ಮಂಗಳವಾರ, ಜನವರಿ 28, 2020
18 °C
ಸರ್ಕಾರದ ಭಾಷಾ ನೀತಿಯ ಅನುಷ್ಠಾನದ ಕೆಲಸವನ್ನೇ ಮರೆತ ಅಧಿಕಾರಿಗಳು, ಗಡಿಭಾಗದ ಜಿಲ್ಲೆಯಲ್ಲಿ ಹೆಸರಿಗಷ್ಟೇ ಸೀಮಿತವಾದ ಕನ್ನಡ ಜಾಗೃತಿ ಸಮಿತಿಗಳು

ಜಾಗೃತಿ ಸಮಿತಿಗಳಿಗೆ ಮರೆವಿನ ಕಾಯಿಲೆ!

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಸರ್ಕಾರದ ಭಾಷಾ ನೀತಿಯ ಅನುಷ್ಠಾನದಲ್ಲಿ ಜನರೂ ಪಾಲ್ಗೊಳ್ಳುವಂತೆ ನೋಡಿಕೊಳ್ಳುವ ಉದ್ದೇಶದಿಂದ ರಚಿಸಿದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಕನ್ನಡ ಜಾಗೃತಿ ಸಮಿತಿಗಳು ಜಿಲ್ಲೆಯಲ್ಲಿ ಮರೆವಿನ ಕಾಯಿಲೆಗೆ ತುತ್ತಾಗಿ, ತಮ್ಮ ಕರ್ತವ್ಯ ಮತ್ತು ಅಸ್ತಿತ್ವವನ್ನೇ ಮರೆತಿವೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಕನ್ನಡಿಗರ ಪ್ರಾತಿನಿಧಿಕ ಮತ್ತು ಸಾಂಸ್ಕೃತಿಕ ಮೇರು ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಚಟುವಟಿಕೆಗಳು ಗಡಿಭಾಗದ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿಷ್ಕ್ರಿಯಗೊಳ್ಳುತ್ತಿವೆ ಎಂಬ ಬೇಸರ ಸಾಹಿತ್ಯ ವಲಯದಲ್ಲಿ ಮಡುಗಟ್ಟುತ್ತಿರುವಾಗಲೇ, ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಬೇಕಾದ ಕನ್ನಡ ಜಾಗೃತಿ ಸಮಿತಿಗಳೇ ನಿದ್ದೆಯಲ್ಲಿ ಮೈಮರೆತಿವೆ ಎಂಬ ಅಸಮಾಧಾನ ಎಲ್ಲೆಡೆ ಕೇಳಿಬರುತ್ತಿದೆ.

ರಾಜ್ಯ ಸರ್ಕಾರ 1997ರಲ್ಲಿ ಕನ್ನಡ ಜಾಗೃತಿ ಸಮಿತಿಗಳ ಪರಿಕಲ್ಪನೆಗೆ ಚಾಲನೆ ನೀಡಿತ್ತು. ಜಿಲ್ಲಾ ಕನ್ನಡ ಜಾಗೃತಿ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (ಡಿಡಿಪಿಐ), ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು, ನಾಮ ನಿರ್ದೇಶನಗೊಂಡ ಅಧಿಕಾರೇತರ ಸದಸ್ಯರು (ಐದು ಜನ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರು ಸದಸ್ಯರಾಗಿರುತ್ತಾರೆ.

ತಾಲ್ಲೂಕು ಕನ್ನಡ ಜಾಗೃತಿ ಸಮಿತಿಯಲ್ಲಿ ಪ್ರತಿ ತಾಲ್ಲೂಕಿನಲ್ಲಿ ತಹಶೀಲ್ದಾರ್ ಅಧ್ಯಕ್ಷರಾಗಿರುತ್ತಾರೆ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ನಾಮನಿರ್ದೇಶನಗೊಳ್ಳುವ ಅಧಿಕಾರೇತರ ಸದಸ್ಯರು (ಐದು ಜನ), ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಸದಸ್ಯರಾಗಿರುತ್ತಾರೆ.

ಅದರಂತೆ ಲೆಕ್ಕ ಹಾಕಿದರೆ ಜಿಲ್ಲೆಯಲ್ಲಿ ಆರು ಕನ್ನಡ ಜಾಗೃತಿ ಸಮಿತಿಗಳು ಸಕ್ರಿಯವಾಗಿರಬೇಕಿತ್ತು. ದುರಂತವೆಂದರೆ ಒಂದೇ ಒಂದು ಸಮಿತಿ ಕೂಡ ಅಸ್ತಿತ್ವದಲ್ಲಿದೆ ಎಂಬ ಕುರುಹು ಇಲ್ಲದಷ್ಟು ಸಮಿತಿಗಳು ನಿಷ್ಕ್ರಿಯಗೊಂಡಿವೆ ಎನ್ನುತ್ತಾರೆ ಪ್ರಜ್ಞಾವಂತರು.

ನೆರೆಯ ಆಂಧ್ರಪ್ರದೇಶಕ್ಕೆ ಗಡಿ ಹಂಚಿಕೊಂಡಿರುವ ಜಿಲ್ಲೆಯ ಮೇಲೆ ತೆಲುಗು ಭಾಷೆಯ ದಟ್ಟ ಛಾಯೆ ಬಹು ಹಿಂದಿನಿಂದಲೂ ಇದೆ. ಇಂತಹ ನೆಲದಲ್ಲಿ ಕನ್ನಡದ ವಾತಾವರಣ ಕಾಪಿಟ್ಟುಕೊಳ್ಳುವ ಜವಾಬ್ದಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳಷ್ಟೇ, ಕನ್ನಡ ಜಾಗೃತಿ ಸಮಿತಿಗಳ ಮೇಲಿದೆ. ದುರದೃಷ್ಟವಶಾತ್‌, ಜಿಲ್ಲೆಯಲ್ಲಿ ಕನ್ನಡ ಜಾಗೃತಿ ಸಮಿತಿಗಳಿಗೇ ಇವತ್ತು ಜಾಗೃತಿ ಮೂಡಿಸಬೇಕಾದ ಹೊತ್ತು ಬಂದಿದೆ ಎನ್ನುವುದು ಸಾರ್ವತ್ರಿಕ ಟೀಕೆ.

ಪ್ರತಿ ಕನ್ನಡ ಜಾಗೃತಿ ಸಮಿತಿಗಳು ವರ್ಷದಲ್ಲಿ ಮೂರು ತಿಂಗಳಿಗೊಮ್ಮೆ ಒಂದರಂತೆ ವಾರ್ಷಿಕವಾಗಿ ನಾಲ್ಕು ಸಭೆಗಳನ್ನು ನಡೆಸಬೇಕು. ಆಡಳಿತದಲ್ಲಿ ಕನ್ನಡ ಯಾವುದೇ ಕಚೇರಿಯಲ್ಲಿ ಸಮರ್ಪಕವಾಗಿ ಬಳಕೆಯಾಗದೆ ಇರುವುದು ತಿಳಿದು ಬಂದಾಗ ಆ ವಿಚಾರವನ್ನು ಪ್ರಾಧಿಕಾರದ ಅಧ್ಯಕ್ಷರ ಗಮನಕ್ಕೆ ತಂದು, ನಿಗದಿಪಡಿಸಿದ ದಿನಾಂಕದಂದು ಅವರೊಂದಿಗೆ ಪರಿಶೀಲನೆಗೆ ಹೋಗುವ ಕೆಲಸವನ್ನು ಸಮಿತಿ ಸದಸ್ಯರು ಮಾಡಬೇಕು. ವಿಚಿತ್ರವೆಂದರೆ ಜಿಲ್ಲೆಯಲ್ಲಿ ಸಮಿತಿಗಳ ಅಧ್ಯಕ್ಷ ಸ್ಥಾನದಲ್ಲಿ ಇರಬೇಕಾದವರಿಗೆ ಅಂತಹದೊಂದು ಸಮಿತಿ ಅಸ್ತಿತ್ವದಲ್ಲಿದೆ ಎಂಬ ವಿಚಾರವೇ ಗೊತ್ತಿಲ್ಲ!

ಪರಿಣಾಮ, ಇಂದಿಗೂ ಬ್ಯಾಂಕ್‌ಗಳಲ್ಲಿ ಕರಾರು ಪತ್ರ, ಸಾಲದ ಅರ್ಜಿಗಳು, ರಸೀದಿಗಳು ಅನ್ಯ ಭಾಷೆಯಲ್ಲಿಯೇ ಹೆಚ್ಚು ಬಳಕೆಯಾಗುತ್ತಿವೆ. ಇದರಿಂದ ರೈತರು, ಜನಸಾಮಾನ್ಯರು ಪರದಾಡುವಂತಾಗುತ್ತಿದೆ. ನಗರದಲ್ಲಿ ಜಾಹೀರಾತು ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಯಾಗುತ್ತಿಲ್ಲ. ಕನ್ನಡ ಬಳಕೆ ಉತ್ತೇಜಿಸುವಂತಹ ಕಾರ್ಯಕ್ರಮಗಳು, ಸಮಾವೇಶಗಳು ನಡೆಯುತ್ತಿಲ್ಲ ಎನ್ನುವುದು ಸದಸ್ಯರ ದೂರು.

ಈ ಹಿಂದೆ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಅವರು ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ವೇಳೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಗೆ 2017ರ ಜುಲೈನಲ್ಲಿ ಜಿಲ್ಲೆಗೆ ಭೇಟಿ ನೀಡಿದ್ದು ಬಿಟ್ಟರೆ ಈವರೆಗೆ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ಒಂದೇ ಒಂದು ಚಟುವಟಿಕೆಯನ್ನು ಜಾಗೃತಿ ಸಮಿತಿಗಳು ನಡೆಸಿದ ಉದಾಹರಣೆಗಳಿಲ್ಲ.

‘ನಮ್ಮನ್ನು ಕಾಟಾಚಾರಕ್ಕೆ ಜಾಗೃತಿ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ವರ್ಷದಲ್ಲಿ ನಾಲ್ಕು ಸಭೆ ನಡೆಸಬೇಕು. ಆದರೆ ನಾಲ್ಕು ವರ್ಷಗಳಾದರೂ ನಮ್ಮನ್ನು ಒಂದೇ ಒಂದು ಸಭೆಗೆ ಕರೆದ ನೆನಪಿಲ್ಲ’ ಎಂದು ಅನೇಕ ಸದಸ್ಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಕ್ರಿಯಿಸಿ (+)