ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯವಾಗಿರಿ: ಸಚಿವ ಬಿ.ಸಿ.ಪಾಟೀಲ್

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ ರೈತರ ಹಿತ ಕಾಯುವ ಭರವಸೆ ನೀಡಿದ ಕೃಷಿ ಸಚಿವ
Last Updated 14 ಏಪ್ರಿಲ್ 2020, 14:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಲಾಕ್‌ಡೌನ್‌ನಿಂದಾಗಿ ರೈತರಿಗೆ ಆಗುತ್ತಿರುವ ಕಷ್ಟ ಸರ್ಕಾರದ ಗಮನದಲ್ಲಿದೆ. ಆದ್ದರಿಂದ, ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯವಾಗಿರಬೇಕು. ಸರ್ಕಾರ ನಿಮ್ಮ ಜತೆಗಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅಧಿಕಾರಿಗಳಿಂದ ಲಾಕ್‌ಡೌನ್‌ನಿಂದಾಗಿ ಜಿಲ್ಲೆಯ ಕೃಷಿ ಕ್ಷೇತ್ರದ ಮೇಲಾಗಿರುವ ಪರಿಣಾಮ ಕುರಿತು ಮಾಹಿತಿ ಪಡೆದ ಸಚಿವರು, ಸಭೆಯಲ್ಲಿದ್ದ ರೈತ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

‘ಲಾಕ್‌ಡೌನ್‌ನಿಂದ ರೈತರಿಗೆ ಹೆಚ್ಚಿನ ಹೊಡೆತ ಬಿದ್ದಿದೆ. ಹಾಗೆಂದು ರೈತ ಕೃಷಿ ಚಟುವಟಿಕೆಯಿಂದ ವಿಮುಖನಾದರೆ ನಮಗೆ ಮೂರು ತಿಂಗಳು ಕಳೆದರೆ ತಿನ್ನಲು ಆಹಾರ ಸಿಗದಂತಾಗುತ್ತದೆ. ಆದ್ದರಿಂದ ಕೃಷಿ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು ಎಂಬುದು ಸರ್ಕಾರದ ಚಿಂತನೆ’ ಎಂದು ತಿಳಿಸಿದರು.

‘ನಾನು ರೈತರಿಗೆ ಆತ್ಮಸ್ಥೈರ್ಯ ತುಂಬಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿರುವೆ. ಲಾಕ್‌ಡೌನ್ ನಂತರ ತೊಂದರೆ ಸಿಲುಕಿಕೊಂಡಿರುವ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ. ರೈತರು ಆತ್ಮಸೈರ್ಯ ಕಳೆದುಕೊಳ್ಳದೆ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಬೇಕು’ ಎಂದರು.

‘ಜಿಲ್ಲೆಯಲ್ಲಿ ತರಕಾರಿ, ಹಣ್ಣುಗಳು, ಹೂವುಗಳಿಗೆ ಸರಿಯಾದ ಬೆಲೆ ಸಿಗದೆ ಬೆಳೆಗಾರರು ತೊಂದರೆ ಸಿಲುಕಿಕೊಂಡಿದ್ದಾರೆ. ಬೆಂಬಲ ಬೆಲೆಗಾಗಿ ಒತ್ತಾಯ ಮಾಡಿದ್ದಾರೆ. ಲಾಕ್‌ಡೌನ್‌ನಿಂದ ನಾಶವಾಗಿರುವ ಬೆಳೆ ಸಮೀಕ್ಷೆ ಮಾಡಿ, ರೈತರಿಗೆ ಅನುಕೂಲ ಮಾಡಿಕೊಡುತ್ತೇವೆ’ ಎಂದು ಹೇಳಿದರು.

‘ಕಳಪೆ ಗೊಬ್ಬರ, ಬೀಜ ಮಾರಾಟ ಮಾಡುವುದು ತಡೆಯುವ ನಿಟ್ಟಿನಲ್ಲಿ ಕ್ರಮಕೈಗೊಂಡಿದ್ದೇವೆ. ಚಿಕ್ಕಬಳ್ಳಾಪುರದಲ್ಲಿ ನಕಲಿ ಕೀಟನಾಶಕ, ಔಷಧಿ ಮಾರುತ್ತಿದ್ದ ಮಳಿಗೆಯೊಂದರಲ್ಲಿ ಸುಮಾರು ₹20 ಲಕ್ಷ ಮೌಲ್ಯದ ದಾಸ್ತಾನು ಜಪ್ತಿ ಮಾಡಲಾಗಿದೆ. ನಮ್ಮ ವಿಚಕ್ಷಣಾ ತಂಡಗಳು ಮತ್ತು ಇಲಾಖೆ ಅಧಿಕಾರಿಗಳಿಗೆ ಗೊಬ್ಬರ, ಬೀಜದ ಮಳಿಗೆಗಳನ್ನು ಪರಿಶೀಲನೆ ಮಾಡುವಂತೆ ಸೂಚನೆ ನೀಡಿದ್ದೇನೆ’ ಎಂದರು.

‘ನಾವು ಮುಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಿರುವ ಕಾರಣಕ್ಕೆ ರೈತರಿಂದ ಸರ್ಕಾರ ಕೃಷಿ, ತೋಟಗಾರಿಕೆ ಉತ್ಪನ್ನಗಳನ್ನು ಖರೀದಿಸುವ ಪ್ರಶ್ನೆಯೇ ಬರುವುದಿಲ್ಲ. ಸರ್ಕಾರ ಈಗಾಗಲೇ ರೈತರಿಗೆ ಅಡಚಣೆ ಉಂಟು ಮಾಡುವ ಎಲ್ಲ ನಿರ್ಬಂಧಗಳನ್ನು ಸಡಿಲಿಸಿದೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ’ಮಹಾರಾಷ್ಟ್ರ ಸರ್ಕಾರವು ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಜಮ್ಮುಕಾಶ್ಮೀರ ಸರ್ಕಾರದ ಜತೆಗೆ ಮಾತುಕತೆ ನಡೆಸಿದೆ. ನಾನು ಈಗಾಗಲೇ ಮಹಾರಾಷ್ಟ್ರ ಸರ್ಕಾರದ ಅಧಿಕಾರಿಗಳ ಜತೆಗೆ ಮಾತನಾಡಿರುವೆ. ಅವರು ದ್ರಾಕ್ಷಿಯನ್ನು 10 ಕೆ.ಜಿ ಬಾಕ್ಸ್‌ಗಳಲ್ಲಿ ಪ್ಯಾಕ್‌ ಮಾಡಿ ಕಳುಹಿಸಿದರೆ ಮಾರುಕಟ್ಟೆ ಕಲ್ಪಿಸುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲಿಯೇ ಜಿಲ್ಲೆಯಿಂದ ದ್ರಾಕ್ಷಿ ಪೂರೈಕೆ ಆರಂಭವಾಗುತ್ತದೆ‘ ಎಂದು ಹೇಳಿದರು.

ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮಾತನಾಡಿ, ’ಬಾಗೇಪಲ್ಲಿ ತಾಲ್ಲೂಕಿನಲ್ಲಿ ಶೇ 50 ರಷ್ಟು ಕೃಷಿ ಇಲಾಖೆ ಸಿಬ್ಬಂದಿ ಕೊರತೆ ಇದೆ ಇದನ್ನು ಕೂಡಲೇ ಭರ್ತಿ ಮಾಡಲು ಕ್ರಮ ವಹಿಸಬೇಕು‘ ಎಂದರು.

ಶಾಸಕ ಎಂ.ಕೃಷ್ಣಾರೆಡ್ಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ರೈತ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT