ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಪ್ಪುನೇರಳೆಗೆ ನುಸಿ ಪೀಡೆ ಬಾಧೆ: ರೈತರ ಆತಂಕ

ಘಟಮಾರನಹಳ್ಳಿ ತೋಟಕ್ಕೆ ವಿಜ್ಞಾನಿಗಳ ಭೇಟಿ l ಔಷಧಿ ಸಿಂಪಡಿಸಲು ಬೆಳೆಗಾರರಿಗೆ ಸಲಹೆ
Last Updated 12 ಆಗಸ್ಟ್ 2021, 5:33 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಹಲವಾರು ಜಾತಿಯ ನುಸಿಹುಳುಗಳು ಹಿಪ್ಪುನೇರಳೆ ಸಸ್ಯಗಳಿಗೆ ಬಾಧೆ ಕೊಡುತ್ತವೆ. ಇವು ಸಾಮಾನ್ಯವಾಗಿ ಹಿಪ್ಪುನೇರಳೆ ಎಳೆಯ ಬಲಿಯುತ್ತಿರುವ ಸುಳಿಗಳನ್ನು ಹಾಳು ಮಾಡುತ್ತವೆ. ಇವುಗಳ ಕಾಟದಿಂದ ಬೆಳೆಯುವ ಭಾಗಗಳ ಜೀವಕೋಶಗಳು ನಾಶವಾಗಿ ಚಿಗುರು ಸ್ಥಗಿತಗೊಂಡು ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಔಷಧೋಪಚಾರ ಮಾಡಿ ರೋಗವನ್ನು ನಿಯಂತ್ರಿಸಬಹುದು ಎಂದು ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಡಿ.ಎಂ. ಆಂಜನೇಯಗೌಡ ತಿಳಿಸಿದರು.

ತಾಲ್ಲೂಕಿನ ಘಟಮಾರನಹಳ್ಳಿಯ ಪ್ರಕಾಶ್ ಎಂಬುವರ ಹಿಪ್ಪುನೇರಳೆ ತೋಟಕ್ಕೆ ಭೇಟಿ ನೀಡಿ ಅವರು ಹಿಪ್ಪುನೇರಳೆಗೆ ಬಾಧಿಸುವ ಬ್ರಾಡ್ ನುಸಿ (ಪಾಲಿಫಾಗೋಟಾರ್ಸೋನೆಮಸ್ ಲ್ಯಾಟಿಸ್) ಮತ್ತು ಅದರ ನಿರ್ವಹಣೆ ಕುರಿತಾಗಿ ರೇಷ್ಮೆ ಬೆಳೆಗಾರರಿಗೆ ಮಾಹಿತಿ ನೀಡಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ನುಸಿ ಪೀಡೆಯು ಈ ಬಾರಿ ಮಳೆಗಾಲದ ಆರಂಭದಲ್ಲಿ ಕಾಣಿಸಿಕೊಂಡಿದೆ. ನುಸಿ ಪೀಡಿತ ಸೊಪ್ಪಿಗೆ ಆರಂಭದಲ್ಲಿ ನೀರನ್ನು ಎಲೆಯ ಕೆಳಭಾಗದಿಂದ ಸಿಂಪಡಿಸಬೇಕು. ನಂತರ ವಿಡಿ ಗ್ರೀನ್ ಪಾತ್ ಔಷಧಿ ಅಥವಾ ಎರಾ ಸೇಪ್‌ಗಾರ್ಡ್ ಸಸ್ಯಜನ್ಯ ಔಷಧಿಯನ್ನು ಹತ್ತು ದಿನಗಳ ಅಂತರದಲ್ಲಿ ಎರಡು ಬಾರಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.

ವಿಡಿ ಗ್ರೀನ್ ಪಾತ್ ಔಷಧಿ ಸಿಂಪಡಿಸಿದ ಐದು ದಿನಗಳ ನಂತರ ಹುಳುಗಳಿಗೆ ಕೊಡಬಹುದು. ಎರಾ ಸೇಪ್ ಗಾರ್ಡ್ ಔಷಧಿ ಸಿಂಪಡಿಸಿದ ಇಪ್ಪತ್ತು ದಿನಗಳ ನಂತರ ಹುಳುಗಳಿಗೆ ಕೊಡಬಹುದು. ಅಂತರ ಹೆಚ್ಚಾಗಿರಿಸಿ ಗಾಳಿ, ಬೆಳಕು ಸರಾಗವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದರು.

ಚಿಂತಾಮಣಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಕೆ.ಎಸ್. ವಿನೋದ ಮಾತನಾಡಿ, ಆರಂಭಿಕ ಹಂತದಲ್ಲಿ ಬಾಧಿತ ಕುಡಿ ಚಿಗುರುಗಳನ್ನು ತೆಗೆದುಹಾಕಬೇಕು. ನುಸಿ ಹುಳುಗಳ ಸಂಖ್ಯೆ ನಿಯಂತ್ರಿಸಲು ಎಲೆಗಳ ಕೆಳಭಾಗದಲ್ಲಿ ರಭಸವಾಗಿ ನೀರಿನ ಸಿಂಪಡಣೆ ಮಾಡಬೇಕು ಎಂದು ಹೇಳಿದರು.

ಈ ನುಸಿ ಪೀಡೆಯು ನುಸಿ ಪೀಡೆಯ ಔಷಧಿಯಿಂದಲೇ ನಾಶವಾಗುತ್ತದೆ ಎಂಬುದನ್ನು ರೈತರು ಮನದಲ್ಲಿಟ್ಟುಕೊಳ್ಳಬೇಕು. ಔಷಧಿ ಸಿಂಪಡಿಸುವಾಗಲೂ ಎಲೆಯ ತಳಭಾಗದಿಂದಲೇ ಸಿಂಪಡಿಸಬೇಕು. ನುಸಿ ಪೀಡೆ ಎಲೆಯ ತಳಭಾಗದಲ್ಲೇ ತಳವೂರುವುದರಿಂದ ಬೇಗನೆ ಸಾವನ್ನಪ್ಪುತ್ತವೆ ಎಂದು ವಿವರಿಸಿದರು.

ಕ್ಯಾಲನೂರು ಕ್ರಾಸ್ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ.ನರೇಂದ್ರಕುಮಾರ್, ರೇಷ್ಮೆ ಸಹಾಯಕ ನಿರ್ದೇಶಕ ಕೆ. ತಿಮ್ಮರಾಜು, ರೇಷ್ಮೆ ನಿರೀಕ್ಷಕ ಸೋಮಣ್ಣ, ಬೆಳೆಗಾರರಾದ ಪ್ರಕಾಶ್, ಎಚ್.ಎಂ. ನಾರಾಯಣಸ್ವಾಮಿ, ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT