ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇ ಸೂರಿನಲ್ಲಿ ಆಂಜನೇಯ, ಪೀರು ಆರಾಧನೆ

ಬಾಗೇಪಲ್ಲಿ: ಹಿಂದೂ-ಮುಸ್ಲಿಂ ಭಾವೈಕ್ಯದ ಮೊಹರಂ ಹಬ್ಬ
Last Updated 16 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಮಲ್ಲಸಂದ್ರ ಗ್ರಾಮದಲ್ಲಿ ಹಿಂದೂ-ಮುಸ್ಲಿಂರು ಸೇರಿ ಸಂಭ್ರಮ, ಸಹಬಾಳ್ವೆಯೊಂದಿಗೆ ಮೊಹರಂ (ಪೀರ್ಲ ಪಂಡುಗ) ಆಚರಿಸಿದರು.

ಈ ಗ್ರಾಮದಲ್ಲಿ 350 ಕುಟುಂಬಗಳಿದ್ದು, ಈ ಪೈಕಿ 20 ಮುಸ್ಲಿಂ ಕುಟುಂಬಗಳು. ಹಿಂದೂ -ಮುಸ್ಲಿಮರು ಸೇರಿ ಚಾವಡಿಯನ್ನು ಕಟ್ಟಿದ್ದಾರೆ. ಚಾವಡಿಯ ಎಡಗಡೆ ಅಭಯಾಂಜನೇಯ ಸ್ವಾಮಿ ಹಾಗೂ ಬಲಗಡೆ ಪೀರುಗಳ ಆಲಯವನ್ನು ನಿರ್ಮಿಸಿದ್ದಾರೆ. ಪ್ರತಿನಿತ್ಯ ಗ್ರಾಮಸ್ಥರು ಆಂಜನೇಯ, ಪೀರುಗಳಿಗೆ ಪೂಜಿಸುತ್ತಾರೆ. ಮೊಹರಂನಲ್ಲಿ ವಿಶೇಷ ಪೂಜೆ ಇರುತ್ತದೆ.

ಮೊಹರಂ ಬಂತೆಂದರೆ ಮಲ್ಲಸಂದ್ರ ಗ್ರಾಮದಲ್ಲಿ ಸಂಭ್ರಮ ಕಳೆಗಟ್ಟುತ್ತದೆ. ಪೀರುಗಳ ಚಾವಡಿಗೆ ಸುಣ್ಣ, ಬಣ್ಣ ಹಚ್ಚುತ್ತಾರೆ. ಗ್ರಾಮದ ಊರ ಬಾಗಿಲಿಗೆ ತಳಿರು ತೋರಣಗಳಿಂದ ಸಿಂಗರಿಸಲಾಗುತ್ತದೆ.

ಗ್ರಾಮದಲ್ಲಿ ಸೆಪ್ಟಂಬರ್ 6ರಿಂದ 15ರವರೆಗೂ ವಿಶೇಷ ಪೂಜೆ ನಡೆಯಿತು. ಅಗ್ನಿಕುಂಡದ ಗುದ್ದಲಿ ಪೂಜೆ ಮೂಲಕ ಮೊಹರಂ ಆರಂಭವಾಗುತ್ತದೆ. 7ನೇ ದಿನ ಚಿಕ್ಕ ಸರಿಗೆತ್ತು ಪೂಜೆ, ಅಭಯಾಂಜನೇಯಸ್ವಾಮಿ ಹಾಗೂ ಬಾಬಯ್ಯ ಸ್ವಾಮಿಗೆ ವಿಶೇಷ ದೀಪಾಲಂಕಾರ ಮಾಡಲಾಗಿತ್ತು.

ಗ್ರಾಮದಲ್ಲಿ ಬಾಬಯ್ಯಸ್ವಾಮಿ ಹಾಗೂ ಪೀರುಗಳನ್ನು ಮೆರವಣಿಗೆ ಮಾಡಲಾಯಿತು. ಅಗ್ನಿಕುಂಡ ಪ್ರವೇಶ, ಡೊಳ್ಳು ಕುಣಿತ, ವೇಷಭೂಷಣಗಳ ನೃತ್ಯಗಳು ಅದ್ದೂರಿಯಾಗಿ ನಡೆಯಿತು. ಬೆಂಗಳೂರಿನ ರೂಪಕಲಾ ನೃತ್ಯ ಶಾಲೆಯ ಮುಖ್ಯಸ್ಥೆ ರೂಪಶ್ರೀ ಅರವಿಂದ್‌ ಅವರ ನೇತೃತ್ವದಲ್ಲಿ ಕಲಾತಂಡದವರು ವಿವಿಧತೆಯಲ್ಲಿ ಏಕತೆ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಶಿವನ ರುದ್ರ ತಾಂಡವ, ಹಚ್ಚೇವು ಕನ್ನಡದ ದೀಪ ಹಾಡುಗಳಿಗೆ ಭರತನಾಟ್ಯ ಪ್ರದರ್ಶಿಸಿದರು. ತಮಟೆ ಸದ್ದಿಗೆ ಎಲ್ಲರೂ ಹೆಜ್ಜೆ ಹಾಕಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT