ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಣಮಟ್ಟದ ಬಿತ್ತನೆ ಬೀಜ ವಿತರಿಸಲು ಆಗ್ರಹ

ಬಾಗೇಪಲ್ಲಿ; ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರದ ಎದುರು ರೈತರ ಪ್ರತಿಭಟನೆ
Last Updated 28 ಮೇ 2020, 17:33 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ಕೃಷಿ ಇಲಾಖೆ ಕಚೇರಿಯ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ವಿತರಿಸಿದ ನೆಲಗಡಲೆ ಬಿತ್ತನೆ ಬೀಜ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ರೈತರು ತಾಲ್ಲೂಕು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಗುಣಮಟ್ಟದ ಬಿತ್ತನೆ ಬೀಜಗಳನ್ನು ನೀಡುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

10 ದಿನಗಳಿಂದ ರೈತರು ಬಿತ್ತನೆ ಬೀಜಗಳಿಗಾಗಿ ಕಚೇರಿಗೆ ತಿರುಗಾಡುತ್ತಿದ್ದಾರೆ. ಆದರೆ, ಅಧಿಕಾರಿಗಳು ಬೀಜಗಳನ್ನು ವಿತರಿಸಿರಲಿಲ್ಲ. ಬುಧವಾರ ರೈತರು ಬೀಜಗಳನ್ನು ವಿತರಿಸುವಂತೆ ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದರು.

ಗುರುವಾರ ಬೆಳಗಿನಜಾವವೇ ಕೇಂದ್ರದ ಮುಂದೆ ಬಿತ್ತನೆ ಬೀಜ ಪಡೆಯಲು ರೈತರು ಜಮಾಯಿಸಿದ್ದರು. ರೈತರು ಸರತಿ ಸಾಲಿನಲ್ಲಿ ನಿಲ್ಲಲು ಅಧಿಕಾರಿಗಳು ಕಚೇರಿ ಮುಂದೆ ಬ್ಯಾರಿಕೇಡ್‌ಗಳನ್ನು ಹಾಕಿದ್ದರು.

‘ವಿತರಿಸಿದ ಬೀಜಗಳು ಕಳಪೆಯಾಗಿವೆ. ಜೊಳ್ಳು ಬೀಜಗಳನ್ನು ಕೊಡಲಾಗಿದೆ. ಅಲ್ಲದೇ, ತಾಲ್ಲೂಕಿನಲ್ಲಿ 4,500 ಬಿತ್ತನೆ ಬೀಜದ ಪ್ಯಾಕೇಟ್‌ಗಳ ಬೇಡಿಕೆ ಇದೆ. ಆದರೆ, ಕೇವಲ 450 ಪ್ಯಾಕೇಟ್‌ಗಳು ಮಾತ್ರ ಕೃಷಿ ಸಂಪರ್ಕ ಕೇಂದ್ರದಲ್ಲಿವೆ’ ಎಂದು ಸಿಬ್ಬಂದಿ ವಿರುದ್ಧ ರೈತರು ಕಿಡಿಕಾರಿದರು.

ರೈತರಿಗೆ ಅಗತ್ಯವಾದ ಬಿತ್ತನೆ ಬೀಜ ವಿತರಣೆ ಮಾಡದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಮುಂಗಾರು ಮಳೆ ಆರಂಭವಾಗಿದೆ. ಬೀಜಗಳನ್ನು ಸುಲಿಯಲು 5 ದಿನ ಬೇಕು. ಇದೀಗ ಬಿತ್ತನೆ ಬೀಜಗಳು ವಿತರಿಸಿಲ್ಲ. ರೈತರ ಬೇಡಿಕೆಯಷ್ಟು ಬಿತ್ತನೆ ಬೀಜಗಳು ಗೋದಾಮಿನಲ್ಲಿ ಸಂಗ್ರಹಣೆ ಇಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಬಿತ್ತನೆ ಬೀಜಗಳು ವಿತರಿಸಿಲ್ಲ’ ಎಂದು ರೈತ ನರಸಿಂಹಪ್ಪ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT