ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರ್ಣೋದ್ಧಾರಗೊಂಡ ನೆಲ್ಲಿಕಾಯಿ ಬಸವಣ್ಣನ ಮಂಟಪ

Last Updated 26 ಆಗಸ್ಟ್ 2019, 16:29 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಶಿಥಿಲಾವಸ್ಥೆಯಲ್ಲಿದ್ದ ನಂದಿಬೆಟ್ಟದ ಮೇಲಿನ ಚೋಳರ ಕಾಲದ ಕಲಾತ್ಮಕವಾದ ನೆಲ್ಲಿಕಾಯಿ ಬಸವಣ್ಣನ ಮಂಟಪವನ್ನು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಆಸಕ್ತಿ ವಹಿಸಿ ಹಳೆಯ ಶೈಲಿಯಲ್ಲಿಯೇ ಇರುವಂತೆ ಜೀರ್ಣೋದ್ಧಾರ ಮಾಡಿಸಿದ್ದಾರೆ. ಈಚೆಗೆ ಜೀರ್ಣೋದ್ಧಾರಗೊಂಡಿರುವ ನೆಲ್ಲಿಕಾಯಿ ಬಸವಣ್ಣನ ಮಂಟಪವನ್ನು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಉದ್ಘಾಟಿಸಿದರು.

ನಂದಿಬೆಟ್ಟದ ಮೇಲೆ ಈಶಾನ್ಯದಿಕ್ಕಿನಲ್ಲಿ ಮಾರ್ಕ್ ಕಬ್ಬನ್ ಅವರ ಕಾರ್ಯದರ್ಶಿಯಾಗಿದ್ದ ಕನ್ನಿಂಗ್ ಹ್ಯಾಮ್ ನಿರ್ಮಿಸಿದ್ದ ಓಕ್ಲಾಂಡ್ ಭವನವನ್ನು ಈಗ ಗಾಂಧಿ ನಿಲಯ ಎನ್ನುತ್ತಾರೆ. ಇದರ 50 ಗಜ ಪೂರ್ವಕ್ಕೆ ಹೋದರೆ ಪಾಲಾರ್ ನದಿ ಮೂಲವಿದೆ. ಇಲ್ಲಿಂದ 100 ಗಜ ಈಶಾನ್ಯಕ್ಕೆ ಹೋದರೆ ದೊಡ್ಡ ಬಂಡೆಗಳ ನಡುವೆಯೊಂದು ಗವಿಯಿದೆ. ಗಂಗರ ಕಾಲದಲ್ಲಿ ಜೈನ ಮುನಿಗಳಿಲ್ಲಿ ವಾಸಿಸುತ್ತಿದ್ದರಂತೆ.

ಈ ಗವಿಯ ಪಕ್ಕದಲ್ಲಿಯೇ ಭೋಗನಂದೀಶ್ವರ ದೇವಾಲಯದಲ್ಲಿನ ಕಲಾತ್ಮಕ ಗುಂಡನೆಯ ಆಕಾರದ ಕಂಬಗಳನ್ನು ಹೋಲುವ ಕಂಬಗಳಿರುವ ಮಂಟಪವಿದೆ. ಈ ಮಂಟಪದ ಅಡಿಯಲ್ಲಿ ಹತ್ತು ಅಡಿ ಉದ್ದ ಆರು ಅಡಿ ಎತ್ತರದ ಬಸವಣ್ಣನ ಕಲ್ಲಿನ ಮೂರ್ತಿಯಿದೆ. ಭೋಗನಂದೀಶ್ವರ ದೇವಾಲಯದಲ್ಲಿನ ಚೋಳರ ಕಾಲದ ಬಸವಣ್ಣನ ಮೂರ್ತಿಯನ್ನೇ ಇದು ಹೋಲುತ್ತದೆ. ಹಿಂದೆ ಇಲ್ಲಿದ್ದ ನೆಲ್ಲಿಕಾಯಿ ಮರದಿಂದಾಗಿ ಇದಕ್ಕೆ ನೆಲ್ಲಿಕಾಯಿ ಬಸವಣ್ಣ ಎಂಬ ಹೆಸರು ಬಂದಿರಬಹುದೆಂದು ಹಳಬರು ಹೇಳುತ್ತಾರೆ. ವಿಜಯನಗರದ ಕಾಲದ ಹಂಪೆಯ ಕಡಲೆಹಾಳು ಗಣೇಶ ಅಥವಾ ಸಾಸಿವೆಕಾಳು ಗಣೇಶ ಎಂಬ ಹೆಸರು ಬಂದಿರುವಂತೆ ಇದರ ಬೃಹತ್ ಗಾತ್ರದಿಂದ ನೆಲ್ಲಿಕಾಯಿ ಬಸವಣ್ಣ ಎಂಬ ಹೆಸರು ಬಂದಿರಬಹುದು ಎಂದು ಕೆಲವರು ಹೇಳುತ್ತಾರೆ.

‘ಈ ಕಂಬಗಳ ರಚನೆ ಹಾಗೂ ಬಸವಣ್ಣ ಮೂರ್ತಿಯನ್ನು ನೋಡಿದಾಗ ಇದು ಎಂಟರಿಂದ ಹತ್ತನೇ ಶತಮಾನದ ಚೋಳರ ಕಾಲಕ್ಕೆ ಸೇರಿದ್ದಿರಬಹುದೆಂದು ನಿರ್ಧರಿಸಬಹುದು. ಕಾಲಾನುಕ್ರಮದಲ್ಲಿ ಜನರು ಬೆಣ್ಣೆ ಹಚ್ಚಿ ಹಾಗೇ ಬಿಟ್ಟಿದ್ದರಿಂದ ಕೆಟ್ಟ ವಾಸನೆ ಬರುತ್ತಿತ್ತು. ತಳಪಾಯ ಇಳಿದಿದ್ದರಿಂದಾಗಿ ಚಾವಣಿಯ ತೊಲೆಗಳು ಮುರಿದಿದ್ದವು ಮತ್ತು ಸೋರುತ್ತಿತ್ತು. ಎರಡು ತಿಂಗಳ ಹಿಂದೆ ನಂದಿಬೆಟ್ಟಕೆ ಹೋಗಿದ್ದಾಗ ಈ ಮಂಟಪ ಮತ್ತು ಬಸವಣ್ಣನ ಮೂರ್ತಿಯನ್ನು ನೋಡಿ ಬೇಸರವಾಯಿತು. ವಿಡಿಯೊ ಮಾಡಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟೆ. ಅವರು ಇದನ್ನು ಮೂಲರೂಪಕ್ಕೆ ಧಕ್ಕೆಯಾಗದ ಹಾಗೆ ಈ ಮಂಟಪವನ್ನು ಜೀರ್ಣೋದ್ಧಾರ ಮಾಡಬೇಕು ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರು ಆಸಕ್ತಿ ವಹಿಸಿ ನನಗೆ ಜವಾಬ್ದಾರಿ ವಹಿಸಿದ್ದರು.

ಚಾವಣಿ, ಕಂಬಗಳನ್ನು ಬಿಚ್ಚಿ, ಹಳೆಯ ಕಲ್ಲಿನ ತೊಲೆಗಳನ್ನು, ಕಂಬಗಳನ್ನು, ಬಸವಣ್ಣನ ಮೂರ್ತಿಯನ್ನು ವೈಜ್ಞಾನಿಕ ಪದ್ಧತಿಯಲ್ಲಿ ಶುಚಿಗೊಳಿಸಿದೆವು. ಮುರಿದಿದ್ದ ತೊಲೆಯ ಒಳಗೆ ಕಬ್ಬಿಣದ ಸಲಾಕೆಯನ್ನಿರಿಸಿ ಸಿಮೆಂಟ್ ಕಾಂಕ್ರೀಟ್ ಮೂಲಕ ಗಟ್ಟಿಗೊಳಿಸಿದೆವು. ಛಾವಣಿಯಲ್ಲಿ ಕಲ್ಲಿನ ಚಪ್ಪಡಿಗಳನ್ನು ಜೋಡಿಸಿ ಗಚ್ಚುಗಾರೆಯನ್ನು ಹಾಕಿ 21 ದಿನ ನೆನಸಿ ಗಟ್ಟಿಗೊಳಿಸಿದೆವು. ನೆಲ ಹಾಗೂ ಚಾವಣಿ ಎರಡನ್ನೂ ಎಲ್ಲ ಹಳೆಯ ಕಲ್ಲುಗಳನ್ನು ಇರಿಸಿಕೊಂಡೇ ಮತ್ತೆ ಜೋಡಣೆ ಮಾಡಿದ್ದೇವೆ. ಕೇವಲ ಎರಡು ತಿಂಗಳೊಳಗೆ ಈ ಎಲ್ಲ ಕೆಲಸಗಳೂ ಪೂರ್ಣಗೊಂಡವು. ಬೆಟ್ಟದ ಮೇಲೆ ಮಂಜು, ಮಳೆ ಮತ್ತು ಗಾಳಿ ಹೆಚ್ಚಾಗಿರುವುದರಿಂದ ಶಿಲೀಂದ್ರ ಹಾಗೂ ಕಲ್ಲು ಹೂಗಳು ಕಲ್ಲುಗಳ ಮೇಲೆ ಬೆಳೆಯುತ್ತವೆ. ಅದಕ್ಕೆ ರಾಸಾಯನಿಕವನ್ನು ಬಳಿಯಲಿದ್ದೇವೆ’ ಎಂದು ಭಾರತೀಯ ಪುರಾತತ್ವ ಇಲಾಖೆಯ ದಕ್ಷಿಣ ಭಾರತದ ನಿವೃತ್ತ ಪ್ರಾದೇಶಿಕ ನಿರ್ದೇಶಕ ಡಾ.ಎಸ್.ವಿ.ವೆಂಕಟೇಶಯ್ಯ ವಿವರಿಸಿದರು.

‘ಹಳೆಯ ಶಿಲ್ಪಕಲೆಗಳು ನಮ್ಮ ಪರಂಪರೆಯ ಪ್ರತಿನಿಧಿಗಳು. ಅವುಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕು. ನಂದಿಬೆಟ್ಟದ ಮೇಲಿನ ನೆಲ್ಲಿಕಾಯಿ ಬಸವಣ್ಣ ಮಂಟಪ ಶಿಥಿಲವಾಗಿದ್ದನ್ನು ಡಾ.ಎಸ್.ವಿ.ವೆಂಕಟೇಶಯ್ಯ ಅವರು ನಮ್ಮ ಗಮನಕ್ಕೆ ತಂದರು. ಅವರನ್ನು ಜಿಲ್ಲೆಯ ಸಾಂಸ್ಕೃತಿಕ ಸಲಹೆಗಾರರನ್ನಾಗಿ ಮಾಡಿ ಈ ರೀತಿಯ ಪುರಾತನ ಶಿಲ್ಪಕಲೆಯ ತಾಣಗಳಗಳ ಜೀರ್ಣೋದ್ಧಾರ ಕಾರ್ಯವನ್ನು ಪ್ರಾರಂಭಿಸಿದ್ದೇವೆ’ ಎಂದು ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT