ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಕುಡಿಯುವ ನೀರಿಗೆ ತತ್ವಾರ

ಬತ್ತಿದ ಕೃಷ್ಣಾ ನದಿ; ನೀರಿಗಾಗಿ ಪರದಾಡುತ್ತಿರುವ ಜನ–ಜಾನುವಾರು
Last Updated 21 ಮೇ 2018, 6:08 IST
ಅಕ್ಷರ ಗಾತ್ರ

ಅಥಣಿ: ತಾಲ್ಲೂಕಿನಲ್ಲಿ ಹರಿದಿರುವ ಕೃಷ್ಣಾ ನದಿ ಬತ್ತಿರುವುದರಿಂದ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ಈ ಭಾಗದ ಬಹುತೇಕ ಜನರು ಮಹಾರಾಷ್ಟ್ರದಿಂದ ಹರಿದು ಬರುವ ಕೃಷ್ಣಾ ನದಿ ನೀರಿನ ಮೇಲೆ ಅವಲಂಬಿತವಾಗಿದ್ದಾರೆ. ಕೃಷಿ, ನಿತ್ಯ ಬಳಕೆ ಹಾಗೂ ಕುಡಿಯುವ ನೀರಿಗೆ ಇರುವುದು ಇದೊಂದೇ ಪ್ರಮುಖ ಜಲ ಮೂಲ. ಅಥಣಿ ನಗರದಲ್ಲಿ ಶೇ 80ರಷ್ಟು ಜನರು, ಕೊಳವೆಬಾವಿಗಿಂತಲೂ ನದಿ ನೀರು ಅವಲಂಬಿಸಿದ್ದಾರೆ. ನದಿಯಲ್ಲಿ ಕ್ರಮೇಣ ನೀರು ಕಡಿಮೆಯಾಗುತ್ತಿರುವುದರಿಂದ, ಆತಂಕ ಮೂಡಿಸಿದೆ.

ಕೆಲವು ಗ್ರಾಮಗಳಲ್ಲಿ ಈಗಾಗಲೇ ಬರಗಾಲದ ಛಾಯೆ ಕಂಡುಬರುತ್ತಿದೆ. ಒಟ್ಟು ಏಳು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಇಲ್ಲಿ ಜಾರಿಯಲ್ಲಿವೆ. 79 ಗ್ರಾಮಗಳಿಗೆ 69 ತೋಟದ ವಸತಿಗಳಿಗೆ ನೀರು ಪೂರೈಕೆ ಆಗುತ್ತಿತ್ತು. ಈಗ ಅವು ಕೂಡ ನಿಂತು ಹೋಗಿವೆ. ಹೋದ ವರ್ಷ ಶಾಸಕರು ಹಾಗೂ ಸಂಸದರು ಮಹಾರಾಷ್ಟ್ರ ಮುಖ್ಯಮಂತ್ರಿ ಭೇಟಿಯಾಗಿ ನದಿಗೆ ಕೊಯ್ನಾ ಜಲಾಶಯದಿಂದ ನೀರು ಬಿಡಿಸಿದ್ದರು. ಆದರೆ, ಈ ಬಾರಿ ರಾಜಕಾರಣಿಗಳು ಚುನಾವಣೆಯಲ್ಲಿ ಮುಳುಗಿ ಹೋದರು. ಸಂಬಂಧಿಸಿದ ಅಧಿಕಾರಿಗಳೂ ಇತ್ತ ಗಮನಹರಿಸಿಲ್ಲ! ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಮಳೆಗಾಗಿ ಕಾಯುತ್ತಾ...

ಉಗಾರ ಬ್ಯಾರೇಜ್‌ನಲ್ಲಿ ಸಂಗ್ರಹಿಸಿದ್ದ ಅಲ್ಪ ಪ್ರಮಾಣದ ನೀರನ್ನು ಸಂಘಟನೆಗಳ ಹೋರಾಟಕ್ಕೆ ಮಣಿದು ಬಿಡುಗಡೆ ಮಾಡಲಾಗಿದೆ. ಅಲ್ಲಿಂದ ದೊರೆತಿರುವುದು 1100 ಕ್ಯುಸೆಕ್‌ ನೀರು ಮಾತ್ರ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಪರಿಣಾಮ, ತಾಲ್ಲೂಕಿನ ಜನರು ಆಕಾಶ ನೋಡುತ್ತಾ ಮಳೆಗಾಗಿ ಕಾಯುತ್ತಿದ್ದಾರೆ.

ಈಗ ದೊರೆತಿರುವ ನೀರು ಐನಾಪುರ, ಮದಬಾವಿ ಬಹುಗ್ರಾಮಗಳ ಯೋಜನೆಯ 26 ಗ್ರಾಮಗಳಿಗೆ 15 ದಿನಗಳಿಗೆ ಮಾತ್ರ ಸಾಕಾಗಲಿದೆ ಎಂದು ಅಂದಾಜಿಸಲಾಗಿದೆ.

ನೀರಿನ ಕೊರತೆ ಪರಿಣಾಮ ಟ್ಯಾಂಕರ್‌ಗಳ ಬೆಲೆ ದುಬಾರಿಯಾಗಿದೆ. ಹೋದ ವರ್ಷ ₹ 600 ಇದ್ದ ಟ್ಯಾಂಕರ್‌ ನೀರಿನ ದರ, ಈ ವರ್ಷಕ್ಕೆ ₹ 1200ಕ್ಕೆ ಹೆಚ್ಚಾಗಿದೆ!

‘ಬೇಸಿಗೆ ಸಂದರ್ಭದಲ್ಲಿ ಪ್ರತಿ ವರ್ಷವೂ ನೀರಿಗಾಗಿ ಹೋರಾಟ ಮಾಡುವಂತಾಗಿದೆ. ಸಂಬಂಧಿಸಿದವರು ತಾವಾಗಿಯೇ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಈಗ ಕೃಷ್ಣಾ
ನದಿಯಲ್ಲಿ ಲಭ್ಯವಿರುವ ಅಲ್ಪ ಪ್ರಮಾಣದ ನೀರು ಜನರು–ಜಾನುವಾರುಗಳಿಗೆ ಬೇಸಿಗೆ ಮುಗಿಯುವವರೆಗೂ ಸಾಕಾಗು
ತ್ತದೆ ಎಂಬ ವಿಶ್ವಾಸವಿಲ್ಲ’ ಎಂದು ಕರವೇ ಮುಖಂಡ ಅಣ್ಣಾಸಾಬ ತೆಲಸಂಗ ಪ್ರತಿಕ್ರಿಯಿಸಿದರು.

ಜಿಲ್ಲಾಡಳಿತ ಕ್ರಮ ವಹಿಸಲಿಲ್ಲ: ‘ವಾಡಿಕೆಯಂತೆ ಮಳೆಯಾದರೆ ಸಮಸ್ಯೆ ನಿವಾರಣೆಯಾಗಬಹುದು. ಜನರಿಗೆ ನದಿ ನೀರು ಲಭ್ಯವಾಗುತ್ತಿಲ್ಲ. ಕೊಳವೆಬಾವಿಗಳ ಮೊರೆ ಹೋಗಿದ್ದಾರೆ. ನಮ್ಮ ಹೋರಾಟದಿಂದ ಅಲ್ಪ ಪ್ರಮಾಣದ ನೀರು ಬಂದಿದೆ. ಅದು ಸಾಲುವುದಿಲ್ಲ. ಆದಷ್ಟು ಬೇಗ ರಾಜಾಪುರ ಬ್ಯಾರೇಜ್‌ನಿಂದ ನೀರು ಬಿಡುಗಡೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡ ಮಾಹಾದೇವ ಮಡಿವಾಳ ಒತ್ತಾಯಿಸಿದ್ದಾರೆ.

‘ಚುನಾವಣೆ ಕರ್ತವ್ಯದಲ್ಲಿ ಮುಳುಗಿದ್ದ ಜಿಲ್ಲಾಡಳಿತ, ಜನಸಾಮಾನ್ಯರ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳ
ಲಿಲ್ಲ. ತಾಲ್ಲೂಕಿನಲ್ಲಿ ಉಂಟಾಗುವ ನೀರಿನ ಕೊರತೆಯ ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸಿದ್ದರೆ, ಈಗ ತೊಂದರೆ ಆಗುತ್ತಿರಲಿಲ್ಲ’ ಎಂದು ಮುಖಂಡ ಜೆ. ಭಾಮನೆ ದೂರಿದರು.

**
ಉಗಾರದಿಂದ 1,100 ಕ್ಯುಸೆಕ್‌ ನೀರು ಬಿಡುಗಡೆ ಮಾಡಿಸಲಾಗಿದೆ. ಇದು ಈ ತಿಂಗಳಿಗೆ ಸಾಕಾಗುವ ಭರವಸೆ ಇದೆ. ಜೂನ್‌ನಿಂದ ನೀರು ಲಭ್ಯವಾಗಲಿದೆ
ಅರುಣ ಯಲಿಗುದ್ರಿ, ಜಲಸಂಪನ್ಮೂಲ ಇಲಾಖೆ ಸಹಾಯಕ ಎಂಜಿನಿಯರ್‌ 

ಪರಶುರಾಮ ನಂದೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT