ದೃಢ ಸಂಕಲ್ಪದೊಂದಿಗೆ ದುಶ್ಚಟಗಳನ್ನು ದೂರವಿಡಿ

7
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ ‘ಗಾಂಧಿಸ್ಮೃತಿ’ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್ ಸಲಹೆ

ದೃಢ ಸಂಕಲ್ಪದೊಂದಿಗೆ ದುಶ್ಚಟಗಳನ್ನು ದೂರವಿಡಿ

Published:
Updated:
Deccan Herald

ಚಿಕ್ಕಬಳ್ಳಾಪುರ: ‘ಮದ್ಯಪಾನ ಮತ್ತು ಧೂಮಪಾನ ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಜತೆಗೆ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಕೂಡ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಇಂತಹ ಚಟಗಳಿಂದ ದೂರವಿರಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಗಾಂಧಿಸ್ಮೃತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮದ್ಯಪಾನಕ್ಕಿಂತ ಧೂಮಪಾನ ದೊಡ್ಡ ಪಿಡುಗು. ಅದರಿಂದ ಸುಮಾರು 40 ಬಗೆಯ ಕ್ಯಾನ್ಸರ್‌ ಬರುತ್ತವೆ. ಇದನ್ನು ಅರ್ಥ ಮಾಡಿಕೊಂಡು ಜನರು ಇಂತಹ ದುಶ್ಚಟಗಳನ್ನು ತ್ಯಜಿಸಬೇಕು. ಪ್ರತಿಯೊಬ್ಬರೂ ದೃಢ ಸಂಕಲ್ಪದೊಂದಿಗೆ ತಂಬಾಕು ಮತ್ತು ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಮದ್ಯಪಾನದಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ₨20 ಸಾವಿರ ಕೋಟಿ ತೆರಿಗೆ ಆದಾಯ ಬರುತ್ತಿದೆ. ಆದರೆ ನಮಗೆ ತೆರಿಗೆಗಿಂತಲೂ ಜನರ ಆರೋಗ್ಯ ಮುಖ್ಯ. ಕೆಲ ರಾಜ್ಯಗಳಲ್ಲಿ ಮದ್ಯಪಾನ ನಿಷೇಧ ಯಶಸ್ವಿಯಾಗಲಿಲ್ಲ. ರಾಜ್ಯದಲ್ಲಿ ಕೂಡ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮದ್ಯಪಾನ ನಿಷೇಧಿಸಿದರು. ಅದೂ ಯಶಸ್ವಿಯಾಗಲಿಲ್ಲ. ಸಂಪೂರ್ಣ ಯಶಸ್ಸು ಸಿಗಬೇಕಾದರ ದೇಶದಾದ್ಯಂತ ನಿಷೇಧ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

‘ಹುಟ್ಟು ಮತ್ತು ಸಾವಿನ ಆಯ್ಕೆಗಳು ನಮ್ಮಲಿಲ್ಲ. ಆದರೆ, ಅವುಗಳ ಮಧ್ಯ ಇರುವ ಬದುಕನ್ನು ಯಾವ ರೀತಿ ನಿರ್ವಹಿಸಬೇಕು ಎನ್ನುವುದು ನಮ್ಮ ಕೈಯಲ್ಲಿದೆ. ಆಘಾತಕಾರಿ ವಿಷಯವೆಂದರೆ, ತಾಯಂದಿರು ಸಹ ಕುಡಿತದ ಚಟಕ್ಕೆ ಬಲಿಯಾಗಿದ್ದಾರೆ. ಇವತ್ತು ಪ್ರತಿ ಹಳ್ಳಿಯಲ್ಲಿ ಪಡಿತರ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಮದ್ಯ ಮಾರಾಟವಂತೂ ಯಥೇಚ್ಛವಾಗಿ ನಡೆಯುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕೋಚಿಮುಲ್ ನಿರ್ದೇಶಕ ಕೆ.ವಿ.ನಾಗರಾಜ್, ‘ಆರೋಗ್ಯವಂತ ಮನುಷ್ಯ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಲ್ಲ. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಅದನ್ನು ಜೋಪಾನ ಮಾಡಿದರೆ ಕುಟುಂಬ ನಿರ್ವಹಣೆ ಚೆನ್ನಾಗಿರುತ್ತದೆ. ತಂಬಾಕು ವ್ಯಸನಕ್ಕೆ ಒಳಗಾದವರು ಸಾವು–ನೋವು ಅನುಭವಿಸಬೇಕಾಗುತ್ತದೆ. ಆದ್ದರಿಂದ ತಂಬಾಕು ಸೇವನೆಯ ಹವ್ಯಾಸ ಹೊಂದಿರುವವರು ಕೆಟ್ಟ ಚಟದಿಂದ ಹೊರ ಬಂದಾಗ ಸುಂದರ ಸಮಾಜ ಸಾಧ್ಯ’ ಎಂದರು.

‘ಒತ್ತಡ ನಿವಾರಿಸಿಕೊಳ್ಳಲು ತಂಬಾಕು ಸೇವನೆ ಸರಿಯಾದ ಮಾರ್ಗವಲ್ಲ. ಬದಲು ಯೋಗ, ಧ್ಯಾನ, ಪ್ರಾಣಾಯಾಮ, ಪುಸ್ತಕ ಓದುವುದು, ಹಾಡು ಕೇಳುವ ಇತ್ಯಾದಿ ಚಟುವಟಿಕೆಗಳ ಮೂಲಕ ಒತ್ತಡ ನಿವಾರಿಸಿಕೊಳ್ಳಬಹುದು. ತಂಬಾಕು ತ್ಯಜಿಸದೆ ವ್ಯಕ್ತಿಯ ದೃಢ ನಿರ್ಧಾರವೇ ಮುಖ್ಯ ಹೊರತು ಇನ್ನೊಬ್ಬರು ಸಲಹೆಯಲ್ಲ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮದ್ಯ ವ್ಯಸನ ಮುಕ್ತ ಸಾಧಕರನ್ನು ಸನ್ಮಾನಿಸಲಾಯಿತು. ಜನಜಾಗೃತಿ ವೇದಿಕೆಯ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣವಾಯಿತು.

ಜನ ಜಾಗೃತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಯಲುವಹಳ್ಳಿ ಎನ್.ರಮೇಶ್, ನಗರಸಭೆ ಅಧ್ಯಕ್ಷ ಮುನಿಕೃಷ್ಣ ಜನಜಾಗೃತಿ ವೇದಿಕೆಯ ಸದಸ್ಯ ಎ.ಜೆ.ಸುಧಾಕರ್, ರುಡ್‌ಸೆಟ್‌ ನಿರ್ದೇಶಕ ಡಿ.ನಾರಾಯಣಸ್ವಾಮಿ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಎಸ್.ಎನ್‌.ಮಹಾದೇವಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಬಿ.ವಸಂತ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !