ಬಿಜೆಪಿ ಆಡಳಿತದಲ್ಲಿ ಹಕ್ಕುಗಳ ಧಮನ: ಮುನಿಆಂಜಿನಪ್ಪ

7
ಪ್ರಜಾ ವಿಮೋಚನ ಚಳವಳಿ ಸಮಿತಿ ಪದಾಧಿಕಾರಿಗಳ ಸಮಾವೇಶದಲ್ಲಿ ರಾಜ್ಯ ಘಟಕದ ಅಧ್ಯಕ್ಷ ಆರೋಪ

ಬಿಜೆಪಿ ಆಡಳಿತದಲ್ಲಿ ಹಕ್ಕುಗಳ ಧಮನ: ಮುನಿಆಂಜಿನಪ್ಪ

Published:
Updated:

ಚಿಕ್ಕಬಳ್ಳಾಪುರ: ‘ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಾಮಾಜಿಕ ಹೋರಾಟಗಾರರ, ಪ್ರಗತಿಪರ ಚಿಂತಕರ ಹಾಗೂ ಲೇಖಕರ ಮೇಲೆ ದಾಳಿ ಪ್ರಕರಣಗಳು ಹೆಚ್ಚಾಗಿವೆ. ಬಿಜೆಪಿ ಸರ್ಕಾರ ಸಂವಿಧಾನ ಬದ್ಧವಾದ ಜನರ ಹಕ್ಕುಗಳನ್ನು ದಮನ ಮಾಡಲು ಹೊರಟಿದೆ’ ಎಂದು ಪ್ರಜಾ ವಿಮೋಚನ ಚಳವಳಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಮುನಿಆಂಜಿನಪ್ಪ ಆರೋಪಿಸಿದರು.

ನಗರದಲ್ಲಿ ಇತ್ತೀಚೆಗೆ ನಡೆದ ಪ್ರಜಾ ವಿಮೋಚನ ಚಳವಳಿ ಸಮಿತಿ ಪದಾಧಿಕಾರಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಮನುವಾದಿ ಸಂಸ್ಕೃತಿ ಪಾಲಿಸುವ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಮೂಲಕ ಬಿಜೆಪಿಯವರು ಅಂಬೇಡ್ಕರ್ ಬರೆದಿರುವ ಸಂವಿಧಾನಕ್ಕೆ ಅವಮಾನ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇತ್ತೀಚೆಗೆ ದೇಶದ ಉದ್ದಗಲಕ್ಕೂ ಸಾಮಾಜಿಕ ಹೋರಾಟಗಾರರು, ಜನಪರ ಚಳುವಳಿಯಲ್ಲಿ ತೊಡಗಿಸಿಕೊಂಡಿರುವ ನಾಯಕರನ್ನು ಬಂಧಿಸಲಾಗುತ್ತಿದೆ. ಇದು ಮೋದಿ ಅವರ ಸರ್ವಾಧಿಕಾರಿ ಧೋರಣೆ ತೋರಿಸುತ್ತದೆ. ದೇಶದಲ್ಲಿ ಪ್ರಸ್ತುತ ಸನ್ನಿವೇಶಗಳನ್ನು ಗಮನಿಸಿದರೆ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿರುವಂತೆ ಭಾಸವಾಗುತ್ತಿದೆ’ ಎಂದು ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆದರೂ ಇಂದಿಗೂ ಶೋಷಿತ ತಳ ಸಮುದಾಯಗಳು ಸಂವಿಧಾನ ಬದ್ದ ಹಕ್ಕುಗಳಿಂದ ವಂಚಿತವಾಗಿವೆ. ಸಮಾಜದಲ್ಲಿರುವ ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬುದು ನಮ್ಮ ಚಳವಳಿಯ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ರಾಜ್ಯದಾದ್ಯಂತ ಶೋಷಿತರು ದಮನಿತರನ್ನು ಒಗ್ಗೂಡಿಸಿ ಹೋರಾಟ ರೂಪಿಸಲಾಗುತ್ತದೆ’ ಎಂದು ತಿಳಿಸಿದರು.

ಪ್ರಜಾ ವಿಮೋಚನ ಚಳವಳಿ ಜಿಲ್ಲಾ ಘಟಕದ ಅಧ್ಯಕ್ಷ ಗುಡಿಬಂಡೆ ಗಂಗರಾಜು ಮಾತನಾಡಿ, ‘ಜಿಲ್ಲೆಯಲ್ಲಿ ದಲಿತ, ಹಿಂದುಳಿದ ಹಾಗು ಅಲ್ಪಸಂಖ್ಯಾತರ ಪರಿಸ್ಥಿತಿ ಶೋಚನೀಯವಾಗಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ದಲಿತರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳು ಸಮರ್ಪಕವಾಗಿ ಮಾಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆದೂರು ಪ್ರಕಾಶ್, ವಿಭಾಗೀಯ ಶಾಖೆ ಅಧ್ಯಕ್ಷ ಮುನಿಕೃಷ್ಣಪ್ಪ, ಬೆಂಗಳೂರು ನಗರ ಘಟಕದ ಅಧ್ಯಕ್ಷ ಅಯೂಬ್‍ಖಾನ್, ಚಿಕ್ಕಬಳ್ಳಾಪುರ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ್, ಕಾರ್ಯದರ್ಶಿ ನವೀನ್ ಕುಮಾರ್, ಮುಖಂಡರಾದ ಗುಡಿಬಂಡೆ ಸೌಭಾಗ್ಯಮ್ಮ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !