ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಬಜೆಟ್ | ಚಿಕ್ಕಬಳ್ಳಾಪುರ; ಘೋಷಣೆಯಷ್ಟೇ, ಕಾರ್ಯಗತವಿಲ್ಲ

ಕಳೆದ ವರ್ಷದ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳಿಗೆ ಗ್ರಹಣ
Last Updated 18 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ವರ್ಷ, 2021ರ ಮಾ.8ರಂದು ಅಂದಿನ ಹಣಕಾಸು ಸಚಿವರೂ ಆಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಿದ್ದರು. ಆ ಬಜೆಟ್‌ನಲ್ಲಿ ಜಿಲ್ಲೆಯಅಭಿವೃದ್ಧಿಗೆ ಮತ್ತು ಜನರ ಆರ್ಥಿಕ ಬದುಕನ್ನು ಉತ್ತಮಗೊಳಿಸಲು ಮಹತ್ವದ್ದು ಎನಿಸುವ ಯಾವುದೇ ಯೋಜನೆಗಳು ಘೋಷಣೆ ಆಗಿರಲಿಲ್ಲ.

ಅಲ್ಪತೃಪ್ತಿ ಎನ್ನುವ ರೀತಿಯಲ್ಲಿ ಜಿಲ್ಲೆಗೆ ಯೋಜನೆಗಳನ್ನು ಘೋಷಿಸಲಾಗಿತ್ತು. 2022ನೇ ಬಜೆಟ್ ಮಂಡನೆಗೆ ದಿನಗಳು ಹತ್ತಿರವಿದೆ. ಈ ಸಂದರ್ಭದಲ್ಲಿ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆಗಳು ಜಾರಿಯಾಗಿವೆಯೇ? ಯಾವ ಹಂತದಲ್ಲಿ ಇವೆ? ಎನ್ನುವುದನ್ನು ನೋಡಿದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಜಿಲ್ಲೆಯ ಪಾಲಿಗೆ ಕಳೆದ ಬಜೆಟ್ ಬರಿ ಘೋಷಣೆಗಷ್ಟೇ ಮೀಸಲು, ಕಾರ್ಯಗತಕ್ಕಲ್ಲ ಎನ್ನುವುದು ಎದ್ದು ಕಾಣುತ್ತದೆ.

ಕಳೆದ ಬಜೆಟ್‌ನಲ್ಲಿಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂಎಲ್‌ಡಿ ನೀರು ತುಂಬಿಸುವ ₹ 500 ಕೋಟಿ ವೆಚ್ಚದ ಯೋಜನೆ ಘೋಷಿಸಲಾಗಿತ್ತು.

ಆಗ ಈ ಬಗ್ಗೆ ಜಿಲ್ಲೆಯ ಜನರಲ್ಲಿ ಸಣ್ಣ ಪ್ರಮಾಣದಲ್ಲಿ ನಿರೀಕ್ಷೆಗಳು ಗರಿಗೆದರಿದವು. ಕೊಳಚೆ ನೀರಾದರೂ ಸರಿ ಜಿಲ್ಲೆಯ ಎಷ್ಟು ಕೆರೆಗಳಿಗೆ ಹರಿಯುತ್ತದೆ ಎನ್ನುವ ಕುತೂಹಲ ಮೂಡಿತ್ತು. ಆದರೆ ಇಂದಿಗೂ ಈ ಯೋಜನೆಯಡಿ ಸಣ್ಣ ಪ್ರಮಾಣದಲ್ಲಿಯೂ ಕೆಲಸಗಳು ನಡೆದಿಲ್ಲ. ಯೋಜನೆ ಘೋಷಣೆಗೆ ಮಾತ್ರ ಸೀಮಿತವಾಗಿದೆ.

ನಂದಿಗಿರಿಧಾಮದ ನಿರ್ವಹಣೆಯನ್ನು ತೋಟಗಾರಿಕಾ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವ ವಿಚಾರವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಯಿತು. ಆದರೆ ಅಭಿವೃದ್ಧಿಗೆ ಅನುದಾನ ಮೀಸಲಿಡಲಿಲ್ಲ.

ಆ ಬಜೆಟ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒಟ್ಟಾರೆ ₹ 500 ಕೋಟಿ ಮೀಸಲಿಡಲಾಗಿತ್ತು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಒಳಗೊಂಡ ‘ವಾರಾಂತ್ಯ ಪ್ರವಾಸಿ ವೃತ್ತ’ ಅಭಿವೃದ್ಧಿಯ ಪ್ರಸ್ತಾಪ ಮಾಡಲಾಗಿತ್ತು.

ಈ ಯೋಜನೆ ಕಾರ್ಯಗತವಾಗಿದ್ದರೂ ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರದ ಪ್ರವಾಸಿತಾಣಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆಗಳು ದೊರೆಯುತ್ತಿದ್ದವು. ಆದರೆ ಚಿಕ್ಕಬಳ್ಳಾಪುರದ ಪ್ರವಾಸಿ ತಾಣಗಳ ಅಭಿವೃದ್ಧಿ ಈ ಹಿಂದೆ ಹೇಗಿತ್ತೋ ಅದೇ ಹಾದಿಯಲ್ಲಿದೆ.

ಇತ್ತೀಚೆಗೆ ನಂದಿ ಗಿರಿಧಾಮಕ್ಕೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಗಿರಿಧಾಮದಲ್ಲಿ ಸೌಲಭ್ಯಗಳನ್ನು ಕಲ್ಪಿಸುವುದು, ರೋಪ್ ವೇಗೆ ಟೆಂಡರ್ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಮಾತನಾಡಿದ್ದಾರೆ. ಈ ಹಿಂದಿನಿಂದಲೂ ನಂದಿಗಿರಿಧಾಮದ ಅಭಿವೃದ್ಧಿಯ ವಿಚಾರಗಳು ಮಾತುಗಳಿಗೆ ಸೀಮಿತವಾಗಿದೆ. ಇಂದಿಗೂ ಸಮರ್ಪಕ ಶೌಚಾಲಯ, ಸಮೃದ್ಧ ನೀರಿನ ವ್ಯವಸ್ಥೆ ಗಿರಿಧಾಮದಲ್ಲಿ ಇಲ್ಲ.

ಎಚ್.ನರಸಿಂಹಯ್ಯ ಅವರ ಗೌರವಾರ್ಥ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ 200 ಎಕರೆಯಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರ ನಿರ್ಮಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದರು. ಇದಕ್ಕೆ ₹ 10 ಕೋಟಿ ಅನುದಾನ ಸಹ ಮೀಸಲಿಟ್ಟಿದ್ದರು.ಕಳೆದ ಬಜೆಟ್‌ನಲ್ಲಿ ಜಿಲ್ಲೆಯ ಜನರು ಒಂದಿಷ್ಟು ಸಂಭ್ರಮಪಡಲು ಇದು ಪ್ರಮುಖ ಕಾರಣವಾಗಿತ್ತು.

ಗೌರಿಬಿದನೂರು ತಾಲ್ಲೂಕು ಹೊಸೂರು ಹೋಬಳಿಯ ಹೊಸಕೋಟೆಯ ಬಳಿ ನಿರ್ಮಾಣವಾಗಿರುವ ಎಚ್.ನರಸಿಂಹಯ್ಯ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸಮೀಪವೇ ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರ ತಲೆ ಎತ್ತಬೇಕಿತ್ತು.

ಆದರೆ ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರವೂ ಘೋಷಣೆಗೆ ಸೀಮಿತವಾಗಿದೆ. ವಿಜ್ಞಾನ ಕೇಂದ್ರವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ರೂಪಿಸುವ ಯೋಜನೆಯನ್ನು ಸರ್ಕಾರ ಹೊಂದಿತ್ತು. ಇದಕ್ಕೆ ಆಡಳಿತಾತ್ಮಕ ಅನುಮೋದನೆಯೂ ದೊರೆತಿದೆ.

ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಗೆ ಕೇಂದ್ರದ ಜವಾಬ್ದಾರಿವಹಿಸಲಾಗಿದೆ. ವಿಜ್ಞಾನ ಕೇಂದ್ರಕ್ಕೆ ಅಗತ್ಯವಿರುವ ಜಮೀನಿನ ಸರ್ವೆ ಸಹ ಪೂರ್ಣವಾಗಿದೆ. ಕಡತಗಳು ಸರ್ಕಾರಕ್ಕೆ ರವಾನೆ ಆಗಿವೆ. ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರಕ್ಕೆ ತಾಂತ್ರಿಕ ಸಲಹಾ ಸಮಿತಿ ಸಹ ರಚನೆ ಆಗಿದೆ ಎನ್ನುತ್ತವೆ ಮೂಲಗಳು.

ಹೀಗೆ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ಕೇಂದ್ರ ಘೋಷಣೆಯಾಗಿ ಒಂದು ವರ್ಷದ ಹತ್ತಿರ ಬರುತ್ತಿದ್ದರೂ ಯೋಜನೆ ಆಮೆಗತಿಯಲ್ಲಿದೆ.

ಕಳೆದ ಬಜೆಟ್‌ನಲ್ಲಿ ದೊರೆತಿದ್ದಿಷ್ಟು
ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂಎಲ್‌ಡಿ ನೀರು ತುಂಬಿಸುವ ₹ 500 ಕೋಟಿ ವೆಚ್ಚದ ಯೋಜನೆ ಘೋಷಿಸಲಾಗಿತ್ತು.

ನಂದಿಗಿರಿಧಾಮದ ನಿರ್ವಹಣೆ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ.

ಎಚ್.ನರಸಿಂಹಯ್ಯ ಅವರ ಗೌರವಾರ್ಥ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ 200 ಎಕರೆಯಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರ ನಿರ್ಮಾಣ.ಇದಕ್ಕೆ ₹ 10 ಕೋಟಿ ಅನುದಾನ ಮೀಸಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT