ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಗೋಳದ ಕೌತುಕ, ಒಳಗೊಳಗೆ ಆತಂಕ!

ಕಂಕಣ ಸೂರ್ಯ ಗ್ರಹಣದ ಕಾರಣಕ್ಕೆ ಮನೆ ಬಿಟ್ಟು ಹೊರ ಬಾರದ ಜನ, ಗ್ರಹಣ ಮೋಕ್ಷದ ಬಳಿಕ ದೇವಾಲಯಗಳಲ್ಲಿ ವಿಶೇಷ ಪೂಜೆ
Last Updated 27 ಡಿಸೆಂಬರ್ 2019, 10:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಾಗಿಲು ಮುಚ್ಚಿದ ಬಹುತೇಕ ಮಳಿಗೆಗಳು, ವಿರಳ ಜನ ಸಂಚಾರ, ನಿರ್ಜನ ರಸ್ತೆಗಳು, ಗ್ರಾಹಕರಿಲ್ಲದೆ ಭಣಗುಟ್ಟ ಹೋಟೆಲ್‌ಗಳು, ಕೇತುಗ್ರಸ್ತ ಸೂರ್ಯಗ್ರಹಣದ ಕಿರಣ ಮೈಮೇಲೆ ಬಿದ್ದರೆ ದೋಷವಾಗುತ್ತದೆ ಎನ್ನುವ ಕಾರಣಕ್ಕೆ ಬೀದಿಗಿಳಿಯಲು ಭಯಬಿದ್ದ ಜನ.. ಅಪರೂಪದ ಕಂಕಣ ಸೂರ್ಯ ಗ್ರಹಣ ಸಂಭವಿಸಿದ ಗುರುವಾರ ನಗರದಲ್ಲಿ ಕಂಡುಬಂದ ಚಿತ್ರಣವಿದು.

ನಗರದಲ್ಲಿ ಬೆಳಿಗ್ಗೆಯಿಂದಲೇ ಜನಜೀವನ ಎಂದಿನಂತೆ ಸಹಜವಾಗಿ ಕಂಡುಬರಲಿಲ್ಲ. ಅದರಲ್ಲೂ ಬೆಳಿಗ್ಗೆ 8.06ಕ್ಕೆ ಸೂರ್ಯನಿಗೆ ಗ್ರಹಣ ಸ್ಪರ್ಶ ಆಗುತ್ತಿದ್ದಂತೆ, ಗ್ರಹಣ ಮುಕ್ತವಾಗುವವರೆಗೂ ನಗರದ ಬಹುತೇಕ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಅಲ್ಲೊಂದು, ಇಲ್ಲೊಂದು ಮಳಿಗೆಗಳು ಬಾಗಿಲು ತೆರೆದಿದ್ದವು. ಬಾಗಿಲು ತೆರೆದ ಕೆಲವೇ ಹೋಟೆಲ್‌ಗಳಲ್ಲಿ ಬೆಳಿಗ್ಗೆ 8 ಗಂಟೆಗೂ ಮೊದಲು ಉಪಾಹಾರ ಸೇವನೆ ಕಾರಣಕ್ಕೆ ಜನದಟ್ಟಣೆ ಕಂಡುಬಂದಿತು. ಗ್ರಹಣ ಆವರಿಸಿಕೊಳ್ಳುತ್ತಿದ್ದಂತೆ ಹೋಟೆಲ್‌ಗಳು ಗ್ರಾಹಕರಿಲ್ಲದೆ ಖಾಲಿ, ಖಾಲಿಯಾಗಿ ಕಂಡುಬಂದವು. 11 ಗಂಟೆ, 9 ನಿಮಿಷಕ್ಕೆ ಗ್ರಹಣ ಮುಕ್ತಾಯಗೊಳ್ಳುತ್ತಿದ್ದಂತೆ ಜನಜೀವನ ಸಹಜ ಸ್ಥಿತಿಗೆ ಮರಳಿತು.

ಬೆಳಿಗ್ಗೆಯಿಂದಲೇ ನಗರದಲ್ಲಿ ಮಂಜಿನ ಕಾರಣಕ್ಕೆ ಸೂರ್ಯನ ದರ್ಶನ ಇರಲಿಲ್ಲ. ಜತೆಗೆ ಗ್ರಹಣದಿಂದಾಗಿ ಬೆಳಿಗ್ಗೆ 11ರ ಸುಮಾರಿನ ವರೆಗೂ ಮೋಡ ಕವಿದಂತಹ ವಾತಾವರಣ ಮನೆ ಮಾಡಿತ್ತು. ಅದರ ನಡುವೆಯೇ ಶಿಕ್ಷಕರು, ವೈಜ್ಞಾನಿಕ ಮನೋಭಾವದ ಜನರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಲ್ಲಿ ವಿಶೇಷ ಕನ್ನಡಕಗಳ ಮೂಲಕ ಸೂರ್ಯನತ್ತ ದೃಷ್ಟಿನೆಟ್ಟು ಖಗೋಳದಲ್ಲಿ ನಡೆದ ನೆರಳು ಬೆಳಕಿನಾಟವನ್ನು ಕಣ್ತುಂಬಿಕೊಂಡು ಸಂತಸಪಡುತ್ತಿದ್ದದ್ದು ಕಂಡುಬಂತು. ಜನಸಾಮಾನ್ಯರು ಗ್ರಹಣ ವೀಕ್ಷಿಸುವ ದೃಶ್ಯಗಳು ವಿರಳವಾಗಿ ಕಂಡುಬಂದವು.

ನಗರದಲ್ಲಿ ಬೆಳಿಗ್ಗೆಯಿಂದ ಮನೆ ಒಳಗಿದ್ದು, ಟಿ.ವಿ ಮುಂದುಗಡೆ ಕುಳಿತಿದ್ದ ಜನರು ಒಂದೆಡೆ ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದ ನೆಸರ ವೈಚಿತ್ರ್ಯವನ್ನು ವೀಕ್ಷಿಸುತ್ತ, ಇನ್ನೊಂದೆಡೆ ಗ್ರಹಣ ಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳ ಬಗ್ಗೆ ಜ್ಯೋತಿಷಿಗಳು ಹೇಳುತ್ತಿದ್ದ ಸಲಹೆಗಳಿಗೆ ಕಿವಿಗೊಟ್ಟು ಅದರಂತೆ ಸಿದ್ಧತೆ ಮಾಡಿಕೊಳ್ಳುತ್ತಿದ್ದದ್ದು ಗೋಚರಿಸಿತು. ಅನೇಕರು ಗ್ರಹಣ ಮುಕ್ತವಾಗುವವರೆಗೂ ಹನಿ ನೀರು ಕೂಡ ಸೇವಿಸಿದೆ ಉಪವಾಸ ಮಾಡಿದರು. ಗರಿಕೆಯನ್ನು ನೀರಿನಲ್ಲಿ ಹಾಕುವುದರಿಂದ ನೀರಿಗೆ ದೋಷ ಬರುವುದಿಲ್ಲ ಎಂದು ಅನೇಕರು ರಾತ್ರಿಯೇ ನೀರಿನಲ್ಲಿ ಗರಿಕೆ ಹಾಕಿದ್ದರು.

ಗ್ರಹಣ ನಿಮಿತ್ತ ನಗರದ ಎಲ್ಲಾ ದೇವಾಲಯಗಳನ್ನು ಬೆಳಿಗ್ಗೆ 8 ಗಂಟೆ ಹೊತ್ತಿಗೆ ಬಾಗಿಲು ಮುಚ್ಚಲಾಗಿತ್ತು. ಗ್ರಹ ಮೋಕ್ಷದ ನಂತರ ಅರ್ಚಕರು ದೇವರ ವಿಗ್ರಹಗಳು, ಪೂಜಾ ಪರಿಕರಗಳು, ದೇವಾಲಯ ಶುಚಿಗೊಳಿಸಿ ಪೂಜಾ ಕೈಂಕರ್ಯ ಕೈಗೊಂಡರು. ಗ್ರಹಣ ಕೊನೆಗೊಳ್ಳುತ್ತಿದ್ದಂತೆ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ, ಸ್ನಾನ ಮಾಡಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಉಪಾಹಾರ ಸೇವಿಸಿದರು.

ಗ್ರಹಣ ದೋಷದ ಭಯಕ್ಕೆ ಗ್ರಾಮೀಣ ಪ್ರದೇಶದಲ್ಲಿ ಕೂಡ ಬಹುತೇಕ ಜನರು ಮನೆಯಿಂದ ಹೊರ ಬರದೆ, ಗ್ರಹಣ ಮುಕ್ತಾಯವಾಗುವವರೆಗೂ ಮನೆಯಲ್ಲಿ ಕಾಲ ಕಳೆದರು. ಗ್ರಹಣದಿಂದಾಗಿ ರೈತರು ಕೂಡ ಕೃಷಿ ಚಟುವಟಿಕೆಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದರು.

ಅಪರೂಪದ ಸೂರ್ಯ ಗ್ರಹಣ ವೀಕ್ಷಣೆ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯ ಆಯ್ದ 100 ಶಾಲೆಗಳಿಗೆ ತಲಾ 20 ವಿಶೇಷ ಕನ್ನಡಕಗಳನ್ನು ವಿತರಣೆ ಮಾಡಿತ್ತು. ಗ್ರಹಣ ವೀಕ್ಷಣೆಯು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ, ಜೂನಿಯರ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಗ್ರಹಣ ವೀಕ್ಷಣೆಗೆ ವಿಶೇಷ ಕನ್ನಡಕಗಳ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT