ಮಂಗಳವಾರ, ನವೆಂಬರ್ 19, 2019
26 °C
ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ವಕೀಲರು

ಕಾಯ್ದೆ ತಿದ್ದುಪಡಿ ಮರುಪರಿಶೀಲನೆಗೆ ಆಗ್ರಹ

Published:
Updated:
Prajavani

ಚಿಕ್ಕಬಳ್ಳಾಪುರ: ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿರೋಧಿಸಿ ನಗರದಲ್ಲಿ ಗುರುವಾರ ವಕೀಲರು ಕಲಾಪಗಳನ್ನು ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಆವರಣದಲ್ಲಿರುವ ವಕೀಲರ ಭವನದ ಎದುರು ವಕೀಲರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ದುಬಾರಿ ದಂಡ ವಿಧಿಸುವಂತಹ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ‘ಕೇಂದ್ರ ಸರ್ಕಾರ ಇತ್ತೀಚೆಗೆ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ದಂಡ ಮೊತ್ತವನ್ನು ಗಣನೀಯವಾಗಿ ಹೆಚ್ಚಳ ಮಾಡಿರುವುದರಿಂದ ವಾಹನ ಸವಾರರು ಮತ್ತು ವಾಹನ ಮಾಲೀಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ’ ಎಂದು ಆರೋಪಿಸಿದರು.

‘ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಸ್ವಾಗತರ್ಹ. ಆದರೆ, ಹೆಲ್ಮೆಟ್ ಧರಿಸದ ವಾಹನ ಸವಾರರಿಗೆ ವಿಧಿಸುವ ದಂಡದ ಮೊತ್ತವನ್ನು ₹100 ರಿಂದ ₹1,000 ಏರಿಕೆ ಮಾಡಿರುವುದು ಖಂಡನೀಯ. ಇದರಿಂದ ರೈತರು, ಬಡವರು, ಕೂಲಿ ಕಾರ್ಮಿಕರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ’ ಎಂದು ಹೇಳಿದರು.

‘ಮೋಟಾರು ವಾಹನ ಕಾಯ್ದೆ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ತಿದ್ದುಪಡಿಯಾಗಬೇಕು. ಆದರೆ ಅವೈಜ್ಞಾನಿಕ ರೀತಿಯಲ್ಲಿ ತಿದ್ದುಪಡಿ ಮಾಡಿ ಸವಾರರಿಗೆ ಕಿರುಕುಳ ಉಂಟು ಮಾಡಲಾಗುತ್ತಿದೆ. ಅವೈಜ್ಞಾನಿಕವಾದ ತಿದ್ದುಪಡಿಯನ್ನು ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.

‘ನಗರದಲ್ಲಿ ವಾಹನ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ರಸ್ತೆಗಳೆಲ್ಲಾ ಗುಂಡಿಮಯವಾಗಿವೆ. ಎಂ.ಜಿ ರಸ್ತೆ ವಾಹನ ಸವಾರರು ಮತ್ತು ಪಾದಚಾರಿಗಳು ಸಂಚರಿಸಲಾಗದಷ್ಟು ಆಧ್ವಾನಗೊಂಡಿದೆ. ಈ ರಸ್ತೆಯಲ್ಲಿನ ಮಾರುಕಟ್ಟೆಗೆ ನಿತ್ಯ ಸಾವಿರಾರು ರೈತರು ಹಣ್ಣು, ಹೂ, ತರಕಾರಿ ತಂದು ಮಾರಾಟ ಮಾಡುತ್ತಾರೆ. ಈ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ವಕೀಲ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಿ.ವಿನೋದ್ ಕುಮಾರ್, ಉಪಾಧ್ಯಕ್ಷ ಕೆ.ವಿ.ಬಾಲಾಜಿ, ವಕೀಲರಾದ ಬಾಲಸುಬ್ರಮಣ್ಯಂ, ಟಿ.ಎಂ.ತಿಮ್ಮರಾಜು, ಕೆ.ಉಮೇಶ್, ಜಿ.ಆರ್.ಸಂಪತ್ ಕುಮಾರ್, ಡಿ.ಎನ್.ಮಂಜುನಾಥ್, ಬಿ.ನಾಗೇಶ್, ಎಚ್.ಎಂ.ಮಂಜುನಾಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)