ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ವೀರಗಲ್ಲು ಉದ್ಯಾನದ ಪರ ಧ್ವನಿ

ಜಿಲ್ಲೆಯ ಬಹಳಷ್ಟು ಕಡೆ ರಕ್ಷಣೆಯಿಲ್ಲದೆ ಅನಾಥವಾದ ವೀರಗಲ್ಲು, ಶಾಸನಗಳು
Last Updated 19 ಜನವರಿ 2023, 4:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನೆರೆಯ ಕೋಲಾರ ಜಿಲ್ಲೆಯ ಮೂರು ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ತಲಾ ₹10 ಲಕ್ಷ ವೆಚ್ಚದಲ್ಲಿ ವೀರಗಲ್ಲು ಉದ್ಯಾನ ನಿರ್ಮಿಸಲಾಗುತ್ತಿದೆ. ಜಿಲ್ಲೆಯಲ್ಲಿ ಏಕೆ ಈ ರೀತಿಯಲ್ಲಿ ವೀರಗಲ್ಲು ಉದ್ಯಾನ ನಿರ್ಮಿಸಬಾರದು–ಇದು ಜಿಲ್ಲೆಯಲ್ಲಿ ಶಾಸನಗಳು, ವೀರಗಲ್ಲುಗಳ ಅಧ್ಯಯನದಲ್ಲಿ ತೊಡಗಿರುವವರು ಹಾಗೂ ಇತಿಹಾಸ ಆಸಕ್ತರ ಆಗ್ರಹದ ನುಡಿ.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ದೊಡ್ಡ ಮಟ್ಟದಲ್ಲಿ ವೀರಗಲ್ಲುಗಳು ಪತ್ತೆಯಾಗಿವೆ. ಇಂದಿಗೂ ಪತ್ತೆಯಾಗುತ್ತಿವೆ. ಶಾಸನ ತಜ್ಞರು, ಇತಿಹಾಸ ಆಸಕ್ತರು ಈ ವೀರಗಲ್ಲುಗಳ ಬಗ್ಗೆ ಅಧ್ಯಯನ ಸಹ ನಡೆಸುತ್ತಿದ್ದಾರೆ. ಬಹಳಷ್ಟು ಕಡೆಗಳಲ್ಲಿ ದೇಗುಲಗಳು, ಖಾಸಗಿ ಜಮೀನುಗಳಲ್ಲಿ ವೀರಗಲ್ಲುಗಳಿವೆ.

ಬಲಿದಾನಗಳು, ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತಿತರ ಐತಿಹಾಸಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ. ವೀರಗಲ್ಲುಗಳು ಅಂದಿನ ರಾಜರ ಆಡಳಿತದ ಮಾಹಿತಿ ನೀಡುವ ಆಕರಗಳಾಗಿವೆ. ಇಂತಹ ಮಹತ್ವದ ಐತಿಹಾಸಿಕ ಆಕರಗಳನ್ನು ಸಂರಕ್ಷಿಸಲಾಗುತ್ತಿದೆಯೇ ಎಂದರೆ ನಿರಾಸೆ ಎದ್ದು ಕಾಣುತ್ತದೆ. ಈ ಕಾರಣದಿಂದ ಜಿಲ್ಲೆಯಲ್ಲಿಯೂ ವೀರಗಲ್ಲು ಉದ್ಯಾನಗಳು ನಿರ್ಮಾಣವಾಗಬೇಕು ಎಂಬ ಆಗ್ರಹ ವ್ಯಕ್ತವಾಗುತ್ತಿದೆ.

ವೀರಗಲ್ಲುಗಳ ನೆಲ: ಶಿಡ್ಲಘಟ್ಟ ತಾಲ್ಲೂಕಿನ ಸಾದಲಿ ಸುತ್ತಮುತ್ತ 30ಕ್ಕೂ ಹೆಚ್ಚು ವೀರಗಲ್ಲುಗಳಿವೆ. ಸಾದಲಮ್ಮ ದೇವಸ್ಥಾನ, ಸಾದಲಿ ಕ್ರಾಸ್, ಕೋಟಗಲ್ ಬೆಟ್ಟದ ಹೀಗೆ ಸಾದಲಿ ಆಸುಪಾಸಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ವೀರಗಲ್ಲುಗಳಿವೆ.

ಬಾಗೇಪಲ್ಲಿ ತಾಲ್ಲೂಕಿನ ಆಚೆಪಲ್ಲಿ, ಗುಮ್ಮನಾಯಕನಪಾಳ್ಯ, ದೇವಿಕುಂಟೆ ಗ್ರಾಮದ ಅಕ್ಕಮ್ಮಗಾರಿ ಬೆಟ್ಟ, ಶಿಡ್ಲಘಟ್ಟ ತಾಲ್ಲೂಕಿನ ಸುಂಡ್ರಹಳ್ಳಿ, ಮಲ್ಲಿಶೆಟ್ಟಿಪುರ, ಭಕ್ತರಹಳ್ಳಿ, ಗೌರಿಬಿದನೂರು ತಾಲ್ಲೂಕಿನ ನಗರಗೆರೆಯ ಕೋಡೀರ್ಲಪ್ಪ ದೇಗುಲ, ಜೀಲಾಕುಂಟೆ, ಮೇಳ್ಯದ ದೇವಾಲಯ, ಚಿಗಟಗೆರೆ, ಚಿಂತಾಮಣಿ ತಾಲ್ಲೂಕಿನ ಆನೂರು, ನಗರದ ನೆಕ್ಕುಂದಿಪೇಟೆ, ಕೆ.ಎಂ.ಡಿ ಕಲ್ಯಾಣಮಂಟಪದ ಬಳಿಯ ನಾಗರಕಲ್ಲುಗಳ ಬಳಿ, ಕನಂಪಲ್ಲಿಯ ಆಂಜನೇಯಸ್ವಾಮಿ ದೇವಸ್ಥಾನದ ಬಳಿ, ಯರೈಗಾರಹಳ್ಳಿ, ಆಲಂಬಗಿರ, ಕೈವಾರ, ಬನಹಳ್ಳಿ, ಸಂತೆಕಲ್ಲಹಳ್ಳಿ, ಬಸವಾಪರ, ಕೃಷ್ಣಮ್ಮನ ಹೊಸಹಳ್ಳಿ, ಯಗವಕೋಟೆ, ಸಂತೆಕಲ್ಲಹಳ್ಳಿ, ಚಾಂಡ್ರಹಳ್ಳಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಮನ್ನಾರ್‌ಪುರ, ಕೊತ್ತೂರು ಹೀಗೆ ವಿವಿಧ ಕಡೆಗಳಲ್ಲಿ ವೀರಗಲ್ಲುಗಳು ಪತ್ತೆಯಾಗಿವೆ. ಬಾಗೇಪಲ್ಲಿ ತಾಲ್ಲೂಕಿನ ಕೊಂಡಂವಾರಿಪಲ್ಲಿ ಗ್ರಾಮದಲ್ಲಿ ವೀರಗಲ್ಲನ್ನು ಮನೆ ಕಟ್ಟಲು ಬಳಸಿಕೊಳ್ಳುತ್ತಿದ್ದರು ಇದನ್ನು ರಕ್ಷಣೆ ಸಹ ಮಾಡಲಾಗಿತ್ತು.

ಹೀಗೆ ಜಿಲ್ಲೆಯ ಬಹುತೇಕ ‌ಐತಿಹಾಸಿಕ ದೇಗುಲಗಳು, ಬೆಟ್ಟಗಳು, ಕೋಟೆಗಳು ಮತ್ತಿತರ ಕಡೆಗಳಲ್ಲಿ ವೀರಗಲ್ಲುಗಳು, ಶಾಸನಗಳು ಇಂದಿಗೂ ಅನಾಥವಾಗಿವೆ. ಶಾಸನತಜ್ಞ ಪ್ರೊ.ಕೆ.ಆರ್‌. ನರಸಿಂಹನ್‌, ಧನಪಾಲ್, ಡಿ.ಎನ್. ಸುದರ್ಶನ ರೆಡ್ಡಿ ಮತ್ತಿತರರು ಜಿಲ್ಲೆಯಲ್ಲಿನ ವೀರಗಲ್ಲುಗಳ ಬಗ್ಗೆ ಅಧ್ಯಯನ ನಡೆಸಿ ಅವುಗಳ ಸಂರಕ್ಷಣೆಯ ಬಗ್ಗೆ ಜನರಲ್ಲಿ ತಿಳಿವಳಿಕೆ ಸಹ ಮೂಡಿಸುತ್ತಿದ್ದಾರೆ.

ಆದರೆ ಶಾಸನಗಳು, ವೀರಗಲ್ಲುಗಳ ರಕ್ಷಣೆಗೆ ಸರ್ಕಾರ ಹೆಚ್ಚು ಕಾಳಜಿವಹಿಸಬೇಕು ಎನ್ನುತ್ತಾರೆ ಇತಿಹಾಸಜ್ಞರು.

ಅಧ್ಯಯನಕ್ಕೆ ಆಕರಗಳು

ಚಿಕ್ಕಬಳ್ಳಾಪುರ ತಾಲ್ಲೂಕಿನ ಕೊತ್ತನೂರಿನ ಹೊಲಗಳಲ್ಲಿ ವೀರಗಲ್ಲುಗಳು ಬಿದ್ದಿವೆ. ಕಂದವಾರದ ಗರುಡಗಂಬದಲ್ಲಿ ಎರಡು ಶಾನಗಳು ಅನಾಥವಾಗಿವೆ. ಅಲ್ಲಿಂದ ಸಮೀಪದಲ್ಲಿಯೇ ನೊಳಂಬರ ವೀರಗಲ್ಲುಗಳಿವೆ. ಅವುಗಳು ರಕ್ಷಣೆ ಆಗಬೇಕು. ಮುಷ್ಟೂರಿನಲ್ಲಿ ಚರಂಡಿ ಬಳಿ ಶಾಸನವೊಂದಿದೆ. ಈ ಶಾಸನ ಮಹತ್ವದ ವಿಷಯಗಳನ್ನು ಹೇಳುತ್ತದೆ. ಈ ಶಾಸನವೂ ರಕ್ಷಣೆಯಾಗಿಲ್ಲ ಎನ್ನುತ್ತಾರೆ ಶಾಸನ ತಜ್ಞ ಮಂಚೇನಹಳ್ಳಿಯ ಧನಪಾಲ್.

ನಾವು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕ್ಷೇತ್ರ ಅಧ್ಯಯನ ಮಾಡಿದ್ದೇವೆ. ವೀರಗಲ್ಲುಗಳು, ಶಾಸನಗಳು ಬಹಳಷ್ಟು ಕಡೆಗಳಲ್ಲಿ ಅನಾಥವಾಗಿವೆ. ಇವುಗಳ ರಕ್ಷಣೆ ಅಗತ್ಯ. ಇತಿಹಾಸದ ಅಧ್ಯಯನಕಾರರಿಗೆ, ಸಂಶೋಧನಾರ್ಥಿಗಳಿಗೆ ಇವು ಆಕರಗಳಾಗುತ್ತವೆ. ಕೋಲಾರದಲ್ಲಿ ಆದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ವೀರಗಲ್ಲು ಉದ್ಯಾನ, ಐತಿಹಾಸಿಕ ವಸ್ತು ಸಂಗ್ರಹಾಲಯದ ಯೋಜನೆ ಜಾರಿಯಾಗಬೇಕು ಎಂದರು.

ರಕ್ಷಣೆಗೆ ಯೋಜನೆ ಜಾರಿಯಾಗಲಿ

ಚಿಕ್ಕಬಳ್ಳಾಪುರ ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ವೀರಗಲ್ಲುಗಳಿವೆ. ಶಾಸನಗಳಿವೆ. ಇವುಗಳ ಸಂರಕ್ಷಣೆ ಆಗಬೇಕು. ಕೋಲಾರದಲ್ಲಿ ಮೂರು ಗ್ರಾಮಗಳಲ್ಲಿ ವೀರಗಲ್ಲು ಉದ್ಯಾನ ಸಹ ನಿರ್ಮಿಸಿದ್ದಾರೆ. ಆ ಮೂಲಕ ರಕ್ಷಣೆಗೆ ಮುಂದಾಗಿದ್ದಾರೆ. ಜಿಲ್ಲೆಯಲ್ಲಿಯೂ ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಈ ಯೋಜನೆ ಜಾರಿಗೊಳಿಸಬಹುದು. ಜಿಲ್ಲಾ ಪಂಚಾಯಿತಿ ಈ ವಿಚಾರವಾಗಿ ಹೆಚ್ಚು ಮುತುವರ್ಜಿವಹಿಸಬೇಕು ಎಂದು ಕೋರುತ್ತಾರೆ ಇತಿಹಾಸ ತಜ್ಞ ಡಿ.ಎನ್. ಸುದರ್ಶನ ರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT