ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನ ಉತ್ಸವದಲ್ಲಿ ಕಲಾ ಸಂಭ್ರಮ

ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಚಾಲನೆ
Last Updated 1 ಮಾರ್ಚ್ 2021, 3:59 IST
ಅಕ್ಷರ ಗಾತ್ರ

ಬಾಗೇಪಲ್ಲಿ: ‘ಶಾಲೆಗಳಲ್ಲಿ ಮಕ್ಕಳನ್ನು ಓದಿಸಿದಾಗ ಮಾತ್ರ ಕನ್ನಡ ನಾಡು, ನುಡಿ, ಸಂಸ್ಕೃತಿ ಉಳಿಯುತ್ತದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಕಿಯರ ಶಾಲಾವರಣದಲ್ಲಿ ಚಿಕ್ಕಬಳ್ಳಾಪುರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಗಿರಿಜನ ಉಪಯೋಜನೆಯಲ್ಲಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ‘ಗಿರಿಜನ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವವರು, ಮುಖಕ್ಕೆ ಬಣ್ಣ ಹಚ್ಚಿಕೊಂಡು ನಾಟಕ ಆಡುವವರು ಮಾತ್ರ ಕಲಾವಿದರು ಅಲ್ಲ. ನಾವು ಅಚ್ಚುಕಟ್ಟಾಗಿ ಹಾಡುವುದು, ಬರೆಯುವುದು, ಮಾತನಾಡುವುದು, ಕುಳಿತುಕೊಳ್ಳುವುದು, ನಿಲ್ಲುವುದು ಸಹ ಕಲೆಯೇ ಆಗಿದೆ. ನಿಮ್ಮ ಮಕ್ಕಳನ್ನು ಕಲಾವಿದರಾಗಿ ಮಾಡಿ. ಕಲೆಗೆ ಇರುವ ಗೌರವ, ಯಾವುದಕ್ಕೆ ಇಲ್ಲ. ಪದ್ಮಶ್ರೀ ಪ್ರಶಸ್ತಿ ಕೊಟ್ಟರೆ ಸಾಲದು, ಜಾನಪದ ಕಲೆ ಮತ್ತು ಕಲಾವಿದರ ಬದುಕನ್ನು ಪಠ್ಯಪುಸ್ತಕದಲ್ಲಿ ಸೇರಿಸಬೇಕು’ ಎಂದು ಸರ್ಕಾರಗಳಿಗೆ ಒತ್ತಾಯಿಸಿದರು.

‘ಜೋಗತಿ ನೃತ್ಯಕಲೆಯು ನನ್ನ ಕೈಹಿಡಿದು ರಾಷ್ಟ್ರಮಟ್ಟಕ್ಕೆ ಕರೆದುಕೊಂಡು ಹೋಗಿದೆ. ಅದಕ್ಕೂ ಮೊದಲು ನಾನು ಶಾಲೆ, ಗುಡಿ, ಚಾವಡಿ, ಹೊಲಗಳಲ್ಲಿ ಮಲಗಿಕೊಂಡು ಅತ್ಯಂತ ಕಷ್ಟದ ಬದುಕಿನ ಕ್ಷಣಗಳನ್ನು ಅನುಭವಿಸಿದ್ದೇನೆ. ಅನೇಕ ಏಳು-ಬೀಳುಗಳು ನನಗೆ ಪಾಠ ಕಲಿಸಿದೆ. ಇದರಿಂದ ನನ್ನ ಛಲವೇ ಶ್ರೀರಕ್ಷೆ ಆಗಿದೆ’ ಎಂದು ತಿಳಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಟಿ.ವಿ. ಮೊಬೈಲ್‌ಗಳಿಗೆ ಸಿಲುಕಿ ಗ್ರಾಮೀಣ ಭಾಗದಲ್ಲಿನ ಜೀವಂತವಾಗಿರುವ ಜಾನಪದ ಕಲೆ ದಿನೇ ದಿನೇ ಮರೆಯಾಗುತ್ತಿದೆ. ಆಧುನಿಕತೆಗೆ ಸಿಲುಕಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಹ, ಜನರೊಂದಿಗೆ ಬೆರೆಯುವಂತಹ ಅವಕಾಶಗಳು ಕಳೆದು ಹೋಗುತ್ತಿರುವುದು ದುರಂತ. ಪೋಷಕರು ಮನೆಯಲ್ಲಿ ಮಕ್ಕಳನ್ನು ಬಲವಂತವಾಗಿ ಕೂಡಿಹಾಕಬೇಡಿ. ಸ್ವಇಚ್ಛೆಗೆ ಅಣುಗುಣವಾಗಿ ಅವರಲ್ಲಿನ ಪ್ರತಿಭೆಯನ್ನು ಪ್ರದರ್ಶನ ಮಾಡಲು ಬಿಡಿ. ಹಣ ಮಾಡುವಂತಹ ಯಂತ್ರಗಳನ್ನಾಗಿ ಮಾಡಬೇಡಿ’ ಎಂದರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಎಂ.ನಯಾಜ್ ಅಹಮದ್ ಮಾತನಾಡಿ, ‘1850ರ ದಶಕದ ಹಿಂದೆ ಗುಮ್ಮನಾಯಕನಪಾಳ್ಯ ತಾಲ್ಲೂಕು ಕೇಂದ್ರ ಆಗಿತ್ತು. 600 ವರ್ಷಗಳ ಕಾಲ ಪಾಳೇಗಾರರು ಆಳ್ವಿಕೆ ನಡೆಸಿದ್ದಾರೆ. ಅನೇಕ ಕವಿ, ಸಾಹಿತಿಗಳು, ಸಮುದಾಯವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿದ್ದಾರೆ. ಹಂಪಿ ಮಾದರಿಯಲ್ಲಿ ಗುಮ್ಮನಾಯಕಪಾಳ್ಯದ ಉತ್ಸವ ಮಾಡಬೇಕು’ ಎಂದು ಮನವಿ ಮಾಡಿದರು.

ಮೊಟ್ಟಮೊದಲ ಬಾರಿಗೆ ಗಾಡಗೇರದ ಜುಲಿಯಾನ ಮತ್ತು ತಂಡದ ಸಿದ್ಧಿ ಸಮುದಾಯದವರಿಂದ ಡಾಮಿನಿ ನೃತ್ಯ, ಯಕ್ಷಗಾನ, ಸಮೂಹ ನೃತ್ಯ, ಸೂತ್ರದ ಗೊಭೆ, ಡೊಳ್ಳು, ತಮಟೆವಾದನ, ಪೂಜಾ ಕುಣಿತವನ್ನು ಪ್ರದರ್ಶನ ಮಾಡಿದರು. ಜಾನಪದ ಗಾಯಕರಾದ ಡಿ.ಆರ್.ರಾಜಪ್ಪ, ಮುನಿರೆಡ್ಡಿರವರು ಜಾನಪದ ಗೀತೆಗಳು ಹಾಡಿ ಮನರಂಜಿಸಿದರು.

ಕನ್ನಡ ಮತ್ತು ಸಂಸ್ಕೃ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಜಿ.ಪಂ ಸದಸ್ಯ ನರಸಿಂಹಪ್ಪ, ತಹಶೀಲ್ದಾರ್ ಡಿ.ವಿ.ದಿವಾಕರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಡಾ.ಸಿ.ಶ್ರೀರ್, ತಾ.ಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಉಪಾಧ್ಯಕ್ಷೆ ಸರಸ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಿ.ಮಂಜುನಾಥ್, ಇಓ ಎಂ.ಎನ್.ಮಂಜುನಾಥಸ್ವಾಮಿ, ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಸಿದ್ದಪ್ಪ, ಪುರಸಭೆ ಅಧ್ಯಕ್ಷೆ ಗಲ್ನಾಜ್ ಬೇಗಂ, ಉಪಾಧ್ಯಕ್ಷ ಎ.ಶ್ರೀನಿವಾಸ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎ.ಜಿ.ಸುಧಾಕರ್, ತಾಲ್ಲೂಕು ಕಾರ್ಯದರ್ಶಿ ಡಿ.ಎನ್.ಕೃಷ್ಣಾರೆಡ್ಡಿ, ಚಿಕ್ಕಬಳ್ಳಾಪುರದ ವಿವೇಕಾನಂದ ಕಲಾಬಳಗದ ಅಧ್ಯಕ್ಷ ಸೋ.ಸು.ನಾಗೇಂದ್ರನಾಥ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT