ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮರ್ಪಕ ಕಾರ್ಯವೈಖರಿಗೆ ಆಕ್ರೋಶ

ಬಾಗೇಪಲ್ಲಿ ಪುರಸಭೆ ಸಾಮಾನ್ಯ ಸಭೆ
Last Updated 16 ಅಕ್ಟೋಬರ್ 2021, 3:07 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಪಟ್ಟಣದ ವ್ಯಾಪ್ತಿಯಲ್ಲಿನ ನಿವೇಶನದಾರರಲ್ಲಿ ಎಲ್ಲಾ ದಾಖಲೆಗಳು ಇದ್ದರೆ ಶಾಖೆಯ ಅಧಿಕಾರಿಗಳು ಎನ್‌ಒಸಿ, ಪಿಐಡಿ ಸಂಖ್ಯೆ ನೀಡುತ್ತಿಲ್ಲ. ಖಾತೆಗಳ ರದ್ದು, ಯರ್ರ ಕಾಲುವೆ ಒತ್ತುವರಿ ಹಾಗೂ ಉದ್ಯಾನಗಳನ್ನು ಸರ್ವೆ ಮಾಡಿಸುವುದು ಸೇರಿ ವಿವಿಧ ವಿಷಯಗಳ ಬಗ್ಗೆ ಪುರಸಭೆ ಆವರಣದಲ್ಲಿ ಬುಧವಾರ ಪುರಸಭೆ ಪ್ರಭಾರ ಅಧ್ಯಕ್ಷ ಎ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರುಒಕ್ಕೊರಲಿನಿಂದ ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾ ವ್ಯಾಪ್ತಿಯ ಯರ್ರಕಾಲುವೆ ಒತ್ತುವರಿ ಸರ್ವೆ ಕಾರ್ಯ ಸಂಪೂರ್ಣ ಅವೈಜ್ಞಾನಿಕವಾಗಿದೆ. ಯರ್ರಕಾಲುವೆ ಪೂರ್ತಿ ಸರ್ವೆ ಮಾಡಿಸುವುದು ಬಿಟ್ಟು, ಮಧ್ಯಭಾಗದಿಂದ ಸರ್ವೆ ಮಾಡಿದ್ದಾರೆ. ಒತ್ತುವರಿ ಮಾಡದೇ ಇರುವ ನಾಗರಿಕರಿಗೆ ನೋಟಿಸ್ ನೀಡಿದ್ದಾರೆ. ವಿನಾಃಕಾರಣ ನ್ಯಾಯಾಲಯಕ್ಕೆ ಅಲೆದಾಡಿಸುತ್ತಿದ್ದಾರೆ ಎಂದು ಪುರಸಭಾ ಸದಸ್ಯ ಅಶೋಕ್ ರೆಡ್ಡಿ ಹೇಳಿದರು.

ತಾಲ್ಲೂಕು ಸರ್ವೆ ಅಧಿಕಾರಿ, ಮುಂದಿನ 10 ದಿನಗಳ ಒಳಗೆ ಪುನಃ ಸರ್ವೆ ಕಾರ್ಯ ಮಾಡಿಸಲಾಗುವುದು. ವಿನಾಃಕಾರಣ ನೋಟಿಸ್ ಜಾರಿ ಮಾಡಿರುವವರ ಹೆಸರುಗಳನ್ನು ಕೈಬಿಡಲು ಮನವಿ ಮಾಡಲಾಗುವುದು ಎಂದರು.

ಪಿಐಡಿ ಸಂಖ್ಯೆ, ಖಾತೆಗಳನ್ನು ರದ್ದುಪಡಿಸಿ ಜನರನ್ನು ವಿನಾಃಕಾರಣ ನ್ಯಾಯಾಲಯಕ್ಕೆ ಅಲೆದಾಡಿಸುವ ಕಾಯ್ದೆ ಯಾವ ಕಾನೂನಿನಲ್ಲಿ ಇದೆ ಎಂದು ಪುರಸಭೆ ಸದಸ್ಯ ನರಸಿಂಹಮೂರ್ತಿ ಕೇಳಿದರು.

ಪುರಸಭೆಯ ವ್ಯಾಪ್ತಿಯ ಗಡಿಯನ್ನು ಗುರುತಿಸಿ, ಗಡಿರೇಖೆ ವ್ಯಾಪ್ತಿಯೊಳಗಿರುವ ಮನೆ ಹಾಗೂ ನಿವೇಶನಗಳನ್ನು ಪುರಸಭೆಗೆ ಸೇರಿಸಿಕೊಳ್ಳಲು ಜಿಲ್ಲಾಧಿಕಾರಿ ಪತ್ರ ಬರೆದರೂ, ಇಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಸದಸ್ಯರು ಆರೋಪ ಮಾಡಿದರು.

ಪಟ್ಟಣದ ಎಸ್‌ಸಿಪಿ, ಟಿಎಸ್‌ಪಿ ಅನುದಾನಗಳಲ್ಲಿ ಶೇ 50ರಷ್ಟು ಪರಿಶಿಷ್ಟಜಾತಿ, ಪಂಗಡದ ಜನರು ನೆಲೆಸಿರುವ ವಾರ್ಡ್‍ಗಳಲ್ಲಿ ಹೆಚ್ಚಿನ ಅನುದಾನ ನೀಡಬೇಕು ಎಂದು ಸದಸ್ಯೆ ವನೀತಾದೇವಿ ಮನವಿ ಮಾಡಿದರು.

ಎಲ್ಲಾ ವಾರ್ಡ್‍ಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಇದ್ದಾರೆ. ಅನುದಾನವನ್ನು ಸಮಾನವಾಗಿ ಹಂಚಬೇಕು ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ಪಟ್ಟಣದ ವಾರ್ಡ್‍ಗಳಲ್ಲಿ ಎಸ್‌ಸಿ, ಎಸ್‌ಟಿ ಜನರನ್ನು ಇದುವರೆಗೂ ಗುರುತಿಸಿಲ್ಲ. ಸರ್ವೆ ಕಾರ್ಯ ಮಾಡಿಲ್ಲ. ಸರ್ವೆ ಮಾಡಿದ ನಂತರದಲ್ಲಿ ಜನರ ಸಂಖ್ಯೆ ಆಧರಿಸಿ ಅನುದಾನಗಳನ್ನು ಹಂಚಿಕೆ ಮಾಡೋಣ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಎ.ನಂಜುಂಡಪ್ಪ ತಿಳಿಸಿದರು.

ಪಟ್ಟಣದ ಮುಖ್ಯರಸ್ತೆ ಸೇರಿದಂತೆ ರಸ್ತೆಗಳಲ್ಲಿ ಇರುವ ವಿದ್ಯುತ್ ಕಂಬ, ತಂತಿಗಳನ್ನು ತೆರವು ಮಾಡಿಸಬೇಕು ಎಂದು ಸದಸ್ಯರು ಮನವಿ ಮಾಡಿದರು. ಬೆಸ್ಕಾಂ ಅಧಿಕಾರಿ ಲಕ್ಷ್ಮಿನಾರಾಯಣ ಪ್ರತಿಕ್ರಿಯಿಸಿ, ತೆರವು ಮಾಡಲು ಅಗತ್ಯ ಅನುದಾನ ಅವಶ್ಯಕತೆ ಇದೆ. ಮುಂದಿನ 15 ದಿನಗಳ ಒಳಗೆ ವಿದ್ಯುತ್ ಕಂಬ, ತಂತಿಗಳನ್ನು ತೆರವು ಮಾಡಿಸಲಾಗುವುದು ಎಂದು ಸಭೆಗೆ ಮಾಹಿತಿ ತಿಳಿಸಿದರು.

ಪಟ್ಟಣ ವ್ಯಾಪ್ತಿಯಲ್ಲಿ ಇರುವ ಉದ್ಯಾನಗಳ ವಿವರ ಹಾಗೂ ಸರ್ವೆ ಮಾಡಿರುವ, ಅಳತೆ ಇರುವ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಸದಸ್ಯ ಕೆ.ಎ.ಶ್ರೀನಾಥ್ ಕೇಳಿದರು. ಸರ್ವೆ ಮಾಡಿಸಿ, ಬೌಂಡರಿ ಹಾಕಿಸಿ ಎಂದು ಹಿಂದಿನ ಸಭೆಗಳಲ್ಲಿ ತಿಳಿಸಿದರೂ, ಅಧಿಕಾರಿಗಳು ಕಾರ್ಯನಿರ್ವಹಿಸಿಲ್ಲ ಎಂದು ಕಿಡಿಕಾರಿದರು.

ಪುರಸಭಾ ಮುಖ್ಯಾಧಿಕಾರಿ ಕೆ.ಮಧುಕರ್, ಸದಸ್ಯರಾದ ಶ್ರೀನಿವಾಸರೆಡ್ಡಿ, ಅಶೋಕ್ ರೆಡ್ಡಿ, ಅನ್ಸರ್, ಮಧುಸೂದನರೆಡ್ಡಿ, ಗಡ್ಡಂರಮೇಶ್, ಸದಸ್ಯೆಯರಾದ ಶಬಾನಾ ಪರ್ವೀನ್, ವಿ.ವನೀತಾದೇವಿ, ಸರೋಜಮ್ಮ, ರೇಷ್ಮಾ, ಹಸೀನಾ, ಲೆಕ್ಕಾಧಿಕಾರಿ ಶ್ರೀಧರ್, ಜೆಇ ರಾಮಯ್ಯ, ಅಧಿಕಾರಿಗಳಾದ ಅಥಾವುಲ್ಲಾ, ಭಾಷ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT