ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಅಚ್ಚುಮೆಚ್ಚಿನ ಕುಂಕುಮದ ಗಿಡ

Published 29 ಮೇ 2023, 16:30 IST
Last Updated 29 ಮೇ 2023, 16:30 IST
ಅಕ್ಷರ ಗಾತ್ರ

ಶಿಡ್ಲಘಟ್ಟ : ಇದೀಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲರವ ಪ್ರಾರಂಭವಾಗಿದೆ. ತಾಲ್ಲೂಕಿನ ವರದನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳು ಕೈ, ಮೈ, ಮುಖಕ್ಕೆ ಕೆಂಬಣ್ಣ ಬಳಿದುಕೊಂಡು ಆಡುತ್ತಿದ್ದುದು ಕಂಡುಬಂದಿತು.

ಈ ಕೆಂಬಣ್ಣ ಮೂಲ ಹುಡುಕಿದಾಗ ಸಿಕ್ಕಿದ್ದು ಶಾಲೆಯ ಆವರಣದಲ್ಲಿನ ಕುಂಕುಮದ ಗಿಡ. ಹೌದು, ಈ ಶಾಲೆಯ ಆವರಣದಲ್ಲಿ ಎಂಟು ಕುಂಕುಮದ ಪೊದೆಯಂತೆ ಸಾಧಾರಣ ಎತ್ತರಕ್ಕೆ ಬೆಳೆದ ಮರಗಳಿವೆ. ಈ ಮರಗಳಲ್ಲಿ ದ್ರಾಕ್ಷಿ ಗೊಂಚಲಿನಂತೆ ಸುಮಾರು 10-15 ಕಾಯಿಗಳ ಸಮೂಹವಿರುವ ಕುಂಕುಮ ಬಣ್ಣದ ಕಾಯಿಗಳಿದ್ದು, ಆಕರ್ಷಣೀಯವಾಗಿರುತ್ತವೆ. ಈ ಕಾಯಿಯನ್ನು ಬಿಡಿಸಿದರೆ ಅದರೊಳಗೆ ಪುಟಾಣಿ ಬೀಜಗಳಿರುತ್ತವೆ. ಅವನ್ನು ಅಂಗೈನಲ್ಲಿ ಹಾಕಿ ಹೊಸಕಿದರೆ ಸಾಕು ಕೈಯೆಲ್ಲಾ ಕೇಸರಿಕೆಂಪು ಬಣ್ಣವಾಗುತ್ತದೆ.

ಕುಂಕುಮದ ಬೀಜವನ್ನು ಕೇಸರಿಗೆ ರಂಗಾಗಿಯೂ, ಮಕ್ಕಳ ಕೆನ್ನೆಗೆ “ರೋಸ್” ರೂಪದಲ್ಲಿಯೂ, ಉಗುರುಗಳಿಗೆ ನೇಲ್ ಪಾಲಿಶ್ ಆಗಿಯೂ ಉಪಯೋಗಿಸುತ್ತಾರೆ. ಮಕ್ಕಳು ಚಿತ್ರಗಳನ್ನು ರಚಿಸಿ ಅವುಗಳಲ್ಲಿ ಬಣ್ಣ ತುಂಬಲೂ ಈ ಬೀಜ ಬಳಸುವರು. ಅದಕ್ಕೆಂದೇ ಕೆಲವರು ಈ ಗಿಡವನ್ನು ಮದರಂಗಿ ಎಂದು ಕರೆಯುವರು.

ಸಿಂಧೂರಿ(ಬಿಕ್ಸಾ ಒರಿಲ್ಲಾನಾ) ಬಹೂಪಯೋಗಿ ಸಸ್ಯ. ಸ್ವಾಭಾವಿಕ ಕೇಸರಿ ಕೆಂಪು ಬಣ್ಣಕ್ಕಾಗಿ ಈ ಗಿಡವನ್ನು ಬೆಳಸಲಾಗುತ್ತದೆ. ಇದನ್ನು ಸಿಧೂರಪುಷ್ಪಿ, ಸಿಂಧೂರಿ, ತ್ರಿಷ್ಣಪುಷ್ಪಿ, ಸುಕೋಮಲ, ರಕ್ತಬೀಜ, ರಂಗುಮಲೆ ಕಾಯಿ ಹಾಗೂ ಇಂಗ್ಲಿಷ್ ನಲ್ಲಿ ಅನ್ನಟ್ಟೊ, ಲಿಪ್ ಸ್ಟಿಕ್ ಮರ ಎನ್ನುವರು. ದಕ್ಷಿಣ ಅಮೆರಿಕಾ ಮೂಲದ ಈ ಗಿಡ 2-5 ಮೀಟರ್ ಎತ್ತರ ಬೆಳೆಯುತ್ತದೆ. ಇದರ ಬೀಜದಿಂದ ಬರುವ ಬಣ್ಣವನ್ನು ಅಡುಗೆಗೂ ಮತ್ತು ಬಟ್ಟೆ ತಯಾರಿಸುವಾಗ ಬಳಸಲಾಗುತ್ತದೆ. ನಮ್ಮ ಶಾಲೆಯ ಮಕ್ಕಳಿಗಂತೂ ಇದು ಅಚ್ಚುಮೆಚ್ಚು ಎನ್ನುತ್ತಾರೆ ಶಿಕ್ಷಕ ಎಲ್.ನಾಗಭೂಷಣ್.

ಕುಂಕುಮದ ಗಿಡದ ಹೂ
ಕುಂಕುಮದ ಗಿಡದ ಹೂ
ಗೊಂಚಲಿನಲ್ಲಿ ಬಿಡುವ ಕುಂಕುಮದ ಕಾಯಿಗಳು
ಗೊಂಚಲಿನಲ್ಲಿ ಬಿಡುವ ಕುಂಕುಮದ ಕಾಯಿಗಳು
ಕುಂಕುಮದ ಬೀಜಗಳಿಂದ ಅಂಗೈಗೆ ಬಣ್ಣ ಮಾಡಿಕೊಂಡಿರುವ ಶಾಲೆಯ ಬಾಲಕ
ಕುಂಕುಮದ ಬೀಜಗಳಿಂದ ಅಂಗೈಗೆ ಬಣ್ಣ ಮಾಡಿಕೊಂಡಿರುವ ಶಾಲೆಯ ಬಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT