗೆ ಮೇಲುಸೇತುವೆ ಕುಸಿದಿರುವುದರಿಂದ, ಕೆಎಸ್‍ಆರ್‌ಟಿಸಿ ಬಸ್ ಸಿಲುಕಿಕೊಂಡಿತ್ತು. ಇದರಿಂದ ಗ್ರಾಮದಿಂದ ಮಾರ್ಗಾನುಕುಂಟೆಗೆ ಸೇರಿದಂತೆ ಬಾಗೇಪಲ್ಲಿಗೆ ಬರಲು ಬಸ್ ಹಾಗೂ ವಾಹನಗಳ ಸಂಚಾರ ಕಡಿತ ಆಗಿದೆ. ಕೂಡಲೇ ಅಧಿಕಾರಿಗಳು ಕುಸಿದಿರುವ ಮೇಲುಸೇತುವೆ ಹಾಗೂ ರಸ್ತೆ ಕಾಮಗಾರಿ ಮಾಡಿಸಿ, ಜನರ ಸಂಚಾರಕ್ಕೆ ಅನುವು ಮಾಡಬೇಕು ಎಂದು ದೇವಿಕುಂಟೆ ಗ್ರಾಮಸ್ಥರಾದ ಡಿ.ಸಿ.ಶ್ರೀನಿವಾಸ್, ಮುರಳಿ, ಶಬ್ಬೀರ್ ಬಾಬಾ, ಸಂತೋಷ್ ಕುಮಾರ್, ಬಾಬು, ರಾಜ, ರಿಯಾಜ್, ಗಪೂರ್ ಮನವಿ ಮಾಡಿದ್ದಾರೆ.

ತಾಲ್ಲೂಕಿನ ಕೊತ್ತಕೋಟೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕೊಲಿಂಪಲ್ಲಿ, ಜಿಲ್ಲಾಲಪಲ್ಲಿ ಸೇರಿದಂತೆ ಗ್ರಾಮಗಳ ಕೆರೆಗಳು ಕೋಡಿ ಹರಿದಿವೆ. ತಾಲ್ಲೂಕಿನ 5 ಹೋಬಳಿಗಳಲ್ಲಿ ಮಳೆ ಹೆಚ್ಚಾಗಿದ್ದರಿಂದ ತಗ್ಗಿನ ಪ್ರದೇಶಗಳು, ಕೆರೆ, ಕುಂಟೆ, ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹ ಆಗಿದೆ. ಕೆಲ ಕೆರೆಗಳು ತುಂಬಿದ್ದು ಕೋಡಿ ಹರಿಯುವ ಮಟ್ಟದಲ್ಲಿ ಇದೆ. ಉತ್ತಮ ಮಳೆಗೆ ಹೊಲ-ಗದ್ದೆಗಳಲ್ಲಿ ನೀರು ಸಂಗ್ರಹ ಆಗಿದೆ. ಕೃಷಿ ಬೆಳೆಗಳು ತೆನೆ ಬಿಡುವ ಹಂತದಲ್ಲಿ ಇರುವುದರಿಂದ ತೆನೆಗಳು ಹಾಗೂ ತರಕಾರಿ ಬೆಳೆಗಳು ನೆಲಕಚ್ಚಿವೆ. ಪರಂಗಿ, ದ್ರಾಕ್ಷಿ ಹಾಗೂ ಹೂವಿನ ತೋಟಗಳಲ್ಲಿ ತೇವಾಂಶ ಹೆಚ್ಚಾಗಿ ಇರುವುದರಿಂದ, ಫಸಲು ಉತ್ತಮವಾಗಿ ಬರುವ ನಿರೀಕ್ಷೆ ಇಲ್ಲ ಎಂದು ರೈತರು ಹೇಳಿದರು.

ಪಟ್ಟಣದ ಡಾ.ಎಚ್.ಎನ್.ವೃತ್ತ ಮಳೆಗೆ ಜಲಾವೃತ ಆಗಿತ್ತು. ಚರಂಡಿಗಳನ್ನು ಸಮರ್ಪಕವಾಗಿ ಸ್ವಚ್ಛತೆ ಮಾಡದೇ ಇರುವುದರಿಂದ, ಮಳೆಯ ನೀರು ಸಂಗ್ರಹ ಆಗಿ ಕೆರೆಯಂತಾಗಿತ್ತು. ಜನರು, ದ್ವಿಚಕ್ರ ಸೇರಿದಂತೆ ವಾಹನ ಮಾಲೀಕರು ನೀರಿನಲ್ಲಿ ಚಾಲನೆ ಮಾಡಲು ಹರಸಾಹಸ ಮಾಡಿದರು.

ವೃತ್ತದಲ್ಲಿ ಸಂಗ್ರಹ ಆಗಿದ್ದ ನೀರು ಪಕ್ಕದಲ್ಲಿನ ಪೊಲೀಸ್ ವಸತಿ ಗೃಹಗಳಿಗೆ ನುಗ್ಗಿರುವುದರಿಂದ, ಪೊಲೀಸರು, ಕುಟುಂಬದವರು ಮನೆಗಳಿಗೆ ನುಗ್ಗಿದ ನೀರನ್ನು ಹೊರ ಹಾಕಿದರು. ಪೊಲೀಸ್ ವಸತಿ ಗೃಹಗಳ ಸ್ಥಳಕ್ಕೆ ಸರ್ಕಲ್ ಇನ್‌ಸ್ಪೆಕ್ಟರ್ ಡಿ.ಆರ್.ನಾಗರಾಜ ಪರಿಶೀಲನೆ ಮಾಡಿದರು.

ಪಟ್ಟಣದ ಕ್ರೀಡಾಂಗಣವೂ ಮಳೆಯ ನೀರು ಸಂಗ್ರಹ ಆಗಿ ಕೆರೆಯಂತಾಗಿತ್ತು. ಕ್ರೀಡಾಪಟುಗಳು, ವಿದ್ಯಾರ್ಥಿಗಳು ನೀರಿನಲ್ಲಿ ಆಟವಾಡಿದರು. ಪಟ್ಟಣದ ವಾಲ್ಮೀಕಿ, ಅಂಬೇಡ್ಕರ್ ನಗರ ಸೇರಿದಂತೆ ಕೆಲ ಕಡೆಯ ತಗ್ಗಿನ ಪ್ರದೇಶಗಳು ಜಲಾವೃತ ಆಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು