ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ ಹೆಚ್ಚಳಕ್ಕೆ ‘ಆಪರೇಷನ್‌’ನತ್ತ ಚಿತ್ತ

ವಿಧಾನಸಭಾ ಚುನಾವಣೆಯ ತಾಲೀಮು; ಸ್ಥಳೀಯ ನಾಯಕರ ಸೆಳೆಯಲು ಪೈಪೋಟಿ
Last Updated 2 ಆಗಸ್ಟ್ 2022, 2:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯ ತಾಲೀಮು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜೋರಾಗಿದೆ. ಈಗಾಗಲೇ ಎಲ್ಲ ಪಕ್ಷಗಳು ಬಲ ಹೆಚ್ಚಿಸಿಕೊಳ್ಳಲು ಸ್ಥಳೀಯ ನಾಯಕರ ‘ಆಪರೇಷನ್‌’ಗೆ ಕೈಹಾಕಿವೆ.ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮುಂದಾಗಿವೆ. ಈ ಹಿನ್ನೆಲೆಯಲ್ಲಿ ಒಂದು ಪಕ್ಷದ ನಾಯಕರು ಮತ್ತೊಂದು ಪಕ್ಷದ ಸ್ಥಳೀಯ ನಾಯಕರನ್ನು ಸೆಳೆಯಲು ಕಾರ್ಯಪ್ರವೃತ್ತರಾಗಿದ್ದಾರೆ.

‘ಆಪರೇಷನ್‌’ಗೆಆಮಿಷಗಳು, ಅನುಕೂಲ ಮಾಡಿಕೊಡುವ ಭರವಸೆಗಳು, ಬೆದರಿಕೆಗಳು, ಸಂಬಂಧಗಳು ...ಹೀಗೆ ನಾನಾ ಅಸ್ತ್ರಗಳನ್ನು ಪ್ರಯೋಗಿಸಲಾಗುತ್ತಿದೆ. ಯಾವುದೇ ಪಕ್ಷಕ್ಕೂ ಅಧಿಕೃತವಾಗಿ ಸೇರದ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ಎನಿಸಿರುವ ಮುಖಂಡರನ್ನು ಆಪರೇಷನ್‌ಗೆ ಒಳಪಡಿಸಲು ಪಕ್ಷಗಳು ಉತ್ಸುಕವಾಗಿವೆ.

ಈ ಪಕ್ಷದಲ್ಲಿ ಇದ್ದವರು ಆ ಪಕ್ಷಕ್ಕೆ ಅಲ್ಲಿ ಇದ್ದವರು ಮತ್ತೊಂದು ಕಡೆಗೆ ‘ಪಕ್ಷಾಂತರ’ವಾಗುವ ಪರ್ವಗಳು ಜೋರಾಗುವ ಲಕ್ಷಣಗಳು ಕಾಣುತ್ತಿವೆ. ಈ ಆಪರೇಷನ್ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗಷ್ಟೇ ಸೀಮಿತವಾಗಿಲ್ಲ. ಸಮಾಜ ಸೇವಕರ ಹೆಸರಿನಲ್ಲಿ ಗುರುತಿಸಿಕೊಂಡಿರುವ ರಾಜಕೀಯ ಆಕಾಂಕ್ಷಿಗಳು ಸಹ ಬೆಂಬಲಿಗರ ಬಲ ಹೆಚ್ಚಿಸಿಕೊಳ್ಳಲು ಕೈಬಿಚ್ಚಿ ‘ಹೂಡಿಕೆ’ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಆರಂಭಿಕ ಹೆಜ್ಜೆ: ಇತ್ತೀಚೆಗೆ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ಗಂಗರೇಕಾಲುವೆ ಗ್ರಾಮದಲ್ಲಿ ಹಲವು ಮುಖಂಡರು ಬಿಜೆಪಿ ಸೇರಿದರು. ಈ ಆಪರೇಷನ್ ಕಮಲ ಮುಂದಿನ ದಿನಗಳಲ್ಲಿ ಮತ್ತಷ್ಟು ಹಳ್ಳಿಗಳಿಗೆ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿಜೆಡಿಎಸ್ ತೊರೆದು ಕಾಂಗ್ರೆಸ್ ಮತ್ತು ಬಿಜೆಪಿ ಸೇರಿರುವ ಮುಖಂಡರನ್ನು ಸಂಪರ್ಕಿಸಿ ಮತ್ತೆ ಜೆಡಿಎಸ್‌ಗೆ ಕರೆತರಲು ಪಕ್ಷದ ನಾಯಕರು ಕಸರತ್ತು ಸಹ ನಡೆಸಿದ್ದಾರೆ ಎನ್ನುತ್ತವೆ ಜೆಡಿಎಸ್ ಮೂಲಗಳು. ಚಿಕ್ಕಬಳ್ಳಾಪುರ ಜೆಡಿಎಸ್‌ಗೆ ಸದ್ಯ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರೇ ನಾವಿಕರು. ಅಭ್ಯರ್ಥಿ ಯಾರು ಎನ್ನುವ ಗೊಂದಲದಲ್ಲಿರುವ ಕಾಂಗ್ರೆಸ್‌ ಅನ್ಯಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರನ್ನು ಸೆಳೆಯುವ ದಿಕ್ಕಿನಲ್ಲಿ ಇನ್ನೂ ಹೆಜ್ಜೆ ಇಟ್ಟಿಲ್ಲ.

ಗೌರಿಬಿದನೂರಿನಲ್ಲಿ ಸಮಾಜ ಸೇವಕರ ಸದ್ದು: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗಿಂತ ಸಮಾಜ ಸೇವಕರು ಬಲ ಹೆಚ್ಚಿಸಿಕೊಳ್ಳಲು ಸ್ಥಳೀಯ ನಾಯಕರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ. ಮೂರು ಪಕ್ಷಗಳಲ್ಲಿನ ಅತೃಪ್ತ ಸ್ಥಳೀಯ ನಾಯಕರು ಪುಟ್ಟಸ್ವಾಮಿಗೌಡ ಅವರಲ್ಲಿ ನಾಯಕತ್ವ ಕಂಡುಕೊಂಡಿದ್ದಾರೆ. ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಪುಟ್ಟಸ್ವಾಮಿಗೌಡರು ಗೌರಿಬಿದನೂರು ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿಯೇ ಆಪರೇಷನ್ ನಡೆಸಿದ್ದಾರೆ.

ಚಿಂತಾಮಣಿಯಲ್ಲಿ ಕಾವು: ಡಾ.ಎಂ.ಸಿ.ಸುಧಾಕರ್ ಕಾಂಗ್ರೆಸ್ ಸೇರುವ ಮೂಲಕ ಚಿಂತಾಮಣಿ ಕ್ಷೇತ್ರದಲ್ಲಿ ರಾಜಕೀಯ ರಂಗು ಜೋರಾಗಿದೆ. ಮುನಿಯಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಕೆಲವರು ಈಗಾಗಲೇ ಸುಧಾಕರ್ ತೆಕ್ಕೆಗೆ ಸೇರಿದ್ದರೆ ಮತ್ತಷ್ಟು ಮಂದಿ ಶಾಸಕ ಎಂ.ಕೃಷ್ಣಾರೆಡ್ಡಿ ಅವರಿಗೆ ಬಲ ತುಂಬಿದ್ದಾರೆ. ಈ ನಡುವೆ ಸಮಾಜ ಸೇವಕ ವೇಣುಗೋಪಾಲ್ ಸಹ ಸ್ಥಳೀಯ ನಾಯಕರು ತಮ್ಮ ಬಣ ಸೇರುವಂತೆ ನೋಡಿಕೊಳ್ಳುತ್ತಿದ್ದಾರೆ. ಪಕ್ಷಾಂತರದ ಪರ್ವ ಜೋರಾಗುವ ಕ್ಷೇತ್ರಗಳಲ್ಲಿ ಚಿಂತಾಮಣಿಯೂ ಪ್ರಮುಖವಾಗಿದೆ.

ಹೂಡಿಕೆ ಮತ್ತು ಸಿದ್ಧಾಂತದ ಹೊಯ್ದಾಟ: ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ ಮುನಿರಾಜು ಹಳ್ಳಿಹಳ್ಳಿಗಳನ್ನು ಸುತ್ತುವ ಮೂಲಕ ಅನ್ಯಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರನ್ನು ಬಿಜೆಪಿಗೆ ಸೇರುವಂತೆ ಮಾಡುತ್ತಿದ್ದಾರೆ. ಈ ನಡುವೆ ಪ್ರಜಾ ಸಂಘರ್ಷ ಸಮಿತಿ ಕಾರ್ಯಕರ್ತರನ್ನು ಸೆಳೆಯಲು ಎಲ್ಲ ಪಕ್ಷಗಳು ಸಹ ದೃಷ್ಟಿ ಹರಿಸಿವೆ. ಸಿಪಿಎಂ, ಕಾಂಗ್ರೆಸ್‌ ಮತ್ತು ಬಿಜೆಪಿ ಮುಖಂಡರು ಬಾಗೇಪಲ್ಲಿ ಕ್ಷೇತ್ರಗಳಲ್ಲಿ ನಾಯಕರನ್ನು ಸೆಳೆಯುವಲ್ಲಿ ಹೆಚ್ಚು ನಿರತರಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ‘ಬಲ’ಕ್ಕೆ ಗುಂಪುಗಾರಿಕೆ: ಶಿಡ್ಲಘಟ್ಟದಲ್ಲಿ ಬಿಜೆಪಿಗೆ ಉತ್ತಮ ನೆಲೆ ಇಲ್ಲ. ಜೆಡಿಎಸ್‌ಗೆ ಮೇಲೂರು ರವಿಕುಮಾರ್ ಅವರೇ ದಂಡನಾಯಕ. ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆಯೇ ರಾಜಕೀಯ ಇಲ್ಲಿ ಗಿರಕಿ ಹೊಡೆಯುತ್ತಿದೆ. ಶಾಸಕ ವಿ.ಮುನಿಯಪ್ಪ ಹಾಗೂ ಸಮಾಜ ಸೇವಕರಾಗಿ ಗುರುತಾಗಿರುವ ರಾಜೀವ್ ಗೌಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು. ರಾಜೀವ್ ಗೌಡ ಈ ಕ್ಷೇತ್ರದಲ್ಲಿ ತಮ್ಮದೇ ಆದ ಬೆಂಬಲಿಗರ ಪಡೆಯನ್ನು ಕಟ್ಟುತ್ತಿದ್ದಾರೆ. ಇವರು ಸಹ ಬೆಂಬಲಿಗರನ್ನು ಹೆಚ್ಚಿಸಿಕೊಳ್ಳಲು ಆಪರೇಷನ್ ಮೊರೆ ಹೋಗಿದ್ದಾರೆ.

ನಮ್ಮಲ್ಲಿದ್ದು ಬೇರೆ ಪಕ್ಷಗಳಿಗೆ ಹೋದ ಮುಖಂಡರನ್ನು ಮತ್ತೆ ಜೆಡಿಎಸ್‌ಗೆ ಕರೆ ತರುವ ಪ್ರಯತ್ನಗಳು ಆರಂಭವಾಗಿವೆ. ಬಿಜೆಪಿ ಮತ್ತು ಕಾಂಗ್ರೆಸ್‌ ಮೇಲೆ ಭ್ರಮನಿರಸನಗೊಂಡ ಆ ಪಕ್ಷದ ಸ್ಥಳೀಯ ನಾಯಕರನ್ನು ಪಕ್ಷಕ್ಕೆ ಆಹ್ವಾನಿಸಿದ್ದೇವೆ’ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ತಿಳಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿಯೇ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯ ಗೊಂದಲವಿದೆ. ಬಿಜೆಪಿಯಲ್ಲಿ ಆ ಪಕ್ಷದ ಶಾಸಕರು ಬಿಜೆಪಿಯಿಂದ ಸ್ಪರ್ಧಿಸುವರೊ ಅಥವಾ ಪಕ್ಷೇತರರಾಗಿ ಸ್ಪರ್ಧಿಸುವರೋ ಎನ್ನುವ ಚರ್ಚೆಗಳಿವೆ. ಆದರೆ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಕೆ.ಪಿ.ಬಚ್ಚೇಗೌಡರ ನೇತೃತ್ವದಲ್ಲಿ ಸಭೆಗಳನ್ನು ನಡೆಸುತ್ತಿದ್ದೇವೆ ಎಂದರು.

ಅಭಿವೃದ್ಧಿ ಮೆಚ್ಚಿ ಬಿಜೆಪಿಗೆ

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮತ್ತು ಜಿಲ್ಲೆಯಲ್ಲಿ ಸಚಿವ ಡಾ.ಕೆ.ಸುಧಾಕರ್ ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಹಲವು ಮುಖಂಡರು ಬಿಜೆಪಿ ಸೇರುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ತಿಳಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಜೆಡಿಎಸ್ ಪ್ರಬಲವಾಗಿತ್ತು. ಆದರೆ ಈಗ ಆ ಪಕ್ಷಕ್ಕೆ ತಳಮಟ್ಟದಲ್ಲಿ ಮುಖಂಡರು ಇಲ್ಲ. ಹೀಗೆ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿಯೂ ಬಿಜೆಪಿ ಕೆಲಸಗಳನ್ನು ಮೆಚ್ಚಿ ಹಲವರು ಪಕ್ಷಕ್ಕೆ ಬರುವರು ಎಂದರು.

‘ಪಕ್ಷದ ಬಿಟ್ಟವರು ಸಂಪರ್ಕದಲ್ಲಿ’

ಪಕ್ಷ ಬಿಟ್ಟು ಹೋದವರು ಇಂದಿಗೂ ನಮ್ಮ ಒಡನಾಟದಲ್ಲಿ ಇದ್ದಾರೆ. ಶಾಸಕರ ಬೆದರಿಕೆ ಅಥವಾ ಮತ್ತೊಂದು ಕಾರಣದಿಂದ ಕಾಂಗ್ರೆಸ್ ಬಿಟ್ಟವರು ಬಹಳಷ್ಟು ಜನರು ಇದ್ದಾರೆ. ಅಂತಹವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಚಿಕ್ಕಬಳ್ಳಾಪುರವಷ್ಟೇ ಅಲ್ಲ ಬೇರೆ ಬೇರೆ ಕ್ಷೇತ್ರಗಳಲ್ಲಿಯೂ ಪಕ್ಷ ತೊರೆದವರು ಮರಳಿ ಕಾಂಗ್ರೆಸ್‌ಗೆ ಬರುವರುಎಂದು ಕೆಪಿಸಿಸಿ ಸದಸ್ಯ ಮುನೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT