ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆಯಲ್ಲಿನ ವಿದ್ಯುತ್ ದೀಪಗಳು ಕಳೆದ 15 ದಿನಗಳಿಂದ ಉರಿಯುತ್ತಿಲ್ಲ. ಇದರಿಂದ ಸಾರ್ವಜನಿಕರು ಕಗ್ಗತ್ತಲಿನಲ್ಲಿ ಸಂಚರಿಸುವಂತೆ ಆಗಿದೆ. ಆದರೆ ಸಂಬಂಧಪಟ್ಟ ಪುರಸಭಾ ಮುಖ್ಯಾಧಿಕಾರಿಗಳು ಜಾಣ ಕುರುಡರಂತೆ ವರ್ತಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ನ್ಯಾಷನಲ್ ಕಾಲೇಜಿನಿಂದ ಟಿ.ಬಿ.ಕ್ರಾಸ್‌ವರೆಗೆ ಮುಖ್ಯರಸ್ತೆಯ ಮಧ್ಯದಲ್ಲಿ ವಿದ್ಯುತ್ ಕಂಬ ಅಳವಡಿಸಲಾಗಿದೆ. 2 ಕಡೆಗಳಲ್ಲಿ ದೀಪ ಅಳವಡಿಸಿದ್ದಾರೆ. ಸಿವಿಲ್ ನ್ಯಾಯಾಲಯದಿಂದ ನ್ಯಾಷನಲ್ ಕಾಲೇಜಿನವರೆಗೆ ಮುಖ್ಯರಸ್ತೆಯಲ್ಲಿ ಸಂಜೆಯಾಗುತ್ತಲೇ ವಿದ್ಯುತ್ ದೀಪ ಉರಿಯದೇ, ಇಡೀ ರಾತ್ರಿಯೆಲ್ಲಾ ಕಗ್ಗತ್ತಲು ಆವರಿಸಿದೆ.
ಕಳಪೆ ಗುಣಮಟ್ಟದ ಬಲ್ಬ್ ಹಾಕಿದ್ದಾರೆ. ನ್ಯಾಷನಲ್ ಕಾಲೇಜಿನ ಮುಂದೆ, ಡಾ.ಎಚ್.ಎನ್.ವೃತ್ತ, ಕುಂಬಾರಪೇಟೆ, ಭಜನೆ ಮಂದಿರ ರಸ್ತೆ, ಸಂತೆ ಮೈದಾನ ರಸ್ತೆ, ಆವುಲ ಮಂದೆ ರಸ್ತೆ, ಪೊಲೀಸ್, ಆರೋಗ್ಯ ಇಲಾಖೆ ವಸತಿಗೃಹದ ಕಡೆಗೆ ಜನರು ಕತ್ತಲಿನಲ್ಲಿ ಸಂಚರಿಸುವಂತಾಗಿದೆ.
ಡಾ.ಎಚ್.ಎನ್.ವೃತ್ತದಲ್ಲಿ, ಪಿಎಲ್‌ಡಿ ಬ್ಯಾಂಕ್ ಹಾಗೂ ಬಸ್ ನಿಲ್ದಾಣದ ಮುಂದೆ ಹೈಮಾಸ್ಟ್ ದೀಪದ ಕಂಬಗಳು ಇದೆ. ಆದರೆ ವಿದ್ಯುತ್ ದೀಪ ಉರಿಯುತ್ತಿಲ್ಲ. ವಿವಿಧ ವಾರ್ಡ್‍ಗಳಲ್ಲಿನ ಬೀದಿದೀಪಗಳ ಪರಿಸ್ಥಿತಿ ಏನು? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ವಿದ್ಯುತ್ ದೀಪ ಉರಿಯುತ್ತಿಲ್ಲ ಎಂದು ಪ್ರತಿಭಟನೆ ನಡೆದ ಸಂದರ್ಭದಲ್ಲಿ ಮುಖ್ಯಾಧಿಕಾರಿ ಗಮನಕ್ಕೆ ತಂದಿದ್ದೇವೆ. ರಾತ್ರಿ ವಾಸ್ತವ್ಯ ಮಾಡಿ ಪರಿಶೀಲಿಸಿ, ರಿಪೇರಿ ಮಾಡಿಸಿ ಎಂದು ಹೇಳಿದರೂ ರಿಪೇರಿ ಮಾಡಿಸಿಲ್ಲ. ಹಿರಿಯ ಅಧಿಕಾರಿಗಳು ಗಮನ ಹರಿಸಿ ಪಟ್ಟಣದ ಮುಖ್ಯರಸ್ತೆಯಲ್ಲಿ ಹಾಗೂ ವಾರ್ಡ್‍ಗಳಲ್ಲಿ ದೀಪಗಳನ್ನು ಉರಿಯುವಂತೆ ಮಾಡಿಸಬೇಕು ಎಂದು ಸಿಪಿಎಂ ಪಟ್ಟಣ ಸ್ಥಳೀಯ ಸಮಿತಿ ಸದಸ್ಯ ಗೋವರ್ಧನಚಾರಿ ಒತ್ತಾಯಿಸಿದರು.
ಬೀದಿದೀಪ ನಿರ್ವಹಣೆಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಡ್ರಾ ಆಗಿದೆ. ವಿದ್ಯುತ್ ಸರಬರಾಜಿನ ಪರಿಕರ ಖರೀದಿಯಲ್ಲಿ ಹಣ ಲೂಟಿ ಆಗಿದೆ. ಕೂಡಲೇ ಜಿಲ್ಲಾಧಿಕಾರಿ ಗಮನಹರಿಸಿ ತನಿಖೆ ಮಾಡಿಸಬೇಕು ಎಂದು ಪಟ್ಟಣದ 7ನೇ ವಾರ್ಡ್ ನಿವಾಸಿ ರಾಜಶೇಖರರೆಡ್ಡಿ ಒತ್ತಾಯಿಸಿದರು.
ಪಟ್ಟಣದ ಮುಖ್ಯರಸ್ತೆ, ಬೀದಿಗಳಲ್ಲಿ ತೊಂದರೆ ಇರುವ ಕಡೆಗಳಲ್ಲಿ ವಿದ್ಯುತ್ ದೀಪಗಳನ್ನು ರಿಪೇರಿ ಮಾಡಿಸಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ರುದ್ರಮ್ಮಶರಣಯ್ಯ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.