ಸೋಮವಾರ, ಅಕ್ಟೋಬರ್ 18, 2021
23 °C

ವಾಹನ ವಿಮೆ ಮಾಡಿಸುವುದು ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ವೈಯಕ್ತಿಕ ಅಥವಾ ಸಾರ್ವಜನಿಕ ಉದ್ದೇಶಕ್ಕೆ ಬಳಕೆ ಮಾಡುವ ಎಲ್ಲ ರೀತಿಯ ವಾಹನಗಳಿಗೆ ವಾಹನ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಲಕ್ಷ್ಮಿಕಾಂತ್ ಜೆ. ಮಿಸ್ಕಿನ್ ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಆರೋಗ್ಯ ಇಲಾಖೆ ಆಶ್ರಯದಲ್ಲಿ ಗುರುವಾರ ನಗರದ ಪ್ರಾದೇಶಿಕ ಸಾರಿಗೆ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆದ 1988ರ ಮೋಟರು ವಾಹನಗಳ ಕಾಯ್ದೆ ಮತ್ತು ಗ್ರಾಹಕರ ಕಾನೂನು ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ವಿಮೆ ಮಾಡಿಸಿಕೊಂಡಿಲ್ಲದ ಕೆಲವು ಮಾಲೀಕರು ಅಪಘಾತ ಸಂಭವಿಸಿದಾಗ ತಮ್ಮ ಆಸ್ತಿ, ಮನೆ, ಸಂಪತ್ತನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಮೋಟಾರು ವಾಹನಗಳ ಕಾಯ್ದೆಯು ನಿಗದಿಪಡಿಸಿರುವ ಸಂಚಾರ ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕು. ಅಗತ್ಯವಾಗಿರುವ ವಾಹನ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು. ವಾಹನಗಳನ್ನು ಜಾಗರೂಕತೆಯಿಂದ ಚಾಲನೆ ಮಾಡಬೇಕು ಎಂದರು.

ಸಾರ್ವಜನಿಕ ಉದ್ದೇಶಕ್ಕೆ ಬಳಸುವ ವಾಹನಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಆಸನಗಳನ್ನು ಭರ್ತಿ ಮಾಡಬೇಕು. ಅತ್ಯಧಿಕ ತೂಕ ಹಾಕಬಾರದು. ಪರವಾನಗಿ ಹೊಂದಿರಬೇಕು. ಮೋಟರ್ ವಾಹನ ಕಾಯ್ದೆಯ ನಿಯಮಗಳನ್ನು ಹಾಗೂ ಸಂಚಾರ ನಿಯಮಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಕುಟುಂಬದ ಸದಸ್ಯರು ನಿಮ್ಮನ್ನು ನಂಬಿ ಬದುಕು ಸಾಗಿಸುತ್ತಿದ್ದಾರೆ ಎನ್ನುವುದನ್ನು ಚಾಲಕರು ಅರಿತಿರಬೇಕು ಎಂದರು.

ಪ್ರಾದೇಶಿಕ ಸಾರಿಗೆ ಇಲಾಖೆಯ ಅಧಿಕಾರಿ ಮಂಜುನಾಥ್, 15 ವರ್ಷ ಮೇಲ್ಪಟ್ಟ ವಾಹನಗಳು ರಸ್ತೆಗೆ ಇಳಿಯದಂತೆ ತಡೆಯಲು ಹಾಗೂ ಅಂತಹ ವಾಹನಗಳನ್ನು ನಿರುಪಯುಕ್ತಗೊಳಿಸಲು ಸರ್ಕಾರ ನಿಯಮಗಳನ್ನು ರೂಪಿಸುತ್ತಿದೆ. ಈಗಾಗಲೇ, ಸರ್ಕಾರ ನೀಡಿರುವ ನಿರ್ದೇಶನಗಳ ಅನ್ವಯ ಅನಧಿಕೃತವಾಗಿ ರಸ್ತೆಗೆ ಇಳಿದ ದ್ವಿಚಕ್ರ, ಆಟೊಗಳಿಗೆ ₹ 2 ಸಾವಿರ ಹಾಗೂ ಕಾರು ಮತ್ತು ಬಸ್‌ಗಳಿಗೆ ₹ 4 ಸಾವಿರ ದಂಡ ವಿಧಿಸಲಾಗುತ್ತಿದೆ ಎಂದರು.

ವಕೀಲ ಪಿ.ಎ. ಬಾಬು ಫಕ್ರುದ್ದೀನ್, ಸಾರಿಗೆ ಅಧಿಕಾರಿ ಡಿ.ವಿ. ನಾಗರಾಜ, ಸಾರಿಗೆ ಅಧಿಕಾರಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.