ಶನಿವಾರ, ನವೆಂಬರ್ 28, 2020
18 °C
ಚಿಂತಾಮಣಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನವೆಂಬರ್ 1ಕ್ಕೆ ಮಹೂರ್ತ ನಿಗದಿ

ಚಿಂತಾಮಣಿ: ನಗರಸಭೆ ಗದ್ದುಗೆ ಏರಲು ಚಟುವಟಿಕೆ ಚುರುಕು

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಚುನಾವಣೆ ನಡೆದು ಒಂದು ವರ್ಷವಾದರೂ ಅಧಿಕಾರ ವಹಿಸಿಕೊಳ್ಳಲು ಆಗದೆ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದ ನಗರಸಭೆ ಸದಸ್ಯರಿಗೆ ಕೊನೆಗೂ ಅಧಿಕಾರ ವಹಿಸಿಕೊಳ್ಳುವ ಮಹೂರ್ತ ಕೂಡಿ ಬಂದಿದೆ.

ಇಲ್ಲಿನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನವೆಂಬರ್ 1ಕ್ಕೆ ನಿಗದಿ ಆಗಿದೆ. ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯನ್ನು ಸರ್ಕಾರ ಅಕ್ಟೋಬರ್ 8ರಂದು ಪ್ರಕಟಿಸಿತ್ತು. ಈ ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮೀಸಲಾತಿ ಪರಿಶೀಲನೆಗೆ ಸಮಿತಿ ರಚಿಸಿ ಚುನಾವಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.
ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನವೆಂಬರ್ 2 ರೊಳಗೆ ಪೂರ್ಣಗೊಳಿಸಲು ಆದೇಶ ನೀಡಿದೆ.

ಜಿಲ್ಲಾಧಿಕಾರಿ ಚಿಂತಾಮಣಿ ನಗರಸಭೆ ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ರಘುನಂದನ್ ಅವರನ್ನು ನೇಮಿಸಿ, ನವೆಂಬರ್ 1ರಂದು ನಗರಸಭೆ ಸಭಾಂಗಣದಲ್ಲಿ ಚುನಾವಣೆ ನಡೆಸುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಹೀಗಾಗಿ
ನಗರಸಭೆ ಗದ್ದುಗೆ ಹಿಡಿಯಲು ರಾಜಕೀಯ ಮತ್ತು ಮೈತ್ರಿ ಚಟುವಟಿಕೆ ಚುರುಕುಗೊಂಡಿದೆ.

ನಗರಸಭೆಗೆ 2019ರ ನವೆಂಬರ್ 12ರಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿರಲಿಲ್ಲ. ಒಟ್ಟು 31 ಸದಸ್ಯ ಬಲ ಹೊಂದಿರುವ ನಗರಸಭೆಯಲ್ಲಿ ಜೆಡಿಎಸ್ 14, ಭಾರತೀಯ ಪ್ರಜಾಪಕ್ಷ (ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಬಣ) 14, ಕಾಂಗ್ರೆಸ್ 01, ಸ್ವತಂತ್ರ 02 ಅಭ್ಯರ್ಥಿಗಳು ಜಯಗಳಿಸುವ ಮೂಲಕ ಅತಂತ್ರ ಫಲಿತಾಂಶ ಮತದಾರರು ನೀಡಿದ್ದರು.

ನಗರಸಭೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ (ಬ) ಮಹಿಳೆಗೆ ಮೀಸಲು ನೀಡಲಾಗಿದೆ. ಜೆಡಿಎಸ್‌ನಲ್ಲಿ 31ನೇ ವಾರ್ಡ್ ತಿಮ್ಮಸಂದ್ರದಿಂದ ಆಯ್ಕೆಯಾಗಿರುವ ಟಿ.ವಿ.ಮಂಜುಳಾ, ಮಾಜಿ ಸಚಿವ ಸುಧಾಕರ್ ಬಣದಲ್ಲಿ 27ನೇ ವಾರ್ಡ್ ಶಾಂತಿನಗರದಿಂದ ಆಯ್ಕೆಯಾಗಿರುವ ಕೆ.ರಾಣಿ ಅರ್ಹ ಅಭ್ಯರ್ಥಿಗಳಾಗಿದ್ದಾರೆ.

ಎರಡು ಪಕ್ಷಗಳಲ್ಲಿ ಅರ್ಹತೆ ಹೊಂದಿರುವ ಒಬ್ಬೊಬ್ಬರು ಮಾತ್ರ ಆಯ್ಕೆಯಾಗಿರುವುದರಿಂದ ಆಕಾಂಕ್ಷಿಗಳ ಗೊಂದಲವಿಲ್ಲ. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ 4ನೇ ವಾರ್ಡ್ ನಿಂದ ಆಯ್ಕೆಯಾಗಿರುವ ಕೆ.ಜಯಮ್ಮ ಅರ್ಹತೆ ಹೊಂದಿರುವ ಏಕೈಕ ಅಭ್ಯರ್ಥಿ.

ವಿರೋಧಿ ಬಣದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಅರ್ಹ ಅಭ್ಯರ್ಥಿ ಇಲ್ಲ. ಹೀಗಾಗಿ ಬಹುತೇಕ ಉಪಾಧ್ಯಕ್ಷ ಸ್ಥಾನ ಅವಿರೋಧ ಆಯ್ಕೆ ಆಗುವ ಮೂಲಕ ಜೆಡಿಎಸ್ ಗೆ ದೊರೆಯುವ ನಿರೀಕ್ಷೆ ಇದೆ. ಅಧ್ಯಕ್ಷ ಸ್ಥಾನಕ್ಕೆ ಯಾರಿಗೂ ಬಹುಮತವಿಲ್ಲದ ಕಾರಣ ಪಕ್ಷೇತರರ ಮೊರೆ ಹೋಗುವುದು ಅಗತ್ಯವಾಗಿದೆ. ಯಾರ ಪಾಲಿಗೆ ಅಧ್ಯಕ್ಷ ಸ್ಥಾನ ಒಲಿಯಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ.

ಇಬ್ಬರು ಪಕ್ಷೇತರರ ನಿಲುವು ಹಾಗೂ ಕಾಂಗ್ರೆಸ್ ಏಕೈಕ ಸದಸ್ಯನ ನಿಲುವು ಅಧ್ಯಕ್ಷರ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. 24ನೇ ವಾರ್ಡ್ ನಿಂದ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿರುವ ಇಸ್ರತ್ ಉನ್ನೀಸಾ ಜೆಡಿಎಸ್ ಬಂಡಾಯ ಅಭ್ಯರ್ಥಿ. ಪಕ್ಷದ ಬಿ-ಫಾರಂ ಸಿಗದೆ ಪಕ್ಷೇತರರಾಗಿದ್ದರು. 11ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಎಂಜನಿಯರಿಂಗ್ ಯುವಕ ಜಿ.ಎ.ಅಕ್ಷಯಕುಮಾರ್ ಸ್ವತಂತ್ರವಾಗಿ ಸ್ಪರ್ಧಿಸಿ ಜಯಗಳಿಸಿದ್ದಾರೆ. ಪಕ್ಷೇತರರು ಇನ್ನೂ ಗುಟ್ಟು ರಟ್ಟು ಮಾಡುತ್ತಿಲ್ಲ.

ಶಾಸಕ ಮತ್ತು ಸಂಸತ್ ಸದಸ್ಯರು ಹಾಗೂ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ತಿನ ಸದಸ್ಯರಿಗೂ ಮತದಾನದ ಹಕ್ಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು