ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀನಿವಾಸಪುರ: ಬದುಕು ಕೊಟ್ಟ ಬಹುಬೆಳೆ ಪದ್ಧತಿ

ಕೃಷಿಯಲ್ಲಿ ನಾಲ್ಕು ಮಂದಿ ಅಣ್ಣ– ತಮ್ಮಂದಿರ ಯಶೋಗಾಥೆ
Last Updated 29 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಅರಿನಾಗನಹಳ್ಳಿ ಗ್ರಾಮದ ರೈತ ಕುಟುಂಬ, ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ಬಹುಬೆಳೆ ಬೆಳೆಯುವುದರ ಮೂಲಕ ಗಮನ ಸೆಳೆದಿದ್ದಾರೆ.

ಗ್ರಾಮದ ಪ್ರಗತಿಪರ ರೈತ ಮುನಿರೆಡ್ಡಿ ಹಾಗೂ ಸಹೋದರರು ಬೇರೆ ರೈತರಂತೆ ಟೊಮೆಟೊಗೆ ಮಾತ್ರ ಮಣೆ ಹಾಕದೆ, ತೋಟದಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಯಾವುದೇ ಬೆಳೆಗೆ ರಾಸಾಯನಿಕ ಗೊಬ್ಬರ ಬಳಸದೆ ಕೊಟ್ಟಿಗೆ ಗೊಬ್ಬರ ಬಳಕೆ, ಹಾಗೂ ಹುಳುಬಾಧೆ ನಿಯಂತ್ರಣಕ್ಕೆ ಬೇವಿನ ಎಣ್ಣೆ ಮಿಶ್ರಿತ ಕೀಟ ನಾಶಕ ಬಳಸುತ್ತಿದ್ದಾರೆ.

ತಂದೆ ಅಶ್ವತ್ಥಪ್ಪ ಅವರ ಮಾರ್ಗದರ್ಶನದಲ್ಲಿ ಸುಮಾರು 25 ಎಕರೆ ವಿಸ್ತೀರ್ಣದಲ್ಲಿ ಇವರ ಕೃಷಿ ಸಾಮ್ರಾಜ್ಯ ವಿಸ್ತರಿಸಿಕೊಂಡಿದೆ. ಈಗ ಅವರ ತೋಟದಲ್ಲಿ ಟೊಮೆಟೊ, ಕ್ಯಾರೆಟ್‌, ಹುರಳಿ, ಅವರೆ, ಹೀರೆಕಾಯಿ, ಸೌತೆಕಾಯಿ, ಕೊತ್ತಂಬರಿ ಸೊಪ್ಪು ಬೆಳೆದಿದ್ದಾರೆ. ತೋಟದ ಒಂದು ಬದಿಯಲ್ಲಿ ವೈಜ್ಞಾನಿಕ ದನದ ಕೊಟ್ಟಿಗೆ ನಿರ್ಮಿಸಿ 12 ಸೀಮೆ ಹಸು ಹಾಗೂ 8 ಎಮ್ಮೆಗಳನ್ನು ಸಾಕಲಾಗಿದೆ. ಗಂಜಲ ಒಂದು ತೊಟ್ಟಿಗೆ ಹರಿದು ಹೋಗುವ ರೀತಿ ವ್ಯವಸ್ಥೆ ಮಾಡಲಾಗಿದೆ. ಇದನ್ನು ಸಂಸ್ಕರಿಸಿ ಹನಿ ನೀರಾವರಿ ಮೂಲಕ ಬೆಳೆಗೆ ಉಣಿಸಲಾಗುತ್ತದೆ.

ಕೊಳವೆ ಬಾವಿ ನೀರನ್ನು ಕೃಷಿ ಹೊಂಡಗಳಿಗೆ ತುಂಬಿ, ಹನಿ ನೀರಾವರಿ ಮೂಲಕ ಹರಿಸಲಾಗುತ್ತಿದೆ. ನೆಲಕ್ಕೆ ಪ್ಲಾಸ್ಟಿಕ್‌ ಹಾಳೆ ಹಾಸುವುದರಿಂದ ಕಳೆ ಬರುವುದಿಲ್ಲ. ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ. ಟೊಮೆಟೊ ಬೆಳೆ ಮುಗಿದ ಮೇಲೆ, ಅದೆ ಕೋಲುಗಳಿಗೆ ಹೀರೆ, ಸೌತೆ, ಹುರುಳಿಯಂತಹ ಬೆಳೆಗಳನ್ನು ಇಡಲಾಗುತ್ತಿದೆ. ಇದರಿಂದ ಬೇಸಾಯದ ಖರ್ಚು ಕಡಿಮೆಯಾಗುತ್ತದೆ. ಇಷ್ಟು ಮಾತ್ರವಲ್ಲದೆ ವೀಳ್ಯದೆಲೆ ತೋಟವೂ ಇದೆ. ಕುರಿ, ಕಾಶ್ಮೀರಿ ಮೇಕೆ ಹಾಗೂ ನಾಟಿ ಕೋಳಿ ಸಾಕಲಾಗುತ್ತಿದೆ.

‘ನಮ್ಮ ತಿಪ್ಪೆಯನ್ನು ಹೊರತುಪಡಿಸಿ, ಪ್ರತಿ ವರ್ಷ ₹5–6 ಲಕ್ಷದಷ್ಟು ತಿಪ್ಪೆ ಗೊಬ್ಬರ ಖರೀದಿಸಿ ತೋಟಕ್ಕೆ ಹಾಕುತ್ತೇವೆ. ತೋಟದಲ್ಲಿ ಬೆಳೆಯುವ ಕಳೆಯನ್ನೆ ಗೊಬ್ಬರವಾಗಿಸಲಾಗುತ್ತದೆ. ಸಾವಯವ ಗೊಬ್ಬರ ಬಳಕೆಯಿಂದ ಮಾತ್ರ ಭೂಮಿಯ ಆರೋಗ್ಯ ರಕ್ಷಣೆ ಸಾಧ್ಯ’ ಎನ್ನುವುದು ಮುನಿರೆಡ್ಡಿ ಅವರ ಅನುಭವದ ಮಾತು.

‘ಒಂದು ಬೆಳೆಯನ್ನು ನಂಬಿ ವ್ಯವಸಾಯ ಮಾಡುವುದು ಕ್ಷೇಮಕರವಲ್ಲ. ನಾಲ್ಕು ಬೆಳೆ ಇಟ್ಟರೆ ಒಂದಲ್ಲಾ ಒಂದಕ್ಕೆ ಲಾಭದಾಯಕ ಬೆಲೆ ಸಿಗುತ್ತದೆ. ಇರುವ ಜಮೀನನ್ನು ವೈಜ್ಞಾನಿಕವಾಗಿ ವಿಂಗಡಿಸಿ ಬೆಳೆ ಬೆಳೆದಲ್ಲಿ ನಷ್ಟದ ಪ್ರಶ್ನೆ ಇಲ್ಲ’ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT