ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಂಗಳೆಯರ ‘ಸುವರ್ಣ’ವಕಾಶ ಕಸಿದ ಕೊರೊನಾ

ಅಕ್ಷಯ ತೃತೀಯ: ಲಾಕ್‌ಡೌನ್‌ನಿಂದ ನಡೆಯದ ಚಿನ್ನದ ವಹಿವಾಟು, ಚಿನ್ನದ ವರ್ತಕರಲ್ಲಿ ಬೇಸರ
Last Updated 26 ಏಪ್ರಿಲ್ 2020, 16:18 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೊರೊನಾ ಸೋಂಕು, ಲಾಕ್‌ಡೌನ್‌ ಕಾರಣಕ್ಕೆ ಈ ಬಾರಿ ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವ ಹೆಂಗಳೆಯರ ಕನಸು ಭಗ್ನವಾಗಿದೆ. ಇನ್ನೊಂದೆಡೆ ಚಿನ್ನದ ವರ್ತಕರಿಗೆ ತೀವ್ರ ಬೇಸರ ತಂದಿದೆ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಬಹು ಹಿಂದಿನಿಂದಲೂ ರೂಢಿಯಲ್ಲಿದೆ. ಹೀಗಾಗಿ ಆ ದಿನ ಬಂಗಾರದ ಆಭರಣಗಳನ್ನು ಕೊಳ್ಳಲು ಹೆಣ್ಣು ಮಕ್ಕಳು ದಾಂಗುಡಿ ಇಡುವ ಚಿತ್ರಣ ಸಾಮಾನ್ಯವಾಗಿ ಚಿನಿವಾರ ಪೇಟೆಯಲ್ಲಿ ಕಂಡು ಬರುತ್ತಿತ್ತು.

ಈ ವರ್ಷ ಲಾಕ್‌ಡೌನ್‌ನಿಂದಾಗಿ ಚಿನ್ನಾಭರಣ ಮಳಿಗೆಗಳು ಬಾಗಿಲು ಮುಚ್ಚಿದ್ದರಿಂದ ಕನಸಿನ ಆಭರಣ ಖರೀದಿಸುವ ಅವಕಾಶ ಇಲ್ಲದಂತಾಗಿ ಹಬ್ಬದ ಸಂಭ್ರಮವನ್ನು ಕಸಿದುಕೊಂಡಿದೆ. ಆದರೆ ಬೃಹತ್‌ ಮಳಿಗೆಯವರು ಆನ್‌ಲೈನ್‌ ಮೂಲಕ ಅವಕಾಶ ನೀಡಿದ್ದರೂ ಚಿನ್ನ ಮಾತ್ರ ಈಗ ಸಿಗುವುದಿಲ್ಲ.

ಏಪ್ರಿಲ್‌– ಮೇ ತಿಂಗಳಗಳಲ್ಲಿ ಮದುವೆ ಮುಹೂರ್ತಗಳು ಜಾಸ್ತಿ. ಮದುವೆಗೆ ತಾಳಿ, ಚೈನು, ಉಂಗುರ, ನೆಕ್ಲೆಸ್‌, ಕಿವಿಯೋಲೆ ಸೇರಿ ಹತ್ತು ಹಲವು ಬಂಗಾರದ ಆಭರಣಗಳನ್ನು ಜನರು ಖರೀದಿಸುತ್ತಿದ್ದರು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿನ್ನದ ಖರೀದಿ ಸ್ಥಗಿತಗೊಂಡಿದೆ.

ನಗರದ ಗಂಗಮ್ಮಗುಡಿ ರಸ್ತೆಯಲ್ಲಿರುವ ಸುಮಾರು 100 ಚಿನ್ನದ ಮಳಿಗೆಗಳು ಕಳೆದ ಒಂದು ತಿಂಗಳಿಂದ ಮುಚ್ಚಿದ ಬಾಗಿಲು ತೆರೆದಿಲ್ಲ. ಪ್ರತಿ ಅಕ್ಷಯ ತೃತೀಯ ದಿನದಂದು ನಗರದಲ್ಲಿ ಸುಮಾರು ₹5 ಕೋಟಿ ಚಿನ್ನಾಭರಣ ಖರೀದಿ ವಹಿವಾಟು ನಡೆಯುತ್ತಿತ್ತು. ಈ ವರ್ಷದ ನಗರದ ಮಳಿಗೆಗಳಲ್ಲಿ ಒಂದೇ ಒಂದು ಪೈಸೆ ಚಿನ್ನದ ಖರೀದಿ ನಡೆಯಲಿಲ್ಲ.

ಇನ್ನೊಂದೆಡೆ ಲಾಕ್‌ಡೌನ್‌ನಿಂದಾಗಿ ಮದುವೆ, ಶುಭ ಕಾರ್ಯಗಳು ರದ್ದಾದ ಕಾರಣ ಗ್ರಾಹಕರು ಈ ಬಾರಿ ಚಿನ್ನ ಖರೀದಿಯನ್ನೂ ಮುಂದೂಡಿದ್ದಾರೆ. ಹೀಗಾಗಿ, ಚಿನ್ನ–ಬೆಳ್ಳಿ ಉದ್ಯಮಕ್ಕೆ ತುಂಬಲಾರದ ನಷ್ಟವಾಗಿದೆ. ದುಸ್ವಪ್ನದಂತೆ ಬಂದೆರಗಿದ ಸೋಂಕು ಚಿನಿವಾರಪೇಟೆಯ ಸಂತಸ ಕಳೆದು ಹಾಕಿದೆ.

‘ಸಾಮಾನ್ಯವಾಗಿ ಅಕ್ಷಯ ತೃತೀಯ ದಿನ ಜನರು ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಚಿನ್ನ ಖರೀದಿಸುತ್ತಿದ್ದರು. ಬಡವರು ಕನಿಷ್ಠ ಮೂಗಿನ ನತ್ತು ಖರೀದಿಸಿದರೆ, ಶ್ರೀಮಂತರು ಚೈನು, ನೆಕ್ಲೆಸ್, ಬಳೆ ಖರೀದಿಸುತ್ತಿದ್ದರು. ಈ ಬಾರಿ ಕೊರೊನಾ ಕಾರಣಕ್ಕೆ ಮಳಿಗೆ ಬಾಗಿಲು ತೆರೆಯಲು ಆಗಲಿಲ್ಲ‘ ಎಂದು ನವೀನ್‌ ಜೂವೆಲರ್ಸ್‌ ಮಾಲೀಕ ಕಿರಣ್‌ ತಿಳಿಸಿದರು.

‘ಪ್ರತಿ ವರ್ಷ ಅಕ್ಷಯ ತೃತೀಯಕ್ಕೆ ಮುಂಚಿತವಾಗಿ ಅನೇಕರು ಆಭರಣಗಳ ವಿನ್ಯಾಸ ಅಂತಿಮಗೊಳಿಸಿ, ಮುಂಗಡ ಹಣ ನೀಡಿ ಹೋಗಿರುತ್ತಿದ್ದರು. ಹಬ್ಬದ ದಿನ ಬಂದು ಆರಂಭ ತೆಗೆದುಕೊಂಡು ಹೋಗುತ್ತಿದ್ದರು. ಈ ಬಾರಿ ಕೊರೊನಾ ಎಲ್ಲರ ಲೆಕ್ಕಾಚಾರ ತಲೆ ಕೆಳಗಾಗಿಸಿತು. ತಿಂಗಳು ಮೊದಲೇ ಮಳಿಗೆಗಳೆಲ್ಲ ಬಾಗಿಲು ಮುಚ್ಚಿದ ಕಾರಣಕ್ಕೆ ಮುಂಗಡ ಬೇಡಿಕೆಯನ್ನು ಪಡೆಯಲು ಆಗಲಿಲ್ಲ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT