ಬುಧವಾರ, ನವೆಂಬರ್ 20, 2019
27 °C
ಎಂ.ಜಿ.ರಸ್ತೆ ಡಾಂಬರೀಕರಣಕ್ಕೆ ಒತ್ತಾಯಿಸಿ ಕಾಂಗ್ರೆಸ್‌ ಮುಖಂಡರ ಆಗ್ರಹ

ರಸ್ತೆ ಅಭಿವೃದ್ಧಿಗೆ ಜಿಲ್ಲಾಧಿಕಾರಿಗೆ ಮನವಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ತೀವ್ರ ಸ್ವರೂಪದಲ್ಲಿ ಹದಗೆಟ್ಟು ಅಧ್ವಾನಗೊಂಡಿರುವ ನಗರದ ಎಂ.ಜಿ.ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು’ ಎಂದು ಕಾಂಗ್ರೆಸ್‌ ಮುಖಂಡರು ಶುಕ್ರವಾರ ಜಿಲ್ಲಾಧಿಕಾರಿ ಆರ್.ಲತಾ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ‘ಗೌರೀಬಿದನೂರು ತಾಲ್ಲೂಕಿನ ಮುಖ್ಯ ಸಂಪರ್ಕ ರಸ್ತೆಯಾಗಿರುವ ಎಂ.ಜಿ.ರಸ್ತೆಯಲ್ಲಿ ಎಪಿಎಂಸಿ, ಕಾಲೇಜುಗಳಿವೆ. ಹೀಗಾಗಿ ಆ ರಸ್ತೆಯಲ್ಲಿ ನಿತ್ಯ ರೈತರು, ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಸಂಚರಿಸುತ್ತಾರೆ. ಆದರೆ ರಸ್ತೆ ಮಾತ್ರ ದಿನೇ ದಿನೇ ಗುಂಡಿಗಳಿಂದ ಹದಗೆಟ್ಟು ಹೋಗುತ್ತಿದೆ’ ಎಂದು ಹೇಳಿದರು.

‘ಸುಮಾರು ಆರು ತಿಂಗಳ ಹಿಂದೆ ಎಚ್.ಎನ್.ವ್ಯಾಲಿ ಯೋಜನೆಯ ಪೈಪ್‌ಲೈನ್ ಹಾಕಲು ಈ ರಸ್ತೆ ಅಗೆದು, ಸರಿಯಾಗಿ ಗುಂಡಿ ಮುಚ್ಚುವ ಕೆಲಸ ಮಾಡಿಲ್ಲ. ಹಾಳಾದ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ರೈತರ ತರಕಾರಿ ಮತ್ತು ಹೂಗಳನ್ನು ಹೊತ್ತು ತರುವ ವಾಹನಗಳ ಪಾಡು ಹೇಳಲಾಗದಷ್ಟು ಕಷ್ಟವಾಗುತ್ತಿದೆ. ಇದರಿಂದ ರೈತರಿಗೆ ಬಹಳ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೆ ಸಂಬಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಡಾಂಬರೀಕರಣ ಮಾಡಿಸಬೇಕು’ ಎಂದು ತಿಳಿಸಿದರು.

‘ಈ ಕೂಡಲೇ ಅಧಿಕಾರಿಗಳು ರಸ್ತೆ ಅಭಿವೃದ್ಧಿಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆ ಬಂದ್ ಮಾಡುವ ಮುಖಾಂತರ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಶೆಟ್ಟಿಗೆರೆ ಗ್ರಾಮ ಪಂಚಾಯಿತಿ ಸದಸ್ಯ ಮುರಳಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಕಾರ್ಯದರ್ಶಿ ನಾರಾಯಣಸ್ವಾಮಿ, ಮುಖಂಡರಾದ ಚಿಕ್ಕಪ್ಪಯ್ಯ, ಸುರೇಶ್, ಅಗಲಗುರ್ಕಿ ಪ್ರಭು, ರಾಜಶೇಖರ್, ಪೆದ್ದಣ್ಣ, ಸುಮಿತ್ರಮ್ಮ, ಹಮೀಮ್ ವೆಂಕಟೇಶ್ ಹಾಜರಿದ್ದರು.

ಪ್ರತಿಕ್ರಿಯಿಸಿ (+)