ದೌರ್ಜನ್ಯ ಪ್ರಕರಣ ಶೀಘ್ರ ಇತ್ಯರ್ಥಗೊಳಿಸಲು ಜಿಲ್ಲಾಧಿಕಾರಿ ಸೂಚನೆ

7
‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ’ ಕಾಯ್ದೆ ಅನುಷ್ಟಾನದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

ದೌರ್ಜನ್ಯ ಪ್ರಕರಣ ಶೀಘ್ರ ಇತ್ಯರ್ಥಗೊಳಿಸಲು ಜಿಲ್ಲಾಧಿಕಾರಿ ಸೂಚನೆ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ವಿವಿಧ ದೌರ್ಜನ್ಯಗಳಿಂದ ನೊಂದು ಪೊಲೀಸ್ ಠಾಣೆಗೆ ಬರುವ ಮಹಿಳಾ ಸಂತ್ರಸ್ತರಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ನೆರವಿಗೆ ಧಾವಿಸಿ ಅಂತಹ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ’ ಕಾಯ್ದೆ ಅನುಷ್ಟಾನದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು. ದೌರ್ಜನ್ಯಕ್ಕೆ ಒಳಗಾದವರು ಠಾಣೆಗೆ ಬಂದು ದೂರು ನೀಡಿದ ತಕ್ಷಣವೇ ಕ್ರಮಕ್ಕೆ ಮುಂದಾಗಬೇಕು. ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ಮಹಿಳೆಯರು ಮತ್ತು ಮಕ್ಕಳು ಕಾಣೆಯಾದ ಪ್ರಕರಣಗಳಿಗೆ ವಿಶೇಷ ಗಮನ ನೀಡಬೇಕು’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮಹಿಳಾ ಕಿರುಕುಳ ಆಂತರಿಕ ದೂರು ನಿವಾರಣಾ ಸಮಿತಿಗಳು ಮತ್ತು ಜಿಲ್ಲೆಯಲ್ಲಿರುವ ಮಹಿಳಾ ಸಾಂತ್ವಾನ ಸ್ವಾಧಾರ ಕೇಂದ್ರಗಳು ಪರಿಣಾಮಕಾರಿಯಾಗಿ ಕಾಯಾನಿರ್ವಹಿಸಬೇಕು. ವಿವಿಧ ಶಾಲಾ ಕಾಲೇಜುಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ದೂರು ಸಲ್ಲಿಸಲು ಅವಕಾಶ ಇರುವ ಬಗ್ಗೆ ಮತ್ತು ಪೊಲೀಸರಿಂದ ಇರುವ ರಕ್ಷಣೆ ಸೇರಿದಂತೆ ಇತರೆ ಸವಲತ್ತುಗಳ ಬಗ್ಗೆ ಬಾಲಕಿಯರಲ್ಲಿ ಜಾಗೃತಿ ಮೂಡಿಸಿ’ ಎಂದು ಹೇಳಿದರು.

‘ಅಪ್ರಾಪ್ತ ಮಕ್ಕಳು ಮತ್ತು ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಣೆಯಂತಹ ಪ್ರಕರಣಗಳಿಗೆ ಜಿಲ್ಲೆಯಲ್ಲಿ ಕಡಿವಾಣ ಹಾಕಬೇಕು. ಆದ್ಯತೆ ಮೆರೆಗೆ ಇಂತಹ ಪ್ರಕರಣಗಳ ತನಿಖೆ ನಡೆಸಿ ತ್ವರಿತಗತಿಯಲ್ಲಿ ಪ್ರಕರಣ ಇತ್ಯರ್ಥಗೊಳಿಸಬೇಕು’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಂಗಾಮಿ ಉಪನಿರ್ದೇಶಕ ಪದ್ಮರಾಜ್ ಮಾತನಾಡಿ, ‘ವಿವಿಧ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡುವ ಜತೆಗೆ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿತ ಪ್ರಕರಣಗಳಿಗೆ ಆದ್ಯತೆ ನೀಡಬೇಕಾಗಿದೆ. ಜತೆಗೆ ಬಾಲ್ಯ ವಿವಾಹ, ಅಪೌಷ್ಠಿಕತೆ ಪ್ರಕರಣಗಳು ಕಂಡು ಬಂದಲ್ಲಿ ಇಲಾಖೆ ಗಮನಕ್ಕೆ ತರಬೇಕು’ ಎಂದು ಹೇಳಿದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ 2018-19ನೇ ಸಾಲಿನ ವಾರ್ಷಿಕ ಕ್ರೀಯಾ ಯೋಜನೆಯನ್ನು ಸಭೆಯಲ್ಲಿ ಚರ್ಚಿಸಿ ಅನುಮೋದಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಶಿಧರ್, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !