ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪಕ್ಕೆ ಕಂಡು ಬಂದ ಮಣ್ಣಿನ ಒಲೆ

ಒಲೆ ತಯಾರಿಕೆಯು ಅದ್ಭುತ ಕಲೆ
Last Updated 25 ಜೂನ್ 2021, 4:02 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಹಿಂದೆ ಹಳ್ಳಿಗಳಲ್ಲಿ ಸೂರ್ಯೋದಯದೊಂದಿಗೆ ಹೆಣ್ಣುಮಕ್ಕಳ ಕೆಲಸ ಮಣ್ಣಿನ ಒಲೆ ಉರಿಸುವುದರ ಮೂಲಕ ಪ್ರಾರಂಭವಾಗುತ್ತಿತ್ತು. ಈ ಒಲೆಗಳು ಈಗಿನವರಿಗೆ ಬಲು ಅಪರೂಪ. ಎಲ್ಲೆಡೆ ಅಡುಗೆ ಅನಿಲ ಸಿಲಿಂಡರ್‌ ಲಭ್ಯವಿರುವುದರಿಂದ ಈಗ ಮಣ್ಣಿನ ಒಲೆಗಳು ಪಳೆಯುಳಿಕೆಗಳಾಗಿವೆ. ಈ ಒಲೆ ತಯಾರಿಕೆಯೇ ಒಂದುಅದ್ಭುತ ಕಲೆಗಾರಿಕೆ.

ತಾಲ್ಲೂಕಿನ ಗೌಡನಹಳ್ಳಿಯ ಸುನೀತಾ ದೇವರಾಜ್ ಅವರು ಹಳೆಯ ಮಾದರಿಯ ಮಣ್ಣಿನ ಒಲೆಯನ್ನು ತಮ್ಮ ಮನೆಯ ಅಂಗಳದಲ್ಲಿ ಸಿದ್ಧಪಡಿಸುತ್ತಿರುವುದು ಕಂಡುಬಂದಿತು. ಸಿಲಿಂಡರ್‌ ಕಾಲದಲ್ಲಿ ಮಣ್ಣಿನ ಒಲೆ ಸಿದ್ಧಪಡಿಸುತ್ತಿರುವ ಹಿನ್ನೆಲೆಯನ್ನು ಪ್ರಶ್ನಿಸಿದಾಗ, ‘ಕೆಲವೊಮ್ಮೆ ಗ್ಯಾಸ್ ಮುಗಿದುಹೋದಾಗ ತಕ್ಷಣ ಸಿಲಿಂಡರ್ ಸಿಗುವುದಿಲ್ಲ. ಎರಡು ಮೂರು ದಿನ ತಡವಾಗುತ್ತದೆ. ಆಗ ನಾವು ಅಡುಗೆ ನಿಲ್ಲಿಸುವಂತಿಲ್ಲವಲ್ಲ. ಅದಕ್ಕಾಗಿ ಈ ಪರ್ಯಾಯ ವ್ಯವಸ್ಥೆ’ ಎಂದು
ತಿಳಿಸಿದರು.

ಒಲೆಗಳ ತಯಾರಿಕೆಗೆಂದೇ ಊರಿನ ಕೆರೆ ದಂಡೆಯಲ್ಲಿ ತಿರುಗಾಡಿ ಮಣ್ಣು ಹೊತ್ತು ತಂದು, ಅದಕ್ಕೆ ಸರಿ ಪ್ರಮಾಣದ ಸಗಣಿ ಬೆರೆಸಿ ಹದ ಮಾಡಿಕೊಂಡು ಕೆಲ ಗಂಟೆಗಳು ನೆನೆಯಲಿಟ್ಟು ನಂತರ ಅದನ್ನು ಒಲೆಯ ಆಕಾರಕ್ಕೆ, ಬೇಕಾದ ಗಾತ್ರಕ್ಕೆ ಸಿದ್ಧಪಡಿಸಲಾಗುತ್ತದೆ. ಇದನ್ನು ಹದವಾದ ಬೆಂಕಿಯಲ್ಲಿ ಸುಡುತ್ತಾರೆ.

ಹಿಂದೆ ಕುಂಬಾರರು ಈ ರೀತಿಯ ಒಲೆಗಳನ್ನು ಮಾಡಿ ಮಾರಾಟ ಮಾಡುತ್ತಿದ್ದರು. ಅರಣ್ಯ ನಾಶ ತಡೆಗಟ್ಟುವ ನಿಟ್ಟಿನಲ್ಲಿ ಕಡಿಮೆ ಉರುವಲಿನಿಂದ ಅಧಿಕ ಶಾಖ ಪಡೆಯುವ ಒಲೆಗಳು, ನಂತರದ ದಿನಗಳಲ್ಲಿ ಗ್ಯಾಸ್ ಒಲೆಗಳು ಎಲ್ಲೆಡೆ ಲಭ್ಯವಾಗತೊಡಗಿದ್ದರಿಂದ ಹಳೆಯ ಸಾಂಪ್ರದಾಯಿಕ ಒಲೆಗಳು ಮಾಯವಾದವು.

ಆಧುನಿಕ ಜೀವನ ಶೈಲಿಯಲ್ಲಿ ಗೃಹಬಳಕೆಯ ವಸ್ತುಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎಲ್ಲರ ಮನೆಗಳಲ್ಲಿ ಚಿತ್ತಾಕರ್ಷಕ ಒಲೆಗಳ ಬಳಕೆಯು ರೂಢಿಗೆ ಬಂದಿದೆ. ಅಲ್ಲದೆ ಆಧುನೀಕರಣಗೊಂಡ ಮನೆಗಳಲ್ಲಿ ಮಣ್ಣಿನ ಒಲೆಗಳನ್ನು ಜನರು ಕೂಡಿಸಲು ಇಷ್ಟಪಡುವುದೂ ಇಲ್ಲ. ಇದರಿಂದ ಮನೆಯೆಲ್ಲಾ ಹೊಗೆಯಿಂದ ಕಪ್ಪಾಗುತ್ತದೆ.

‘ಮಣ್ಣಿನ ಒಲೆ ತಯಾರಿಸಿ ಮಾರುತ್ತಿದ್ದ ಕುಂಬಾರರು ಪರ್ಯಾಯ ವೃತ್ತಿ ಅಥವಾ ಉತ್ಪನ್ನ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನಿಜಕ್ಕೂ ಮಣ್ಣಿನ ಒಲೆ ತಯಾರಿಸುವುದು ಒಂದು ಕಲೆ ಮತ್ತು ತಂತ್ರಜ್ಞಾನ. ಅಲ್ಲದೇ, ಈಗ ಮಣ್ಣಿನ ಒಲೆಗೆ ಬೇಕಾದ ಉತ್ತಮ ಮಣ್ಣು ಸಹ ಸಿಗದಾಗಿದೆ’ ಎನ್ನುತ್ತಾರೆ ಗೌಡನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಎಂ. ದೇವರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT