ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಯಲು ಸೀಮೆಯಲ್ಲಿ ಹಸಿರು ಹೊದ್ದ ಮಾದರಿ ಪ್ರೌಢಶಾಲೆ

Published : 21 ಸೆಪ್ಟೆಂಬರ್ 2024, 6:47 IST
Last Updated : 21 ಸೆಪ್ಟೆಂಬರ್ 2024, 6:47 IST
ಫಾಲೋ ಮಾಡಿ
Comments

ಚಿಂತಾಮಣಿ: ಸರ್ಕಾರಿ ಶಾಲೆಗಳು ಸಾಕಷ್ಟು ಅಭಿವೃದ್ಧಿ ಕಾಣುತ್ತಿವೆ. ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿದ್ದ ಜನರು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಶಾಲೆ ಕಡೆ ಮುಖ ಮಾಡುತ್ತಿದ್ದಾರೆ.

1961ರಲ್ಲಿ ಆರಂಭವಾಗಿರುವ ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತಿದ್ದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ. ಶಾಲೆಯ ಆವರಣದಲ್ಲಿ ವನರಾಶಿ ಕಂಗೊಳಿಸುತ್ತಿದೆ. ನೂರಾರು ಗಿಡ ಮರಗಳು ಕಂಪು ಸೂಸುತ್ತಿವೆ.

ಶಾಲೆ ಆವರಣ 3 ಎಕರೆ 1 ಗುಂಟೆ ಇದೆ. ಕಟ್ಟಡದ ಸುತ್ತಲೂ ವಿಶಾಲ ಮೈದಾನವಿದ್ದು, ಸುತ್ತಲೂ ಆವರಣದ ಗೋಡೆ ಇದೆ. ಶಾಲೆಯ ಮುಂಭಾಗದ ಪ್ರವೇಶ ದ್ವಾರದ ಗೇಟ್‌ನಲ್ಲಿ ಹೆಜ್ಜೆ ಇಟ್ಟರೆ ತಂಪಾದ ವಾತಾವರಣ ಅನುಭವಕ್ಕೆ ಬರುತ್ತದೆ. ಹೂಗಳಿಂದ ಕಂಗೊಳಿಸುತ್ತಿರುವ ಗಿಡಮರಗಳು ವಿದ್ಯಾರ್ಥಿ, ಪೋಷಕರನ್ನು ಕೈಬೀಸಿ ಕರೆಯುತ್ತವೆ.

ಗ್ರಾಮ ಪಂಚಾಯಿತಿಯು 2023-24ನೇ ಸಾಲಿನ ನರೇಗಾ ಯೋಜನೆಯಡಿ ಸುಮಾರು ₹25 ಲಕ್ಷ ವೆಚ್ಚದಲ್ಲಿ ಕಾಂಪೌಂಡ್, ಬಾಸ್ಕೆಟ್ ಬಾಲ್‌ ಕೋರ್ಟ್, ಫುಟ್‌ಪಾತ್, ಶೌಚಾಲಯದ ನವೀಕರಣ ಮತ್ತಿತರ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ಬಯಲುಸೀಮೆಯ ಒಣ ಪರಿಸರದ ಮಧ್ಯೆ ಕಣ್ಣಿಗೆ ಮುದ ನೀಡುವ ರೀತಿಯ ವಾತಾವರಣವಿದೆ.

ಶಾಲೆಯಲ್ಲಿ ಮುಖ್ಯ ಶಿಕ್ಷಕ ಎಂ.ವಿ.ಶ್ರೀನಿವಾಸ್ ಸೇರಿದಂತೆ ಎಲ್ಲ ಶಿಕ್ಷಕರು ಹಸಿರು ಮತ್ತು ಮಕ್ಕಳ ಪ್ರಗತಿಯ ಮೇಲೆ ಆಸಕ್ತಿ ಹೊಂದಿದ್ದಾರೆ. ಅರಣ್ಯ ಇಲಾಖೆ ಹಾಗೂ ಇತರೆಡೆಗಳಿಂದ ಇಷ್ಟವಾದ ಸಸಿ ತರುತ್ತಾರೆ. ಬಿಡುವಿನ ಸಮಯದಲ್ಲಿ ವಿದ್ಯಾರ್ಥಿಗಳ ಸಹಕಾರ ಸಸಿ ನೆಟ್ಟಿದ್ದಾರೆ. ವಿದ್ಯಾರ್ಥಿಗಳು ಬಳಸಿದ ವ್ಯರ್ಥ ನೀರನ್ನು ಹನಿನೀರಾವರಿ ವ್ಯವಸ್ಥೆ ಮೂಲಕ ಗಿಡಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಶಾಲೆಯಲ್ಲಿ 8 ರಿಂದ 10ನೇ ತರಗತಿಯ 220 ವಿದ್ಯಾರ್ಥಿಗಳು ಮತ್ತು 5 ಜನ ಖಾಯಂ ಶಿಕ್ಷಕರು ಮತ್ತು 3 ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ಶ್ರಮ, ಗ್ರಾಮ ಪಂಚಾಯಿತಿ, ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದಲ್ಲಿ ಶಾಲೆ ವನದಂತೆ ಅರಳಿದೆ. ಮರದ ನೆರಳಿನ ಹೊರಾಂಗಣದಲ್ಲಿ ಕಾರ್ಯಕ್ರಮ, ಪಠ್ಯೇತರ ಚಟುವಟಿಕೆ ನಡೆಸುತ್ತಾರೆ.

ಆರ್‌ಎಂಎಸ್ ಯೋಜನೆಯಡಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಹಳೆ ವಿದ್ಯಾರ್ಥಿಗಳ ಸಂಘದಿಂದ ಸುಣ್ಣ-ಬಣ್ಣ ಮತ್ತು ಗೋಡೆಗಳ ಮೇಲೆ ಚಿತ್ರ ಬಿಡಿಸಲಾಗಿದೆ. ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವರ್ಷ-ವರ್ಷವೂ ಮಕ್ಕಳ ದಾಖಲಾತಿ ಇಳಿಮುಖವಾಗುತ್ತಿದೆ. ಆದರೆ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ. ಕಳೆದ 5 ವರ್ಷಗಳಿಂದ ಮಕ್ಕಳ ಸಂಖ್ಯೆ 90 ರಿಂದ 220ಕ್ಕೆ ಏರಿಕೆಯಾಗಿರುವುದು ಶಾಲೆಯು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಉತ್ತಮವಾದ ಕಂಪ್ಯೂಟರ್ ಲ್ಯಾಬ್, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕೈತೋಟ, ಉದ್ಯಾನ, ಕ್ರೀಡಾಂಗಣ ನಿರ್ವಹಿಸಲಾಗಿದೆ. ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸುತ್ತಿದೆ. 2023-24 ನೇ ಸಾಲಿನಲ್ಲಿ ಶೇ 86ರಷ್ಟು ಫಲಿತಾಂಶ ಗಳಿಸಿದೆ. ಶಾಲೆಯಲ್ಲಿ ಮಕ್ಕಳ ಹಾಜರಾತಿ ಉತ್ತಮವಾಗಿದೆ. ಗೈರು ಹಾಜರಾದ ಮಕ್ಕಳ ಮನೆಗೆ ಶಿಕ್ಷಕರೇ ತೆರಳಿ ಪೋಷಕರ ಮನವೊಲಿಸಿ ಕರೆತರುತ್ತಾರೆ.

10ನೇ ತರಗತಿಯ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಶನಿವಾರ, ಭಾನುವಾರ ಮತ್ತು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿ ಹಾಗೂ ರಾತ್ರಿ ಶಾಲೆಯನ್ನು ನಡೆಸಲಾಗುತ್ತಿದೆ.

ಯುನೈಟೆಕ್ ಸ್ವಯಂಸೇವಾ ಸಂಸ್ಥೆಯು ಶೌಚಾಲಯ ನಿರ್ಮಿಸಿಕೊಟ್ಟಿದೆ. ಡಾ.ರಾಜಶೇಖರ್ ಎಂಬುವವರು ಪ್ರತಿ ತಿಂಗಳು ಕಂಪ್ಯೂಟರ್ ಶಿಕ್ಷಕರಿಗೆ ₹10 ಸಾವಿರ ನೀಡುತ್ತಿದ್ದಾರೆ. ಶಿಕ್ಷಕರ ಕೊರತೆಯಾದಾಗ ವಿ.ಎಸ್.ಶ್ರೀನಿವಾಸ್ ಅತಿಥಿ ವಿಜ್ಞಾನ ಶಿಕ್ಷಕರೊಬ್ಬರಿಗೆ 6 ತಿಂಗಳವರೆಗೆ ವೇತನ ನೀಡಿದ್ದರು. ಹೀಗೆ ಶಾಲೆಯ ಅಭಿವೃದ್ಧಿಗಾಗಿ ಸರ್ಕಾರವನ್ನೆ ಅವಲಂಬಿಸದೆ, ಹಳೆಯ ವಿದ್ಯಾರ್ಥಿಗಳು, ಪೋಷಕರು, ದಾನಿಗಳು, ಶಾಲಾಭಿವೃದ್ಧಿ ಸಮಿತಿಯು ಸಹಕಾರ ನೀಡುತ್ತಿದೆ.

ಜಪಾನ್ ಮೂಲದ ಇಟಾಚಿ ಕಂಪನಿ ಶಾಲೆಗೆ ಅಗತ್ಯವಾದ ವಿಜ್ಞಾನ ಉಪಕರಣ, ಕ್ರೀಡಾ ಪರಿಕರ, ಕಂಪ್ಯೂಟರ್‌ ನೀಡಿದೆ. ಗ್ರಾಮಸ್ಥರು, ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯನ್ನು ಅಭಿವೃದ್ಧಿಪಡಿಸಲಾಗಿದೆ
ಆರ್.ವೆಂಕಟರಾಮರೆಡ್ಡಿ, ನಿವೃತ್ತ ಮುಖ್ಯ ಶಿಕ್ಷಕ
ಗ್ರಾಮ ಪಂಚಾಯಿತಿ ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇವೆ.
ಎಂ.ಎಸ್.ಶ್ರೀನಿವಾಸ್, ಮುಖ್ಯ ಶಿಕ್ಷಕ
ಶಾಲೆಯಲ್ಲಿ ಅತ್ಯುತ್ತಮ ವಾತಾವರಣವಿದೆ. ಕಲಿಕೆಗೆ ಅಗತ್ಯವಾದ ಕಂಪ್ಯೂಟರ್ ವಿಜ್ಞಾನ ಪ್ರಯೋಗಾಲಯ ಸ್ಮಾರ್ಟ್ ಕ್ಲಾಸ್ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳಿವೆ.
ಸುಜಿತ್, 10ನೇ ತರಗತಿ
ಶಾಲಾ ವಾತಾವರಣ ಹಸಿರಿನಿಂದ ಕಂಗೊಳಿಸುತ್ತಿದ್ದು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಅತ್ಯುತ್ತಮ ಕಲಿಕೋಪಕರಣಗಳಿಂದ ಶಿಕ್ಷಕರು ಪಾಠ ಮಾಡುತ್ತಾರೆ. ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.
ರಕ್ಷಿತ, 10ನೇ ತರಗತಿ ವಿದ್ಯಾರ್ಥಿನಿ
ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಸರ್ಕಾರಿ ಪ್ರೌಢಶಾಲೆಯ ಬಾಸ್ಕೆಟ್ ಬಾಲ್ ಕ್ರೀಡಾಂಗಣ
ಚಿಂತಾಮಣಿ ತಾಲ್ಲೂಕಿನ ಯಗವಕೋಟೆ ಸರ್ಕಾರಿ ಪ್ರೌಢಶಾಲೆಯ ಬಾಸ್ಕೆಟ್ ಬಾಲ್ ಕ್ರೀಡಾಂಗಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT