ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ: ಎಚ್‌ಡಿಕೆ ಅಂಗಳಕ್ಕೆ ಟಿಕೆಟ್ ವಿವಾದ

ನಾಗರಾಜ ರೆಡ್ಡಿಗೆ ಟಿಕೆಟ್ ಎಂದಿದ್ದ ಜೆಡಿಎಸ್ ನಾಯಕರು; ಈಗ ಕೋನಪ್ಪರೆಡ್ಡಿ ಪ್ರವೇಶ
Last Updated 30 ಮೇ 2022, 10:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಈಗ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅಂಗಳ ತಲುಪಿದೆ.

ಈ ಹಿಂದೆ ಡಿ.ಜೆ.ನಾಗರಾಜ ರೆಡ್ಡಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದು ಪ್ರಕಟಿಸಿದ್ದಕುಮಾರಸ್ವಾಮಿ, ವಿವಾದದ ಹಿನ್ನೆಲೆಯಲ್ಲಿ ಮುಖಂಡರ ಜತೆ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಬಾಗೇಪಲ್ಲಿ ಕ್ಷೇತ್ರ ಮತ್ತು ಜಿಲ್ಲೆಯ ಜೆಡಿಎಸ್ ಮುಖಂಡರ ಸಭೆ ನಡೆಸಲು ತೀರ್ಮಾನಿಸಿದ್ದಾರೆ ಎನ್ನುತ್ತವೆ ಜೆಡಿಎಸ್ ಮೂಲಗಳು.

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ಗೆ ತನ್ನದೇ ನೆಲೆ ಇದೆ.2008ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಜೆ.ನಾಗರಾಜ ರೆಡ್ಡಿ 25 ಸಾವಿರ ಮತಗಳನ್ನು ಪಡೆದಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಸಿ.ಆರ್.ಮನೋಹರ್38,302 ಮತಗಳನ್ನು ಪಡೆದಿದ್ದರು. ಆ ಸಮಯದಲ್ಲಿ ಸಿ.ಆರ್.ಮನೋಹರ್‌ಗೆ ಜೆಡಿಎಸ್‌ನ ನಾಯಕರ ‍ಸಂಪೂರ್ಣ ಬೆಂಬಲ ಇಲ್ಲದಿದ್ದರೂ ಅವರು ಆ ಪ್ರಮಾಣದಲ್ಲಿ ಮತಗಳಿಸಿದ್ದರು.

ಕೆಲವು ತಿಂಗಳ ಹಿಂದೆ ಜಿಲ್ಲಾ ಜೆಡಿಎಸ್ ಮುಖಂಡರ ಸಭೆ ನಡೆಸಿದ್ದ ಕುಮಾರಸ್ವಾಮಿ, ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕೆ.ಪಿ.ಬಚ್ಚೇಗೌಡ, ಗೌರಿಬಿದನೂರಿಗೆ ನರಸಿಂಹಮೂರ್ತಿ, ಶಿಡ್ಲಘಟ್ಟಕ್ಕೆ ಮೇಲೂರು ರವಿಕುಮಾರ್, ಚಿಂತಾಮಣಿಗೆ ಹಾಲಿ ಶಾಸಕರ ಎಂ.ಕೃಷ್ಣಾರೆಡ್ಡಿ ಮತ್ತು ಬಾಗೇಪಲ್ಲಿ ಕ್ಷೇತ್ರಕ್ಕೆ ಡಿ.ಜೆ.ನಾಗರಾಜ ರೆಡ್ಡಿ ಅವರೇ ಅಭ್ಯರ್ಥಿಗಳು ಎಂದಿದ್ದರು.

ಈ ನಡುವೆ ಜಿ.ವಿ.ಶ್ರೀರಾಮರೆಡ್ಡಿ ಅವರ ನಿಧನದ ಕಾರಣದಿಂದ ಜಿಲ್ಲೆಗೆ ಬಂದ ಜನತಾ ಜಲಧಾರೆ ರಥಯಾತ್ರೆಯ ಕಾರ್ಯಕ್ರಮವು ಬಾಗೇಪಲ್ಲಿ ತಾಲ್ಲೂಕಿನಲ್ಲಿ ನಡೆಯಲಿಲ್ಲ. ತಾವೇ ಅಭ್ಯರ್ಥಿ ಎಂದು ನಾಗರಾಜರೆಡ್ಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಈ ನಡುವೆ ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ಡಿವೈಎಸ್‌ಪಿ ಚಿಂತಾಮಣಿಯ ಕೋನಪ್ಪರೆಡ್ಡಿ ಬಾಗೇಪಲ್ಲಿ ಕ್ಷೇತ್ರದತ್ತ ದೃಷ್ಟಿ ಹರಿಸಿದ್ದಾರೆ.

‘ಬಾಗೇಪಲ್ಲಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಎಚ್‌.ಡಿ.ಕುಮಾರಸ್ವಾಮಿ ಅವರು ನನಗೆ ಹಸಿರು ನಿಶಾನೆ ತೋರಿದ್ದಾರೆ’ ಎಂದು ಜೆಡಿಎಸ್ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಜಿ.ವಿ.ಶ್ರೀರಾಮರೆಡ್ಡಿ ಅವರ ಶ್ರದ್ಧಾಂಜಲಿ ಸಭೆಯ ವೇಳೆ ಕಟೌಟ್‌ಗಳನ್ನು ಸಹ ಹಾಕಿಸಿದ್ದರು. ಆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಸಹ ಪಾಲ್ಗೊಂಡಿದ್ದರು.

ಕಾರ್ಯಕರ್ತರಲ್ಲಿ ಗೊಂದಲ: ಡಿ.ಜೆ.ನಾಗರಾಜ ರೆಡ್ಡಿ ಅವರನ್ನು ಎಚ್‌.ಡಿ.ಕುಮಾರಸ್ವಾಮಿಅಭ್ಯರ್ಥಿಯನ್ನಾಗಿ ಘೋಷಿಸಿದ್ದರೂ ಕೋನಪ್ಪರೆಡ್ಡಿ ಅವರ ಪ್ರವೇಶ ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

2013 ಮತ್ತು 2018ರ ವಿಧಾನಸಭಾ ಚುನಾವಣೆಯ ಸಮಯದಲ್ಲಿಪಕ್ಷದ ವರಿಷ್ಠರು ಟಿಕೆಟ್ ವಿಚಾರವಾಗಿ ತಾಳಿದ ನಿಲುವುಗಳು ಕಾರ್ಯಕರ್ತರಲ್ಲಿ ಗೊಂದಲ ಹೆಚ್ಚಲು ಕಾರಣವಾಗಿದೆ. ಈ ಹಿಂದಿನ ಎರಡೂ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಡಿ.ಜೆ.ನಾಗರಾಜ ರೆಡ್ಡಿ ಅವರಿಗೆ ಟಿಕೆಟ್ ದೊರೆಯುತ್ತದೆ ಎನ್ನುವ ವಾತಾವರಣವಿತ್ತು. ಆದರೆ 2013ರಲ್ಲಿ ಹರಿನಾಥರೆಡ್ಡಿ ಮತ್ತು 2018ರ ಚುನಾವಣೆಯಲ್ಲಿ ಸಿ.ಆರ್.ಮನೋಹರ್ ಟಿಕೆಟ್ ಪಡೆದರು.

‘ನನಗೆ ವರಿಷ್ಠರ ಮೇಲೆ ನಂಬಿಕೆ ಇದೆ. ನಾನೇ ಅಧಿಕೃತ ಅಭ್ಯರ್ಥಿಯಾಗುತ್ತೇನೆ’ ಎಂದು2018ರ ಚುನಾವಣೆಯ ಕೊನೆಯ ಕ್ಷಣದವರೆಗೂ ನಾಗರಾಜರೆಡ್ಡಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು. ಆದರೆಸಿ.ಆರ್.ಮನೋಹರ್ ಕೊನೆಯ ಕ್ಷಣದ ಅಭ್ಯರ್ಥಿಗಳಾದರು.2023ರ ಚುನಾವಣೆಯ ಸ್ಪರ್ಧೆಯ ಉದ್ದೇಶದಿಂದ ನಾಗರಾಜರೆಡ್ಡಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು.

ಇತ್ತೀಚೆಗೆ ಬಾಗೇಪಲ್ಲಿಗೆ ಭೇಟಿ ನೀಡಿದ್ದ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಚೈತ್ರಾ ಗೌಡ ‘ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಕುಮಾರಸ್ವಾಮಿ ಅವರು ಘೋಷಿಸಿಲ್ಲ. ನಾಗರಾಜರೆಡ್ಡಿ ಅವರಿಗೆ ಪಕ್ಷ ಸಂಘಟಿಸಲು ಹೇಳಿದ್ದಾರೆ’ ಎಂದಿದ್ದರು.ಈ ಎಲ್ಲ ಬೆಳವಣಿಗೆಗಳ ಕಾರಣದಿಂದ ಕಾರ್ಯಕರ್ತರಲ್ಲಿ ಗೊಂದಲ ಹೆಚ್ಚಿದೆ. ಜೆಡಿಎಸ್ ಅಭ್ಯರ್ಥಿ ನಾಗರಾಜರೆಡ್ಡಿಯೊ ಅಥವಾ ಕೋನಪ್ಪರೆಡ್ಡಿಯೊ ಎನ್ನುವ ಚರ್ಚೆ ಕಾರ್ಯಕರ್ತರ ವಲಯದಲ್ಲಿ ಬಿರುಸಾಗಿದೆ.

‘ನನ್ನ ಸ್ಪರ್ಧೆ ಖಚಿತ’
‘ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿ 18 ವರ್ಷದಿಂದ ಪಕ್ಷ ಕಟ್ಟಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ನಾನೇ ಜೆಡಿಎಸ್ ಅಭ್ಯರ್ಥಿಯಾಗುವೆ. ಟಿಕೆಟ್ ತಪ್ಪಿದರೆ ಪಕ್ಷೇತರನಾಗಿ ಸ್ಪರ್ಧಿಸುವೆ ಎಂದು ಡಿ.ಜೆ.ನಾಗರಾಜ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

2008ರಲ್ಲಿ 25 ಸಾವಿರ ಮತ ಪಡೆದು ಅಲ್ಪ ಅಂತರದಿಂದ ಸೋಲು ಅನುಭವಿಸಿದೆ. ಅಂದಿನಿಂದ ಇಂದಿನವರೆಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿಯೂ ಸ್ವಂತ ಹಣ ಹಾಕಿ ಪಕ್ಷ ಕಟ್ಟಿದ್ದೇನೆ. ನನಗೆ ಟಿಕೆಟ್ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಮುಖಂಡರು ಮತ್ತು ಕಾರ್ಯಕರ್ತರು ನನ್ನ ಜತೆ ಇದ್ದಾರೆ ಎಂದರು.

ಎಚ್‌ಡಿಕೆ ಸಭೆ ಶೀಘ್ರ
ನಾಗರಾಜ ರೆಡ್ಡಿ ಅವರಿಗೆ ಬಾಗೇಪಲ್ಲಿ ಕ್ಷೇತ್ರದ ಟಿಕೆಟ್ ಎಂದು ಈ ಹಿಂದೆಯೇ ಘೋಷಿಸಲಾಗಿದೆ. ಅವರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಈಗ ಕೋನಪ್ಪರೆಡ್ಡಿ ಅವರ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿವೆ. ಶೀಘ್ರದಲ್ಲಿಯೇ ಕುಮಾರಸ್ವಾಮಿ ಅವರು ಈ ವಿಚಾರದ ಕುರಿತು ಪಕ್ಷದ ಮುಖಂಡರ ಸಭೆ ನಡೆಸಿ ಗೊಂದಲಗಳಿಗೆ ತೆರೆ ಎಳೆಯುವರು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT