ಭಾನುವಾರ, ಆಗಸ್ಟ್ 14, 2022
20 °C
ವಿಶ್ವ ಮಣ್ಣು ದಿನಾಚರಣೆ, ಕಿಸಾನ್ ಗೋಷ್ಠಿ

ರಾಸಾಯನಿಕ ಗೊಬ್ಬರ ಬಳಸದಿರಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ರೈತರು ಅವೈಜ್ಞಾನಿಕವಾಗಿ ಜಮೀನುಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಡಿ. ಅತಿ ಹೆಚ್ಚಿಗೆ ರಾಸಾಯನಿಕ ಗೊಬ್ಬರ ನೀಡಿದಲ್ಲಿ ಮಣ್ಣು ವಿಷಯುಕ್ತವಾಗುತ್ತೆ ಎಂದು ಜಂಟಿ ಕೃಷಿ ನಿರ್ದೇಶಕಿ ರೂಪಾ.ಎಲ್ ತಿಳಿಸಿದರು

ಮಂಡಿಕಲ್ಲು ಗ್ರಾಮದ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಮತ್ತು ಕೃಷಿ ಇಲಾಖೆಯಿಂದ ಆತ್ಮ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಣ್ಣು ದಿನಾಚರಣೆ ಮತ್ತು ಕಿಸಾನ್ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನವು ಎಷ್ಟೇ ಮುಂದುವರೆ
ದರೂ ಮಣ್ಣನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಮಣ್ಣನಲ್ಲಿ ಪೋಷಕಾಂಶಗಳು ಅತಿ ಹೆಚ್ಚಾದರೂ ಬೆಳೆಯ ಬೆಳವಣಿಗೆಯಲ್ಲಿ ಏರುಪೇರಾಗಿ ಇಳುವರಿ ಪಡೆಯುವಲ್ಲಿ ರೈತ ವಿಫಲನಾಗುತ್ತಾನೆ. ಆದ್ದರಿಂದ ರೈತರು ತಮ್ಮ ಜಮೀನುಗಳ ಮಣ್ಣಿನ ಸತ್ವ ಪರೀಕ್ಷೆ ಮಾಡಿಸಿಯೇ ಗೊಬ್ಬರ ಬಳಕೆ ಮಾಡಿ ಎಂದು ರೈತರಿಗೆ ಸಲಹೆ ನೀಡಿದರು.

ಕೃಷಿ ವಿಶ್ವ ವಿದ್ಯಾನಿಲಯದ ವಿಜ್ಞಾನಿ ಡಾ. ಆನಂದ್ ರವರು ಮಾತನಾಡಿ, ಪ್ರಪಂಚದಲ್ಲಿ ಅತಿ ಹೆಚ್ಚು ಕೃಷಿ ಮಾಡುವ ದೇಶ ಭಾರತ. ಚೀನಾದಲ್ಲಿ ಕಡಿಮೆ ಭೂ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಮಾಡಿದರೂ ಅತಿ ಹೆಚ್ಚು ಇಳುವರಿ ಪಡೆಯುವಲ್ಲಿ ಅಲ್ಲಿನ ರೈತರು ಸಫಲತೆ ಕಂಡಿದ್ದಾರೆ. ಕಾರಣವೆಂದರೆ ಅಲ್ಲಿನ ರೈತರು ಅಳವಡಿಸಿಕೊಂಡಿರುವ ವೈಜ್ಞಾನಿಕ ಪದ್ಧತಿಗಳು. ನಮ್ಮಲ್ಲಿ ಕೃಷಿಯಲ್ಲಿ ವಿಫಲತೆ ಹೊಂದಲು ಕಾರಣವೆಂದರೆ ನಮ್ಮ ರೈತರು ಕೃಷಿಯೊಡನೆ ಹೈನುಗಾರಿಕೆಯನ್ನು ಮರೆತಿರುವುದು ಸಹ ಒಂದು ಕಾರಣ. ಹೈನುಗಾರಿಕೆಯಿದ್ದಲ್ಲಿ ಯಥೇಚ್ಛವಾಗಿ ತಿಪ್ಪೆ ಗೊಬ್ಬರ, ಸಾವಯವ ಗೊಬ್ಬರಗಳು ದೊರೆತು ಅದನ್ನು ಕೃಷಿ ಭೂಮಿಗೆ ನೀಡಿದಲ್ಲಿ ನಾವು ಬೆಳೆಯುವ ಆಹಾರ ಪದಾರ್ಥಗಳು ಗುಣಮಟ್ಟದಾಗಿರುತ್ತದೆ’ ಎಂದರು.

ಕೃಷಿ ಲಾಭದಾಯಕವಾಗಬೇಕಿದ್ದಲ್ಲಿ ಸಾವಯವ ಗೊಬ್ಬರ ಕಾಂಪೋಸ್ಟ್‌ ಗೊಬ್ಬರ, ಎರೆಹುಳು ಗೊಬ್ಬರ, ಕೆರೆ
ಮಣ್ಣಿನ ಬಳಕೆಗಳನ್ನು ಅಳವಡಿಸಿಕೊಳ್ಳ
ಬೇಕು. ರೈತರು ತಮ್ಮ ಜಮೀನುಗಳಿಗೆ ವರ್ಷಕ್ಕೆ ಒಮ್ಮೆಯಾದರೂ ಹಸಿರೆಲೆ ಗೊಬ್ಬರವನ್ನು ನೀಡಬೇಕು. ಮಣ್ಣು ಸತ್ವಯುತವಾಗಿದೆಯೇ ಎಂಬುದನ್ನು ರೈತರು ತಮ್ಮ ಕೃಷಿ ಭೂಮಿಯಲ್ಲಿ ಬರಿಗಾಲಿನಲ್ಲಿ ನಡೆದಾಡುವಾಗ ಆಗುವ ಅನುಭವದಿಂದಲೇ ಪರೀಕ್ಷಿಸಬಹುದು. ಮಣ್ಣು ಹತ್ತಿಯಂತಹ ಮೃದು ಅನುಭವ ನೀಡಿದಲ್ಲಿ ಅದು ಉತ್ತಮ ಮಣ್ಣು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ನಿರ್ದೇಶಕರಾದ ಕೃಷ್ಣಮೂರ್ತಿ, ರೇಷ್ಮೆ ನಿರ್ದೇಶಕರಾದ ಬೈರಪ್ಪ, ಕೃಷಿ ಉಪನಿರ್ದೇಶಕರಾದ ಚಂದ್ರಕುಮಾರ್, ಸಹಾಯಕ ಕೃಷಿ ನಿರ್ದೇಶಕರು ಕೇಶವರೆಡ್ಡಿ, ಕೃಷಿ ಅಧಿಕಾರಿಗಳಾದ ಗೀತಾ ಮತ್ತು ಗಂಗಾಧರ ರೆಡ್ಡಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜೀಗಾನಹಳ್ಳಿ ಗ್ರಾಮದ ವ್ಯಾಪ್ತಿಗೆ ಬರುವ ರೈತರ ಎಲ್ಲಾ ಸರ್ವೆ ನಂಬರುಗಳ ಜಮೀನಿನಲ್ಲಿ ಮಣ್ಣು ಪರೀಕ್ಷೆ ಮಾಡಿರುವ ಕಾರ್ಡ್‌ಗಳನ್ನು ವಿತರಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು