ಬುಧವಾರ, ಮೇ 27, 2020
27 °C
ಕೋವಿಡ್‌ ಹುಟ್ಟಿಸಿದ ತಲ್ಲಣದ ನಡುವೆ ಇಕ್ಕಟ್ಟು ತಂದಿಟ್ಟ ‘ಲಾಕ್‌ಡೌನ್’, ಊರು ಸೇರಲು ಹೊರಟ ಕಾರ್ಮಿಕರ ಹೆಣಗಾಟ

ಪ್ರಯಾಣಕ್ಕೆ ಪರದಾಟ, ಊಟಕ್ಕೆ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಮಾರಣಾಂತಿಕ ಕೊರೊನಾ ವೈರಸ್‌ ಸೋಂಕು ಹರಡುವುದು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಮಾರ್ಚ್‌ 31 ರ ವರೆಗೆ ‘ಲಾಕ್‌ಡೌನ್’ ಘೋಷಿಸಿದ್ದರಿಂದ ಸೋಮವಾರ ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆ ಇಲ್ಲದೆ ಜನಸಾಮಾನ್ಯರು ಪರದಾಡಿದರು.

ಭಾನುವಾರದ ಜನತಾ ಕರ್ಫ್ಯೂ ಬೆನ್ನಲ್ಲೇ ಜಾರಿಗೆ ಬಂದ ಲಾಕ್‌ಡೌನ್‌ ಅನುಷ್ಠಾನದಿಂದಾಗಿ ಜಿಲ್ಲೆಯಾದ್ಯಂತ ಸೋಮವಾರ ಜೀವನಾವಶ್ಯಕ ವಸ್ತುಗಳ ಮಾರಾಟ ಮಳಿಗೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ವಾಣಿಜ್ಯ ಚಟುವಟಿಕೆಗಳು ಎರಡನೇ ದಿನವೂ ಸ್ತಬ್ಧಗೊಂಡಿದ್ದವು.

ನಗರ, ಪಟ್ಟಣಗಳಲ್ಲಿ ಬಹುತೇಕ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಕೆಲವೇ ಕೆಲ ಹೋಟೆಲ್‌ಗಳ ಅಡುಗೆ ಕೋಣೆಗಳನ್ನು ತೆರೆದು ಗ್ರಾಹಕರಿಗೆ ಪಾರ್ಸಲ್‌ಗಳನ್ನು ನೀಡಲಾಗುತ್ತಿತ್ತು. ಹೀಗಾಗಿ, ಜನಸಾಮಾನ್ಯರು, ಪರಸ್ಥಗಳಿಂದ ಕೆಲಸಕ್ಕೆ ಬಂದ ಕಟ್ಟಡ ಕಾರ್ಮಿಕರು ಊಟ, ತಿಂಡಿಗಾಗಿ ಪರದಾಡುತ್ತಿದ್ದ ಚಿತ್ರಣ ಗೋಚರಿಸಿತು.

ನಗರದಲ್ಲಿ ಸೋಮವಾರ ದಿನಸಿ, ಹಣ್ಣು, ಹೂವು, ತರಕಾರಿ, ಹಾಲು, ಔಷಧಿ ಮಳಿಗೆ, ಪೆಟ್ರೋಲ್‌ ಬಂಕ್‌ಗಳು ಮಾತ್ರ ಎಂದಿನಂತೆ ವಹಿವಾಟು ನಡೆಸಿದವು. ಉಳಿದ ಎಲ್ಲ ಬಗೆಯ ಮಳಿಗೆಗಳನ್ನು ತೆರೆಯಲು ಪೊಲೀಸರು ಅನುಮತಿಸಲಿಲ್ಲ.

ಜಿಲ್ಲೆಯಲ್ಲಿ ಎರಡನೇ ದಿನವೂ ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳು ರಸ್ತೆಗಿಳಿಯಲಿಲ್ಲ. ಹೀಗಾಗಿ, ಜಿಲ್ಲೆಗೆ ದುಡಿಯಲು ಬಂದ ಹೊರ ಜಿಲ್ಲೆಗಳ ಕಾರ್ಮಿಕರು ಊರಿಗೆ ವಾಪಾಸಾಗಲು ವಾಹನಗಳಿಗಾಗಿ ಲಗೇಜ್‌ಗಳನ್ನು ಹೊತ್ತು ನಗರದಲ್ಲಿ ಆಸೆಗಣ್ಣಿನಿಂದ ಅಲೆದಾಡುತ್ತಿದ್ದ ದೃಶ್ಯಗಳು ಗೋಚರಿಸಿದವು.

ಬಸ್‌ಗಳಿಗಾಗಿ ಕಾಯ್ದು ಸುಸ್ತಾದ ಜನರು ಸಿಕ್ಕ ಸಿಕ್ಕ ವಾಹನಗಳಲ್ಲಿ ಹತ್ತಿ ಪ್ರಯಾಣ ಮುಂದುವರಿಸುತ್ತಿದ್ದರು. ನಗರದಲ್ಲಿ ಸೋಮವಾರ ಆಟೊಗಳಿಗೆ ಬೇಡಿಕೆ ಹೆಚ್ಚಿತ್ತು. ಜನರು ತಮ್ಮ ಕೆಲಸಗಳಿಗಾಗಿ ಬೈಕ್‌, ಕಾರುಗಳನ್ನು ಅವಲಂಬಿಸಿದ್ದರಿಂದ ಖಾಸಗಿ ವಾಹನಗಳ ಓಡಾಟ ಸಾಮಾನ್ಯಕ್ಕಿಂತ ಹೆಚ್ಚಾಗಿ ಕಂಡುಬಂತು.

ಬಟ್ಟೆ ಅಂಗಡಿಗಳು ಬಂದ್‌

ಮಂಗಳವಾರ ಯುಗಾದಿ ಅಮಾವಾಸ್ಯೆ ಹಾಗೂ ಬುಧವಾರ ಯುಗಾದಿ ಹಬ್ಬವಿದ್ದರೂ ಬಟ್ಟೆ ವ್ಯಾಪಾರಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಬೆಳಿಗ್ಗೆ ಕೆಲ ಮಳಿಗೆಗಳು ಬಾಗಿಲು ತೆರೆದವಾದರೂ ಪೊಲೀಸರು ಬಾಗಿಲು ಮುಚ್ಚುವಂತೆ ತಾಕೀತು ಮಾಡಿ, ವಹಿವಾಟು ಬಂದ್‌ ಮಾಡಿಸಿದರು.

ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ತರಹೇವಾರಿ ಸುದ್ದಿಗಳಿಗೆ ಬೆಚ್ಚಿದ ಜನರು ಸೋಮವಾರ ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ದೌಡಾಯಿಸಿ, ಆಹಾರ ಪದಾರ್ಥಗಳು, ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದ ಚಿತ್ರಣ ಕಂಡುಬಂತು.

ಸೋಮವಾರ ಕೂಡ ಮಾರುಕಟ್ಟೆ ಪ್ರದೇಶಗಳನ್ನು ಹೊರತುಪಡಿಸಿದಂತೆ ಉಳಿದಂತೆ ನಗರ, ಪಟ್ಟಣ ಪ್ರದೇಶಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಜನರು ಮನೆಯಲ್ಲಿಯೇ ಉಳಿದು ಕುಟುಂಬದವರೊಂದಿಗೆ ಕಾಲ ಕಳೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು