ಚಿಂತಾಮಣಿ: ಮನೆಯಿಂದಲೇ ಅರೆಕಾಲಿಕ ಕೆಲಸ ಮಾಡಿ ಹೆಚ್ಚು ಹಣ ಸಂಪಾದನೆ ಮಾಡಬಹುದು ಎಂದು ನಂಬಿಸಿದ ಸೈಬರ್ ವಂಚಕರು ಸ್ನಾತಕೋತ್ತರ ಪದವೀಧರೆಗೆ ₹14.44 ವಂಚನೆ ಮಾಡಲಾಗಿದೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಗರದ ರೈಲು ನಿಲ್ದಾಣದ ಬಳಿಯ ಬುಕ್ಕನಹಳ್ಳಿ ರಸ್ತೆಯ ಎಂಎಸ್‌ಸಿ ಪಧವೀಧರೆಯಾದ ನಾನು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಜುಲೈ 5ರಂದು ನನಗೆ ಟೆಲಿಗ್ರಾಂ ಆ್ಯಪ್ ಮುಖಾಂತರ ಅರ್ಪಿತಾ ನಾಯರ್ ಎಂಬುವರು ಪರಿಚಯವಾಗಿದ್ದು, ಅರೆಕಾಲಿಕ ಕೆಲಸದ ಬಗ್ಗೆ ಮಾತನಾಡಿದ್ದರು. ಐ ಗ್ಲೋಬಲ್ ಎಂಬ ವೆಬ್ ಸೈಟ್‌ನಲ್ಲಿ ಆನ್‌ಲೈನ್ ಉತ್ಪನ್ನಗಳ ರಿವೀವ್ಯೂ ರೇಟಿಂಗ್ ನೀಡುವ ಕೆಲಸವಾಗಿದ್ದು, ಪ್ರತಿ ಗಂಟೆಗೆ ₹1,000 ಸಂಪಾದಿಸಬಹುದು’ ಎಂದು ನಂಬಿಸಿದ್ದರು ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಈ ಪ್ರಕಾರ ಕೆಲಸ ಕುರಿತು ನನಗೆ ಮಾಹಿತಿ ನೀಡಿ, ನನ್ನ ಮೊಬೈಲ್ ಸಂಖ್ಯೆ ಆಧಾರದ ಮೇರೆಗೆ ಒಂದು ಖಾತೆ ತೆರೆದು ಅದಕ್ಕೆ ಅವರೇ ₹10,000 ಹಾಕಿದ್ದರು. ಬಳಿಕ ರಿವಿವ್ಯೂ ರೇಟಿಂಗ್‌ಗೆ ₹800 ಕಮಿಷನ್ ಪಾವತಿಸಲಾಗಿತ್ತು. ಇದು ನಿಜವೇ ಇರಬಹುದು ಎಂದು ನಂಬಿ ನನ್ನ ಬ್ಯಾಂಕ್ ಖಾತೆಯಲ್ಲಿದ್ದ 14.44 ಲಕ್ಷ ಅನ್ನು ಆರೋಪಿಗಳು ಹೇಳಿದ ಖಾತೆಗೆ ಠೇವಣಿ ಮಾಡಿದ್ದೇನೆ. ನಾನು ಮಾಡಿದ್ದ ಕೆಲಸಕ್ಕೆ ₹4 ಲಕ್ಷ ಕಮಿಷನ್ ಸಹ ಬಂದಿದೆ. ಆದರೆ, ಅದನ್ನು ತೆರೆಯಲು ಸಾಧ್ಯವಾಗುತ್ತಿಲ್ಲ’.
‘ನನಗೆ ಆನ್‌ಲೈನ್ ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾಗಿ ಕೆಲಸ ಕೊಡಿಸುವುದಾಗಿ ನಂಬಿಸಿ ವಿವಿಧ ಖಾತೆಗಳಿಗೆ 14.44 ಲಕ್ಷ ಕಟ್ಟಿಸಿಕೊಂಡು ವಂಚಿಸಿರುವ ಅರ್ಪಿತಾ ನಾಯರ್, ತೀಪಿಕಾ ನಾಯರ್, ಗ್ಲೋಬಲ್ ಕಸ್ಟಮರ್ ಸರ್ವೀಸ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.