ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿರ ಮೋಹಕ್ಕೆ ಸಂದ ಗೌರವ: ಕೆ.ಅಮರನಾರಾಯಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರನಾರಾಯಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ
Last Updated 28 ಅಕ್ಟೋಬರ್ 2020, 14:45 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಪ್ರಕೃತಿ ರಕ್ಷತಿ ರಕ್ಷಿತಃ’ ಎಂಬ ಬೀಜ ಮಂತ್ರ ಜಪಿಸುತ್ತ ನಾವು ಪರಿಸರವನ್ನು ರಕ್ಷಿಸಿದರೆ ಅದಕ್ಕೆ ಪ್ರತಿಯಾಗಿ ಪ್ರಕೃತಿ ನಮ್ಮನ್ನು ಕಾಯುತ್ತದೆ ಎಂದು ಸದಾ ಹಸಿರ ಧ್ಯಾನವನ್ನು ವ್ರತದಂತೆ ಪಾಲಿಸಿಕೊಂಡು ಬಂದ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರನಾರಾಯಣ ಅವರಿಗೆ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ಸುಗಟೂರಿನ ಕೆ.ಅಮರನಾರಾಯಣ ಅವರು ತಮ್ಮ ಮೂರು ದಶಕಕ್ಕೂ ಮೀರಿದ ವೃತ್ತಿ ಬದುಕು ಮಾತ್ರವಲ್ಲದೇ ನಿವೃತ್ತಿಯ ನಂತರವೂ ಹಸಿರಿನ ಕಡು ಮೋಹವನ್ನು ಹೃದಯಾಂತರಾಳದಲ್ಲಿ ಕಾಪಿಟ್ಟುಕೊಂಡು ಬಂದವರು.

ಜಿಲ್ಲಾಧಿಕಾರಿ ಹುದ್ದೆ ಸೇರಿದಂತೆ ಹತ್ತು ಹಲವು ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿ ಆಡಳಿತ ನಡೆಸಿದರೂ ಅಧಿಕಾರದ ಮದ ನೆತ್ತಿಗೇರಿಸಿಕೊಳ್ಳದೆ ತಮ್ಮ ಸರಳತೆ, ಪರಿಸರ ಕಾಳಜಿಯಿಂದಾಗಿ ಜನಮಾನಸದಲ್ಲಿ ಮೆಚ್ಚುಗೆ ಪಡೆದವರು. ‌ತಮಗೆ ದೊರೆತ ಅವಕಾಶಗಳನ್ನು ಬಳಸಿಕೊಂಡು ಪರಿಸರ ಪೂರಕ ಕಾರ್ಯಕ್ರಮಗಳನ್ನು ರೂಪಿಸಿದವರು. ನಿವೃತ್ತಿಯ ನಂತರವೂ ಅಹರ್ನಿಶಿ ಪರಿಸರ ಅಭಿವೃದ್ಧಿಗಾಗಿ ದುಡಿಯುತ್ತಿರುವ ಉತ್ಕಟ ಪರಿಸರ ಪ್ರೇಮಿ.

‘ತನ್ನೊಳಗಿನ ಪರಿಸರ ಪ್ರೀತಿಗೆ ತಾತನೇ ಪ್ರೇರಣೆ’ ಎಂದು ಸ್ಮರಿಸುವ ಅಮರನಾರಾಯಣ, ಅವರಂತೆ ‘ಪ್ರತಿದಿನ - ಪರಿಸರ ದಿನ’ವಾಗಬೇಕು ಎನ್ನುವ ಉದ್ಘೋಷಣೆಯನ್ನು ಆಚರಣೆಗೆ ತಂದವರು. ಜತೆಗೆ, ಜನರಲ್ಲಿ ಪರಿಸರದ ತಲ್ಲಣಗಳ ಬಗ್ಗೆ ಅರಿವು ಮೂಡಿಸುವುದು, ತ್ಯಾಜ್ಯ ನಿರ್ವಹಣೆ ಬಗ್ಗೆ ಕಾರ್ಯತಂತ್ರ ರೂಪಿಸುವ ಮೂಲಕ ಉತ್ತಮ ಪರಿಸರ ನಿರ್ಮಾಣಕ್ಕಾಗಿ ತಮ್ಮ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.

80ರ ದಶಕದಲ್ಲಿ, ಉಪ ವಿಭಾಧಿಕಾರಿಯಾಗಿದ್ದಾಗಲೇ ‘ಶಾಲಾ ವನ’ ನಿರ್ಮಾಣ, ಶ್ರಮದಾನದ ಮೂಲಕ ಗ್ರಾಮಗಳ ಸ್ವಚ್ಛತೆ, ಅರಣ್ಯೀಕರಣಕ್ಕೆ ಒತ್ತು ನೀಡಿದ್ದ ಅಮರನಾರಾಯಣ ಅವರು, ಈವರೆಗೆ ಒಂದು ಕೋಟಿಗೂ ಅಧಿಕ ಸಸಿಗಳ ನಾಟಿ ಮಾಡಿಸಿ ಪ್ರಕೃತಿಯೊಡನೆ ಸಂಭ್ರಮಿಸಿದವರು.

ಹೋದಡೆಯೆಲ್ಲ ತಮ್ಮ ಹಸಿರ ಕಡುಮೋಹದ ಕಂಪು ಪಸರಿಸುವ ಕೆಲಸ ಮಾಡುತ್ತಲೇ ತಮ್ಮದೇ ಆದ ಛಾಪು ಮೂಡಿಸಿರುವ ಇವರು ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತಿ ವರ್ಷ ವಿವಿಧ ಕಾರ್ಯಕ್ರಗಳ ಅಡಿ ಸಾವಿರಾರು ಸಸಿಗಳನ್ನು ನೆಡಲು, ಪರಿಸರ ಸ್ವಚ್ಛವಾಗಿಡಲು ಶ್ರಮಿಸಿದವರು.

‘ಹೊಂಗೆ ಬೆಳೆದರೆ ಹೆಂಗೆ’, ‘ರೈತ ಮಿತ್ರ’, ‘ಹಸಿರು ಹೊನ್ನು’, ‘ಕೋಟಿನಾಟಿ’, ‘ವೃಕ್ಷ – ರಕ್ಷ’, ‘ಕಲ್ಲರಳಿ ಹೂವಾಗಿ ಕಲ್ಲರಳಿ ಹಣ್ಣಾಗಿ’, ‘ಬೋಳು ಗುಡ್ಡಕ್ಕೆ ಬನದ ಮೆರುಗು-ಬೆಳ್ಳಿಗುಡ್ಡಕ್ಕೆ ಹಸಿರ ಸೆರಗು’, ‘ಪರಿಮಳ ವನ’, ‘ಜೀವಿವೈವಿಧ್ಯ ವನ’, ‘ಪ್ರಕೃತಿಯೊಡನೆ ಸಂಭ್ರಮಿಸು’, ‘ದುರ್ಗದ ಮೊರೆ - ಹಸಿರಿಗೆ ಕರೆ’ .. ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಅಮರನಾರಾಯಣ ಅವರೊಳಗಿನ ಉತ್ಕಟ ಪ್ರಕೃತಿ ಪ್ರೀತಿಗೆ ಕನ್ನಡಿ ಹಿಡಿಯುತ್ತವೆ.

2005 ರಿಂದ 2007 ರಲ್ಲಿ ಚಿತ್ರದುರ್ಗ ಮತ್ತು 2009 ರಿಂದ 10ರ ವರೆಗೆ ದಾವಣೆಗೆರೆ ಜಿಲ್ಲಾಧಿಕಾರಿಯಾಗಿ ಇವರು ರೂಪಿಸಿದ ಹತ್ತು ಹಲವು ಪರಿಸರ ಸ್ನೇಹಿ ಕಾರ್ಯಕ್ರಮಗಳು ‘ಹಸಿರು ಜಿಲ್ಲಾಧಿಕಾರಿ’ ಎಂಬ ಅಭಿದಾನ ತಂದುಕೊಟ್ಟವು.

ಸರ್ಕಾರದ ವಿವಿಧ ಇಲಾಖೆ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ, ಮೈಸೂರು ವಿಶ್ವವಿದ್ಯಾಲಯ ಮತ್ತು ಇತರ ಅನೇಕ ಕಾಲೇಜುಗಳ ವಿದ್ಯಾರ್ಥಿಗಳೊಡನೆ ಎನ್.ಸಿ.ಸಿ ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ಸೇವಾ ಯೋಜನೆ, ನಾಗರಿಕರ ಸಹಭಾಗಿತ್ವದಲ್ಲಿ ರೂಪಿಸಿದ ಸಾಕಷ್ಟು ಶ್ರಮದಾನ ಬರಡು ನೆಲದಲ್ಲಿ ಹಸಿರು ಮೂಡಲು ಕಾರಣವಾಗಿದೆ.

ಪರಿಸರ ರಕ್ಷಣೆ ಮಾತ್ರವಲ್ಲದೇ ಬರದ ಜಿಲ್ಲೆಗಳಲ್ಲಿ ಜಲ ಸಂರಕ್ಷಣೆಗೆ ತಮ್ಮದೇ ಆದ ಕಾರ್ಯಕ್ರಮಗಳನ್ನು ರೂಪಿಸಿ ಸಾಂಪ್ರಾದಾಯಿಕ ಜಲಪಾತ್ರೆಗಳಾದ ಕಲ್ಯಾಣಿ, ಕೆರೆ, ಪುಷ್ಕರಣಿಗಳನ್ನು ಸ್ವಚ್ಛಗೊಳಿಸುವ ಮೂಲಕ ಜಲಸಾಕ್ಷರತೆಯ ಪಾಠ ಹೇಳಿದವರು.

ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಹಸಿರು ಕರ್ನಾಟಕ ಯೋಜನೆ ಅಡಿ ‘ಕೋಟಿ ನಾಟಿ’ ಯೋಜನೆ ರೂಪಿಸಿ 2019 ರಿಂದ ಮಳೆಗಾಲದಲ್ಲಿ ಒಂದು ಕೋಟಿ ಗಿಡ, 10 ಕೋಟಿ ಬೀಜದ ಉಂಡೆ ಪ್ರಸರಣ ಮಾಡುವ ರೋಟರಿ ಬೆಂಗಳೂರು ಆರ್ಚಡ್ಸ್‍ ಸಂಸ್ಥೆಗೆ ತಾಂತ್ರಿಕ, ಆಡಳಿತಾತ್ಮಕ ಮಾರ್ಗದರ್ಶನ ನೀಡುತ್ತಿದ್ದಾರೆ.

ಅಮರ ನಾರಾಯಣ ಅವರ ಈ ಪರಿಸರ ಪ್ರೀತಿಗೆ ಈ ಹಿಂದೆ ರಾಜ್ಯ ವಿಶೇಷ ಪರಿಸರ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT