ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ತೊಟ್ಟಿಯಂತಾದ ಎಪಿಎಂಸಿಗಳು

ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಎಪಿಎಂಸಿಯಲ್ಲಿಯೂ ಸ್ವಚ್ಛತೆ, ನಿರ್ವಹಣೆ ಇಲ್ಲ
Last Updated 26 ಏಪ್ರಿಲ್ 2021, 4:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗಳು ಕಸದ ತೊಟ್ಟಿಗಳಂತಾಗಿವೆ. ಕೊಳೆತು ನಾರುವ ಟೊಮೆಟೊ, ಹೂವು– ತರಕಾರಿ ರಾಶಿ, ಮಂಡಿಯುದ್ದದ ಗುಂಡಿ ಬಿದ್ದ ರಸ್ತೆಗಳು, ನೀರಿಲ್ಲದ ಒಣಗಿ ಭಣಗುಡುವ ಟ್ಯಾಂಕ್‌ಗಳು, ‌ಅಧ್ವಾನಗೊಂಡ ವಾಹನಗಳ ನಿಲುಗಡೆ ವ್ಯವಸ್ಥೆ, ಆಳೆತ್ತರ ಬೆಳೆದ ಪೊದೆಗಳು...ಹೀಗೆ ಸಮಸ್ಯೆಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಚಿಕ್ಕಬಳ್ಳಾಪುರದಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಒಮ್ಮೆ ಸುತ್ತುಹಾಕಿದರೆ ಇದೇನಿದು ಈ ಪರಿಯ ಅಧ್ವಾನ ಎನಿಸುತ್ತದೆ. ಕೊಳೆತ ಟೊಮೆಟೊಗಳು ರಾಶಿ ರಾಶಿಯಾಗಿ ಕಂಡು ಬರುತ್ತವೆ. ಅದರಲ್ಲಿಯೂ ಮಳೆಗಾಲದಲ್ಲಿ ಇಡೀ ವಾತಾವರಣ ದುರ್ವಾಸನೆ ಆಗಿರುತ್ತದೆ.

ಎಪಿಎಂಸಿ 50 ವರ್ಷಗಳನ್ನು ಪೂರೈಸಿದರೂ ಮಾರುಕಟ್ಟೆಗೆ ಬೇಕಾದ ಸುಸಜ್ಜಿತ ಮೂಲಸೌಕರ್ಯ ಕೊರತೆ, ಸ್ವಚ್ಛತೆ ಎದ್ದು ಕಾಣುತ್ತದೆ. 28 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹೂವಿನ ವ್ಯಾಪಾರದ ಜತೆಗೆ ಕುರಿ ದನದ ಸಂತೆಯೂ ನಡೆಯುತ್ತದೆ. ಮಾರುಕಟ್ಟೆಗೆ ನಿತ್ಯ ಲಾರಿಗಳು, ನೂರಾರು ಗಾಡಿಗಳು ಬರುತ್ತವೆ.

ಕುರಿ ಸಂತೆಯ ಸ್ಥಳ ಕಸವಿಲೇವಾರಿಯ ತಾಣವಾಗಿದೆ. ಕೊಳೆತ ತರಕಾರಿ, ಹೂ ಎಲ್ಲವೂ ಈ ಆವರಣಕ್ಕೆ ಎಸೆಯಲಾಗುತ್ತಿದೆ. ರಸ್ತೆ ಒತ್ತುವರಿ ಮಾಡಿಕೊಂಡು ನಿಲ್ಲುವ ಲಾರಿಗಳು, ಎಲ್ಲೆಂದರಲ್ಲಿ ಒಳಗೆ ನುಗ್ಗಲು ಹೋಗಿ ಸಿಕ್ಕಿಹಾಕಿಕೊಳ್ಳುವ ಚಿಕ್ಕಪುಟ್ಟ ವಾಹನಗಳು, ಮಳಿಗೆ ತಲುಪಲು ಪರದಾಡುವ ರೈತರು, ಹೊರ ಬರಲಾರದೆ ಪರದಾಡುವ ಸವಾರರು, ಮೂತ್ರ ವಿಸರ್ಜನೆಗೆ ಪರದಾಡುವ ಜನರು...ಹೀಗೆ ಸಮಸ್ಯೆಗಳ ಪಟ್ಟಿ ಮತ್ತೂ ಬೆಳೆಯುತ್ತದೆ. ಕಾಂಗ್ರೆಸ್ ಗಿಡ, ಆಳೆತ್ತರದ ಪೊದೆಗಳು ಮಾರುಕಟ್ಟೆಯನ್ನು ಹೆಚ್ಚಿನದಾಗಿಯೇ ಆವರಿಸಿವೆ.

ಕೊಳೆತ ತರಕಾರಿಗಳನ್ನು ಹಾಕಲು ಅಲ್ಲಲ್ಲಿ ಕಸದ ಘಟಕಗಳಿವೆ. ಆದರೆ ಈ ಕಸ ಮಾತ್ರ ರಸ್ತೆಯಲ್ಲಿಯೇ ಬಿದ್ದಿರುತ್ತದೆ. ಸಣ್ಣ ಮಳೆ ಸುರಿದರೂ ಇಡೀ ವಾತಾವರಣ ದುರ್ವಾಸನೆಯುಕ್ತವಾಗುತ್ತದೆ. ನಿರ್ವಹಣೆಯ ಕೊರತೆ ಎದ್ದು
ಕಾಣುತ್ತದೆ.

ರೈತರು, ರಫ್ತುದಾರರು, ಕಮಿಷನ್‌ ಏಜೆಂಟರು, ವರ್ತಕರು, ದಾಸ್ತಾನುದಾರರು, ಚಿಲ್ಲರೆ ಮಾರಾಟಗಾರರು, ಹಮಾಲಿಗರು ಹೀಗೆ ನಿತ್ಯ ಸಾವಿರಾರು ಜನರು ಇಲ್ಲಿ ವ್ಯಾಪಾರ ವಹಿವಾಟಿಗೆ ಬರುವರು. ಆದರೆ ಸೌಕರ್ಯಗಳು ದೊರೆಯುತ್ತಿಲ್ಲ ಎನ್ನುವ ಆರೋಪವೂ ಇದೆ.

ದುರ್ವಾಸನೆಯ ಗೂಡು

ಬಾಗೇಪಲ್ಲಿ: ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ವ್ಯಾಪಾರಿಗಳು, ಗ್ರಾಹಕರು ನಡೆದಾಡಲು ಆಗದಷ್ಟು ರೀತಿಯಲ್ಲಿ ಎಲ್ಲೆಂದರಲ್ಲಿ ರಾಶಿ ರಾಶಿ ಕೊಳೆತ ತರಕಾರಿ, ತರಕಾರಿಗಳ ತ್ಯಾಜ್ಯ, ಕಸ ಕಡ್ಡಿಗಳು ತುಂಬಿವೆ. ಹೀಗಿದ್ದರೂ ಮಾರುಕಟ್ಟೆ ಅಧಿಕಾರಿಗಳು, ಆಡಳಿತ ಮಂಡಳಿ ಗಮನ ಹರಿಸುತ್ತಿಲ್ಲ.

ರೈತರು ಟೊಮೊಟೂ, ಕ್ಯಾರೆಟ್, ಮೂಲಂಗಿ, ಬೀಟ್‌ರೂಟ್, ಈರುಳ್ಳಿ ಸೇರಿದಂತೆ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ತರಕಾರಿಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಾಗಿಸಿ ದಲ್ಲಾಳಿಗಳ ಮೂಲಕ ಮಾರಾಟ ಮಾಡುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು, ಏಜೆಂಟರು, ರೈತರು ತ್ಯಾಜ್ಯ ಹಾಗೂ ಕೊಳೆತ ತರಕಾರಿಗಳನ್ನು ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ.

ಪಟ್ಟಣದ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಟಿ.ಬಿ.ಕ್ರಾಸ್‌ನಲ್ಲಿ 5.37 ಎಕರೆಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಇದೆ. ಕಾಂಪೌಂಡ್ ವ್ಯವಸ್ಥೆ ಇಲ್ಲ. ಕಿರಿದಾದ ರಸ್ತೆಗಳಲ್ಲಿ ನಿತ್ಯ ನೂರಾರು ಮಂದಿ ಸಂಚರಿಸುವರು. ಕೊಳೆತ-ತ್ಯಾಜ್ಯ ತರಕಾರಿಗಳ ಹಾಗೂ ಕೆಸರು ಮಣ್ಣಿನ ಮೇಲೆ ಜನರು ನಡೆಯಬೇಕಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿರುವುದರಿಂದ ಕುಡಿಯುವ ನೀರು ಸಿಗುತ್ತಿಲ್ಲ. ಶೌಚಾಲಯಗಳು ಇದ್ದರೂ ಸಮರ್ಪಕವಾಗಿ ನಿರ್ವಹಣೆ ಇಲ್ಲ.

ತಾಲ್ಲೂಕಿನಲ್ಲಿ ಹೆಚ್ಚಾಗಿ ಬೆಳೆಯುತ್ತಿರುವ ತರಕಾರಿಗಳು ದಲ್ಲಾಳಿಗಳ ಮೂಲಕ ದೆಹಲಿ, ಉತ್ತರಪ್ರದೇಶ, ರಾಜಸ್ಥಾನ, ಹರ್ಯಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಗೆ ಸಾಗಾಣಿಕೆ ಆಗುತ್ತಿವೆ. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸಿಗದ ಕಾರಣ ತರಕಾರಿಗಳನ್ನು ಪ್ರಾಂಗಣದಲ್ಲಿಯೇ ರಾಶಿರಾಶಿಗಳಾಗಿ ಬಿಸಾಡುತ್ತಿದ್ದಾರೆ.

ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿ ಬೆಳಿಗ್ಗೆ ಮಾತ್ರ ತರಕಾರಿ ಹರಾಜು ಮಾಡುವಂತೆ ಕೆಲ ರೈತರ ಹಾಗೂ ವ್ಯಾಪಾರಿಗಳು ಒತ್ತಾಯಿಸುವರು. ಕೆಲ ಚಿಲ್ಲರೆ ವ್ಯಾಪಾರಿಗಳು ದಿನಪೂರ್ತಿ ತರಕಾರಿ ಮಾರಾಟ ಮಾಡುತ್ತಿರುವುದನ್ನು ರೈತರು ವಿರೋಧಿಸುವರು.

ಚಿಂತಾಮಣಿ: ನಗರದ ಚೇಳೂರು ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆ 25.35 ಎಕರೆ ಇದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಇತರ ರಾಜ್ಯಗಳಿಂದಲೂ ವ್ಯಾಪಾರಿಗಳು ಬರುತ್ತಾರೆ.

ಎಪಿಎಂಸಿ ‌ವಾರದ 7 ದಿನಗಳು ಕಾರ್ಯನಿರ್ವಹಿಸುತ್ತವೆ. ಪ್ರಮುಖವಾಗಿ ರಾಗಿ, ಭತ್ತ, ತೊಗರಿ ಸೇರಿದಂತೆ ಎಲ್ಲ ರೀತಿಯ ಆಹಾರ ಪದಾರ್ಥಗಳು, ತರಕಾರಿಗಳು, ಹುಣಸೆಹಣ್ಣು, ಗೋಡಂಬಿ, ದನಿಯಾ ಹೆಚ್ಚಾಗಿ ಮಾರಾಟ ನಡೆಯುತ್ತದೆ. ಕುರಿ, ಮೇಕೆ, ಹಸು ಸೇರಿದಂತೆ ಜಾನುವಾರುಗಳ ಸಂತೆಯೂ ಇಲ್ಲೇ ನಡೆಯುತ್ತದೆ. ಟೊಮೆಟೊ, ಹುಣಸೆಹಣ್ಣಿಗೆ ಹೆಸರುವಾಸಿಯಾಗಿದೆ.

ಶನಿವಾರ, ಭಾನುವಾರ ಆಹಾರಪದಾರ್ಥಗಳು, ಜಾನುವಾರುಗಳ ಮಾರಾಟ, ಮಂಗಳವಾರ, ಶುಕ್ರವಾರ ಹುಣಸೆಹಣ್ಣು, ಸೋಮವಾರ ಗೋಡಂಬಿ, ಎಲ್ಲ ದಿನಗಳಲ್ಲೂ ತರಕಾರಿ, ಟೊಮೆಟೊ ವ್ಯಾಪಾರ ನಡೆಯುತ್ತದೆ.

ಉತ್ತರಪ್ರದೇಶದ ಹಲವು ರಾಜ್ಯಗಳಿಗೆ ಇಲ್ಲಿನ ಟೊಮೆಟೊ, ತರಕಾರಿಗಳು ರವಾನೆ ಆಗುತ್ತದೆ. ಆದರೆ ಎಪಿಎಂಸಿಯಲ್ಲಿ ವ್ಯಾಪಾರಿಗಳಿಗೆ, ಗ್ರಾಹಕರಿಗೆ, ಹಮಾಲಿಗಳು ಸೇರಿದಂತೆ ಕೂಲಿ ಕಾರ್ಮಿಕರಿಗೆ ಸೌಲಭ್ಯಗಳಿಲ್ಲ. ರೈತರಿಗೆ ರೈತಭವನ ಅಥವಾ ವಿಶ್ರಾಂತಿ ಕೊಠಡಿ, ಸಮರ್ಪಕವಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರೈತರಿಗೆ ಮತ್ತು ಕಾರ್ಮಿಕರಿಗೆ ಕ್ಯಾಂಟೀನ್ ವ್ಯವಸ್ಥೆಯಿಲ್ಲ. ಇಂದಿರಾ ಕ್ಯಾಂಟೀನ್ ಇದ್ದೂ ಇಲ್ಲದಂತಾಗಿದೆ ಎನ್ನುತ್ತಾರೆ ರೈತರು.

ಸ್ವಚ್ಛತೆಯಂತೂ ಮರೀಚಿಕೆಯಾಗಿದೆ. ಮಾರುಕಟ್ಟೆಗೆ ಬರುವ ಟೊಮೆಟೊ ಸೇರಿದಂತೆ ವಿವಿಧ
ಪದಾರ್ಥಗಳ ಕಳಪೆಯನ್ನು ಬಿಸಾಡುತ್ತಾರೆ. ಅವು ರಾಶಿ ರಾಶಿಯಾಗಿ ಕೊಳೆತು ನಾರುತ್ತವೆ.
ದುರ್ವಾಸನೆ ಬಡಿಯುತ್ತದೆ. ಮಳೆಗಾಲದಲ್ಲಿ ನೀರು, ಕೊಚ್ಚೆ ಸೇರಿ ಮಾರುಕಟ್ಟೆಯಲ್ಲಿ ಹೆಜ್ಜೆ ಇಡುವುದು ಅಸಹ್ಯ ಎನಿಸುತ್ತದೆ.

ನಿತ್ಯ ಕೋಟ್ಯಂತರ ವ್ಯವಹಾರ ನಡೆಯುತ್ತದೆ. ರೈತರು ಮತ್ತು ವ್ಯಾಪಾರಿಗಳಿಗೆ ಹಣದ ವರ್ಗಾವಣೆಗಾಗಿ ಬ್ಯಾಂಕ್ ಶಾಖೆ ಇಲ್ಲ. ಹಿಂದೆ ಡಿಸಿಸಿ ಬ್ಯಾಂಕಿನ
ಶಾಖೆ ಕಾರ್ಯನಿರ್ವಹಿಸುತ್ತಿತ್ತು. ಡಿಸಿಸಿ ಬ್ಯಾಂಕ್ ದಿವಾಳಿ ಆಗಿದ್ದಾಗ ಶಾಖೆ
ಮುಚ್ಚಲಾಗಿತ್ತು. ಪ್ರಸ್ತುತ ಡಿಸಿಸಿ ಬ್ಯಾಂಕ್ ಪುನರುಜ್ಜೀವನಗೊಂಡಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇಲ್ಲಿನ ಶಾಖೆಯನ್ನು ತೆರೆಯುವ ಬಗ್ಗೆ ಯಾರು ಗಮನಹರಿಸಲಿಲ್ಲ.

ಶಿಡ್ಲಘಟ್ಟ: ರೈತರು ಮತ್ತು ವ್ಯಾಪಾರಿಗಳ ನಡುವೆ ಬಾಂಧ್ಯವ ವೃದ್ಧಿಸುವ ಸೇತುವಾಗಬೇಕಾಗಿದ್ದ ಎಪಿಎಂಸಿ ಶಿಡ್ಲಘಟ್ಟದಲ್ಲಿ ದಳ್ಳಾಳಿಗಳ ಮೂಲಕ ನಡೆಯುವಂತಾಗಿದೆ.

ನಗರದ ಸಂತೆ ಮೈದಾನದಲ್ಲಿ ಹರಾಜು ಕಟ್ಟೆ ಮತ್ತು ಗೋದಾಮು ಕಟ್ಟಡ ಹಾಳುಬಿದ್ದಿದೆ. ಸದಾ ಬೀಗ ಜಡಿದಿರುವ ಈ ಕಟ್ಟಡ ಅದರ ಉದ್ದೇಶ ಈಡೇರಿಸಲಾಗದೇ ಶಿಥಿಲವಾಗಿದೆ. ಪ್ರತಿ ಸೋಮವಾರ ನಡೆಯುವ ಸಂತೆಯ ದಿನ ಬೆಳಿಗ್ಗೆ ಕೆಲವು ದಳ್ಳಾಳಿಗಳು ಬಂದು ರೈತರಿಂದ ವ್ಯಾಪಾರಿಗಳಿಗೆ ಉತ್ಪನ್ನಗಳನ್ನು ವರ್ಗಾಯಿಸಿ ತಮ್ಮ ಪಾಲು ಪಡೆದು ಹೋಗುವುದು ಇಲ್ಲಿ ವಾಡಿಕೆ. ಸೂಕ್ತ ಬೆಲೆ ಸಿಗದ ರೈತನ ಬವಣೆ ನೀಗಿಸುವಲ್ಲಿ ಇತ್ತ ರೈತ ಸಂಘದವರೂ ಅತ್ತ ಜನಪ್ರತಿನಿಧಿಗಳೂ ವಿಫಲರಾಗಿದ್ದಾರೆ.

‘ರೈತರ ಉತ್ಪನ್ನಗಳನ್ನು ತೂಕ ಮಾಡಲು ಸ್ಕೇಲ್ ಮತ್ತು ಯಾರ್ಡ್‌ನಲ್ಲಿ ಅಧಿಕಾರಿಯನ್ನು ಇರಿಸಬೇಕು. ಅಧಿಕಾರಿಯು ಸಮರ್ಪಕವಾಗಿ ಕೆಲಸ ನಿರ್ವಹಿಸಿದಲ್ಲಿ ಹೆಚ್ಚು ರೈತರು ತಮ್ಮ ಉತ್ಪನ್ನಗಳೊಂದಿಗೆ ಬಂದು ಒಳ್ಳೆಯ ಬೆಲೆ ಪಡೆಯಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಬೂದಾಳ ರಾಮಾಂಜಿ.

ಗೌರಿಬಿದನೂರು: ನಗರ ಹೊರವಲಯದ ಎಪಿಎಂಸಿ ಮಾರುಕಟ್ಟೆ 16.12 ಎಕರೆಯಲ್ಲಿ ನಿರ್ಮಾಣವಾಗಿದೆ. ಇದರಲ್ಲಿ ರಾಜ್ಯ ಆಹಾರಧಾನ್ಯ ಗೋದಾಮು ಸಹ ನಿರ್ಮಾಣವಾಗಿದೆ.

ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಸದ್ಯಕ್ಕೆ ನಿತ್ಯ ದ್ವಿತೀಯ ಹಂತದ ತರಕಾರಿ ಮಾರುಕಟ್ಟೆ ಕಾರ್ಯನಿರ್ವಹಿ ಸುತ್ತಿದೆ. 16 ಮಳಿಗೆಗಳನ್ನು ಬಾಡಿಗೆ ನೀಡಲಾಗಿದೆ. ಇದರಲ್ಲಿ ವರ್ತಕರು ತರಕಾರಿ ಮಾರುಕಟ್ಟೆ ನಡೆಸುವರು. ಮಾರುಕಟ್ಟೆ ಪ್ರಾಂಗಣದಲ್ಲಿ ಪ್ರತಿ ಭಾನುವಾರ ಕುರಿ ಮತ್ತು‌ ಮೇಕೆ ವ್ಯಾಪಾರ ನಡೆಯುತ್ತದೆ. ‌ಈ ಹಿಂದೆ ಇಲ್ಲಿನ ಅಧಿಕಾರಿಗಳು ಪ್ರತಿ ರಾಸಿಗೆ ₹ 1 ಸುಂಕ ಪಡೆಯುತ್ತಿದ್ದರು. ಆದರೆ ಇದೀಗ ಅದು ರಾಜ್ಯ ಕುರಿ ಮತ್ತು‌ ಉಣ್ಣೆ ನಿಗಮ ನಿರ್ವಹಣೆ ಮಾಡಲಿದೆ.

ಪ್ರಾಂಗಣದಲ್ಲಿ ಸ್ವಚ್ಛತೆ ಕಾಪಾಡಲು ಸರ್ಕಾರದಿಂದ ಯಾವುದೇ ಟೆಂಡರ್ ಪ್ರಕ್ರಿಯೆ ಇಲ್ಲ. ಇದನ್ನು ಇಲ್ಲಿನ ಸಿಬ್ಬಂದಿಯೇ ನಿರ್ವಹಿಸುವರು. ಒಟ್ಟು 14 ಮಂದಿ‌ ಸಿಬ್ಬಂದಿ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಸದಸ್ಯಕ್ಕೆ ಒಬ್ಬರು ಎಪಿಎಂಸಿ ಕಾರ್ಯದರ್ಶಿ, 1 ಲೆಕ್ಕಿಗರು, 1 ದ್ವಿತೀಯ ದರ್ಜೆ ಸಹಾಯಕರು ಸೇರಿದಂತೆ 3 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.

ಚಾಲಕ, ಭದ್ರತಾ ಸಿಬ್ಬಂದಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಂಗಣದಲ್ಲಿ ಬ್ಯಾಂಕ್ ಕಟ್ಟಡ, ವೇ ಬ್ರಿಡ್ಜ್, ಮುಚ್ಚು ಹರಾಜು ಕಟ್ಟೆಗಳು, ಶೌಚಾಲಯ, ಕುಡಿಯುವ ‌ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಸೌಲಭ್ಯಗಳಿವೆ. ಆದರೆ ಸರ್ಕಾರದ ಹೊಸ ನೀತಿಗಳ ಪ್ರಕಾರ ಇವುಗಳ‌ ಬಳಕೆಗೆ ರೈತರ ಒಡನಾಟ ಮಾರುಕಟ್ಟೆಯೊಂದಿಗೆ ಹೆಚ್ಚಾಗಿ ಇಲ್ಲ ಎನ್ನುತ್ತಾರೆ ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ನಿರ್ಮಲ ಎಸ್.ಸಂದಿಗೋಡಮಠ.

ಈ ಭಾಗದಲ್ಲಿ ‌ಹೆಚ್ಚಾಗಿ ರೈತರು ರಾಗಿ ಮತ್ತು ಮೆಕ್ಕೆಜೋಳ ಬೆಳೆಯುತ್ತಾರೆ. ಆದರೆ ಇವೆರಡನ್ನೂ ಕೂಡ ಸರ್ಕಾರದ‌ ಆದೇಶದ ಮೇರೆಗೆ ಬೆಂಬಲ‌ ಬೆಲೆಯಲ್ಲಿ ಖರೀದಿಸುವರು. ಅಲ್ಲದೆ ಹೆಚ್ಚಾಗಿ ನಗರದಲ್ಲಿಯೇ ಇವುಗಳ ಮಾರಾಟ ವ್ಯವಸ್ಥೆ ಹೆಚ್ಚಾಗಿ ನಡೆಯುವುದರಿಂದ ಮಾರುಕಟ್ಟೆ ಪ್ರಾಂಗಣಕ್ಕೆ ರೈತರು ಬರುವುದಿಲ್ಲ. ವರ್ತಕರಿಗಾಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಒಟ್ಟು 48 ನಿವೇಶನಗಳನ್ನು ‌ನೀಡಲಾಗಿದ್ದು, ಇವುಗಳಲ್ಲಿ ಬಹುತೇಕ ವರ್ತಕರು ಸ್ವಂತ ವೆಚ್ಚದಲ್ಲಿ ಕಟ್ಟಡಗಳನ್ನು ಕಟ್ಟಿ ವ್ಯಾಪಾರಕ್ಕೆ ಗೋದಾಮುಗಳಾಗಿ ಮಾಡಿಕೊಂಡಿದ್ದಾರೆ.

ಒಟ್ಟಾರೆ ‌ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯವಸ್ಥೆಗಳಿದ್ದರೂ ಕೂಡ ಅವುಗಳನ್ನು ಬಳಕೆ ಮಾಡಿಕೊಳ್ಳಲು ಪ್ರಾಂಗಣದಲ್ಲಿ ಹೆಚ್ಚಿನ ವಹಿವಾಟು ನಡೆಯದ ಕಾರಣ ಇಲ್ಲಿ ರೈತರ ಒಡನಾಟ ಕಡಿಮೆ ಆಗಿದೆ. ಇದರಿಂದಾಗಿ ಇಲ್ಲಿನ ಬಹುತೇಕ ಕಟ್ಟಡಗಳು ಮತ್ತು ಪರಿಕರಗಳು ನಿಷ್ಕ್ರಿಯವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT