ಭಾನುವಾರ, ಸೆಪ್ಟೆಂಬರ್ 20, 2020
22 °C
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

ಕನಿಷ್ಠ ವೇತನಕ್ಕೆ ಆಶಾ ಕಾರ್ಯಕರ್ತೆಯರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಆಶಾ ಕಾರ್ಯಕರ್ತೆಯರ ಗೌರವಧನವನ್ನು ತಿಂಗಳಿಗೆ ಕನಿಷ್ಠ ₹12 ಸಾವಿರ ನಿಗದಿ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಕಾರ್ಯಕರ್ತೆಯರು, ಎಐಯುಟಿಯುಸಿ ಪದಾಧಿಕಾರಿಗಳು ಜಿಲ್ಲಾಡಳಿತ ಭವನದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ, ‘ನೆರೆಯ ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿ ₹10 ಸಾವಿರ ಗೌರವ ಧನ ನಿಗದಿ ಮಾಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಪ್ರೋತ್ಸಾಹಧನವನ್ನು ₹12 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ವಿವಿಧ ಯೋಜನೆಗಳ ಅಡಿ ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಸಾರಿಗೆ ವೆಚ್ಚ ಏತಕ್ಕೂ ಸಾಲುತ್ತಿಲ್ಲ. ಅದನ್ನು ಹೆಚ್ಚಳ ಮಾಡಬೇಕು. ಬಾಕಿ ಉಳಿಸಿಕೊಂಡಿರುವ ಗೌರವಧನ ಹಾಗೂ ಪ್ರೋತ್ಸಾಹಧನ ಕೂಡಲೇ ಬಿಡುಗಡೆ ಮಾಡಬೇಕು. ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ವಿಶ್ರಾಂತಿ ಕೊಠಡಿಗಳನ್ನು ನಿರ್ಮಾಣ ಮಾಡಬೇಕು’ ಎಂದು ಹೇಳಿದರು.

‘ಆಶಾ ಕಾರ್ಯಕರ್ತೆಯರನ್ನು ಅನಗತ್ಯವಾಗಿ ಸಮೀಕ್ಷೆಗೆ ಬಳಸುವುದು ನಿಲ್ಲಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ನಿವಾರಣೆ ಸಭೆ ಆಯೋಜಿಸಬೇಕು. ನಿಗದಿತ ಕೆಲಸಗಳನ್ನು ಹೊರತುಪಡಿಸಿ ಬೇರೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕ್ರಮ ಕೈಬಿಡಬೇಕು. ಮದುವೆ ಸಮಾರಂಭ ಸೇರಿದಂತೆ ಇತರೆ ತುರ್ತು ಕಾರಣಗಳಿಗೆ ರಜೆ ಪಡೆದುಕೊಳ್ಳಲು ಅವಕಾಶ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಆಶಾ ಕಾರ್ಯಕರ್ತೆಯರನ್ನು ಪ್ರಧಾನ ಮಂತ್ರಿ ಜೀವನಜ್ಯೋತಿ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗಳ ವ್ಯಾಪ್ತಿಗೆ ಒಳಪಡಿಸಬೇಕು. ಅವುಗಳ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕು. ಪ್ರತಿ ತಿಂಗಳು ನಿಗದಿತ ದಿನಾಂಕದ ಒಳಗೆ ವೇತನ ಖಾತೆಗೆ ಜಮಾ ಮಾಡಬೇಕು’ ಎಂದು ಹೇಳಿದರು.

‘ರಾಜ್ಯ ಸರ್ಕಾರದ ನೂತನ ವೇತನ ಪಾವತಿ ವಿಧಾನದಂತೆ ಖಜಾನೆ -2 ರಿಂದ ಮಾಸಿಕ ₹3,500 ಗೌರವಧನ ಪಾವತಿ ಹಲವಾರು ತಿಂಗಳು ವಿಳಂಬವಾಗಿದೆ. ಇಂದಿಗೂ ಕೆಲವಡೆ 4 ರಿಂದ 5 ತಿಂಗಳು ಕಳೆದರೂ ಆ ವೇತನ ಪಾವತಿಯಾಗಿಲ್ಲ. ಮೂರ್ನಾಲ್ಕು ವರ್ಷಗಳಿಂದ ಹೊಸ ಬಡವಾಟೆ ಪದ್ಧತಿ ಪದೇ ಪದೇ ಬದಲಾವಣೆ ಮಾಡಲಾಗುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ. ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷೆ, ಜಿಲ್ಲಾ ಸಲಹೆಗಾರರಾದ ಜಿ.ಹನುಮೇಶ್ ಮಮತಾ ರೆಡ್ಡಿ, ಕಾರ್ಯಕರ್ತೆಯರಾದ ಮಂಜುಳಾ, ಸರಸ್ವತಮ್ಮ, ಲಕ್ಷ್ಮೀ, ಶಾಂತಮ್ಮ, ಅನುಸೂಯಮ್ಮ, ಸುನಂದಮ್ಮ, ಶಾಂತಮ್ಮ, ಲಕ್ಷಮ್ಮ, ನರಸಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು