ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಚರ್ಚೆಗೆ ಕಾವೇರಿದ ಸಭೆ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ: ಆದಷ್ಟು ಬೇಗ ಬಾಕಿ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಸೂಚನೆ
Last Updated 27 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕು ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ತಾಲ್ಲೂಕಿನ ದಿಬ್ಬೂರಿನಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ಸಾರ್ವಜನಿಕ ಶೌಚಾಲಯ ನಿರ್ಮಿಸುವ ವಿಚಾರ ಕೆಲ ಕಾಲ ಕಾವೇರಿದ ಚರ್ಚೆಗೆ ಎಡೆ ಮಾಡಿತು.

ಸಭೆಯಲ್ಲಿ ಶೌಚಾಲಯದ ವಿಚಾರ ಪ್ರಸ್ತಾಪಿಸಿದ ಸದಸ್ಯ ಸುಬ್ಬರಾಯಪ್ಪ, ‘ದಿಬ್ಬೂರಿನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಮಹಿಳೆಯರು ಸೇರಿದಂತೆ ಜನರು ಬಾಧೆಪಡುತ್ತಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಪಕ್ಕದಲ್ಲಿಯೇ ಇರುವ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಪಂಚಾಯಿತಿಯ 15 ಸದಸ್ಯರ ಪೈಕಿ 13 ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಬರೀ ಇಬ್ಬರು ಸದಸ್ಯರ ವಿರೋಧಕ್ಕೆ ಮಣಿದು ಅಧಿಕಾರಿಗಳು ಶೌಚಾಲಯ ನಿರ್ಮಾಣ ಕೈಬಿಡಲು ಮುಂದಾಗಿರುವುದು ಎಷ್ಟು ಸರಿ’ ಎಂದು ಸುಬ್ಬರಾಯಪ್ಪ ಗರಂ ಆಗಿ ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಕಾರ್ಯ ನಿರ್ವಹಣಾಧಿಕಾರಿ ಹರ್ಷವರ್ಧನ್, ‘ಶೌಚಾಲಯ ನಿರ್ಮಿಸಲು ಉದ್ದೇಶಿಸಿರುವ ಜಾಗ ಮುಜರಾಯಿ ಇಲಾಖೆಗೆ ಸೇರಿದೆ. ಹೀಗಾಗಿ ಬೇರೊಂದು ಜಾಗದಲ್ಲಿ ಶೌಚಾಲಯ ನಿರ್ಮಿಸುವಂತೆ ಗ್ರಾಮದ ಕೆಲವರು ದೂರು ನೀಡಿದ್ದಾರೆ’ ಎಂದರು.

ಇದರಿಂದ ಕೆರಳಿದ ಸುಬ್ಬರಾಯಪ್ಪ ಜಾಗದ ಪಹಣಿ ಪತ್ರವನ್ನು ಸಭೆಗೆ ಪ್ರದರ್ಶಿಸುತ್ತ, ‘ಶೌಚಾಲಯ ನಿರ್ಮಿಸಲು ಉದ್ದೇಶಿಸಿರುವ ಜಾಗ ಪಂಚಾಯಿತಿಗೆ ಸೇರಿದೆ. ಮುಜರಾಯಿ ಇಲಾಖೆ ಜಾಗ ಬೇರೆ ಇದೆ. ಶೌಚಾಲಯ ನಿರ್ಮಿಸಲು ಗುರುತಿಸಿರುವ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಪೆಟ್ಟಿಗೆ ಅಂಗಡಿ ಇಟ್ಟಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಅದನ್ನು ತೆರವುಗೊಳಿಸಲು ಮುಂದಾಗದೆ, ಶೌಚಾಲಯ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ತಾಲ್ಲೂಕು ಪಂಚಾಯಿತಿಯ ಸದಸ್ಯರು ಬೆಂಬಲ ನೀಡುತ್ತೀರಾ? ಇಲ್ಲವೋ ಸ್ಪಷ್ಟಪಡಿಸಿ’ ಎಂದು ಕೇಳಿದರು.

ಈ ವೇಳೆ ಹರ್ಷವರ್ಧನ್ ಮಾತನಾಡಿ, ‘ಗ್ರಾಮ ಪಂಚಾಯಿತಿಗೆ ಸೇರಿದ ಜಾಗದಲ್ಲಿ ಸಮುದಾಯ ಶೌಚಾಲಯ ನಿರ್ಮಿಸಿದರೆ ಕಾನೂನು ಸುವ್ಯವಸ್ಥೆಗೆ ಭಂಗ ಬರಲಿದೆ ಎಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ವರದಿ ನೀಡಿದ್ದಾರೆ’ ಎನ್ನುತ್ತಿದ್ದಂತೆ ಆಕ್ರೋಶಗೊಂಡ ಸುಬ್ಬರಾಯಪ್ಪ, ‘ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯ ನಿರ್ಮಾಣದಿಂದ ಶಾಂತಿಭಂಗವಾಗುತ್ತದೆ ಎಂದರೆ ಹೆಚ್ಚಿನ ಭದ್ರತೆಗೆ ವ್ಯವಸ್ಥೆ ಮಾಡಿ’ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ‘ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಅನುದಾನ ಬಳಕೆಗೆ ಮಾರ್ಚ್‌ ವರೆಗೆ ಕಾಯದೇ ಆದಷ್ಟು ಬೇಗ ಬಾಕಿ ಕೆಲಸಗಳನ್ನು ಅನುಷ್ಟಾನಗೊಳಿಸಬೇಕು. ಆರ್ಥಿಕ ವರ್ಷ ಕೊನೆಗೊಳ್ಳಲು ಇನ್ನು ಬರೀ ಮೂರು ತಿಂಗಳು ಉಳಿದಿದೆ. ಅಷ್ಟರ ಒಳಗೆ ಪ್ರತಿಯೊಬ್ಬರೂ ಉದ್ದೇಶಿತ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು. ಯಾವುದೇ ಕಾರಣಕ್ಕೆ ಸರ್ಕಾರಕ್ಕೆ ಅನುದಾನ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು’ ಎಂದು ಹೇಳಿದರು.

ಸಭೆಗೆ ಮಾಹಿತಿ ನೀಡಿದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ‘ಸದ್ಯ ತಾಲ್ಲೂಕಿನಲ್ಲಿ ಎಂಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈ ಪೈಕಿ ಎರಡು ಗ್ರಾಮಗಳಿಗೆ ಟ್ಯಾಂಕರ್ ಮೂಲಕ, ಉಳಿದ ಆರು ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ವರ್ಷದಲ್ಲಿ ಈವರೆಗೆ 78 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಅವುಗಳಲ್ಲಿ 50 ಕೊಳವೆ ಬಾವಿಗಳು ವಿಫಲವಾಗಿವೆ. 28 ಬಾವಿಗಳಲ್ಲಿ ಮಾತ್ರ ನೀರು ಲಭ್ಯವಾಗಿದೆ’ ಎಂದು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷರು, ‘ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲೆಲ್ಲಿ ಕುಡಿಯುವ ನೀರಿನ ಅನಿವಾರ್ಯತೆ ಇದೆಯೋ ಅಲ್ಲೆಲ್ಲ ತುರ್ತಾಗಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರನ್ನು ಪೂರೈಸಿ. ಅಗತ್ಯ ಇರುವ ಕಡೆಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಿಸಿ ನೀರಿನ ಕೊರತೆ ನೀಗುವ ಕೆಲಸ ಮಾಡಬೇಕು. ಪಶುಪಾಲನಾ ಇಲಾಖೆಯವರು ಮೇವಿನ ಬರ ಕಾಣಿಸಿಕೊಳ್ಳದಂತೆ ಈಗಿನಿಂದಲೇ ಮೇವು ಬೆಳೆಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಮೇವಿನ ಬೀಜಗಳ ಕಿರು ಪೊಟ್ಟಣಗಳನ್ನು ನೀಡುವ ಮೂಲಕ ರೈತರಿಗೆ ಮೇವು ಬೆಳೆಯಲು ಉತ್ತೇಜಿಸಬೇಕು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಇಂದ್ರಮ್ಮ ಅಣ್ಣಯ್ಯಪ್ಪ, ಸದಸ್ಯರಾದ ಸತೀಶ್, ತಿರುಮಳಪ್ಪ, ನಾರಾಯಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT