ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬಿಜೆಪಿಯಲ್ಲಿ ನಾಮನಿರ್ದೇಶನಕ್ಕೆ ಮೀನಾಮೇಷ

ನಗರ ಯೋಜನಾ ಪ್ರಾಧಿಕಾರಗಳ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಕಾರ್ಯಕರ್ತರು, ಮುಖಂಡರಲ್ಲಿ ಬೇಸರ
Last Updated 17 ಮಾರ್ಚ್ 2021, 3:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ಡಾ.ಕೆ. ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಒಂದು ವರ್ಷ ದಾಟಿದೆ‌. ಆದರೆ, ಜಿಲ್ಲೆಯ ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರಗಳಿಗೆ ಅಧ್ಯಕ್ಷರಾಗುವ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮನಿರ್ದೇಶನದ ಆಸೆ ಹೊಂದಿರುವ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮಾತ್ರ ಇಂದಿಗೂ ಅಧಿಕಾರ
ದೊರೆಯುವ ನಿರೀಕ್ಷೆಯಲ್ಲಿಯೇ ದಿನ ದೂಡುತ್ತಿದ್ದಾರೆ.

ನಗರ ಸ್ಥಳೀಯ ಸಂಸ್ಥೆಗಳು, ಭೂ ನ್ಯಾಯ ಮಂಡಳಿ, ಭೂ ಮಂಜೂರಾತಿ ಸಮಿತಿಗೆ ತನ್ನ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಕಾರ್ಯಕರ್ತರು, ಮುಖಂಡರಿಗೆ ಅಧಿಕಾರ ನೀಡುವ ಅವಕಾಶಗಳು ಬಿಜೆಪಿಗೆ ಇವೆ. ಹೀಗಿದ್ದರೂ ಜಿಲ್ಲೆಯಲ್ಲಿ ನಾಮನಿರ್ದೇಶನವಾಗಿಲ್ಲ.

ಅಧಿಕಾರ ಭಾಗ್ಯ ದೊರೆಯದಿರುವುದು ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ಮತ್ತು ಮುಖಂಡರಲ್ಲಿ ಬೇಸರ, ಅಸಮಾಧಾನ ಮೂಡಿಸಿದೆ. ಆದರೆ, ‘ಶಿಸ್ತಿನ ತೂಗುಕತ್ತಿ’ ಕಾರಣದಿಂದ ಇದನ್ನು ಬಹಿರಂಗವಾಗಿ ಹೇಳಿಕೊಳ್ಳುವಂತೆಯೂ ಇಲ್ಲ.

ಈ ನಾಮನಿರ್ದೇಶನ ಮತ್ತು ನೇಮಕಕ್ಕೆ ಆಯಾ ತಾಲ್ಲೂಕು ಬಿಜೆಪಿ ಘಟಕಗಳ ಅನುಮೋದನೆ ಅಗತ್ಯ. ಈಗಾಗಲೇ ತಾಲ್ಲೂಕು ಮತ್ತು ಜಿಲ್ಲಾ ಘಟಕವು ಆಯಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಮನಿರ್ದೇಶನ ಮಾಡುವ ಸಂಬಂಧ ಕಾರ್ಯಕರ್ತರು ಮತ್ತು ಮುಖಂಡರ ಪಟ್ಟಿ ಸಿದ್ಧಗೊಳಿಸಿ ಅದನ್ನು ವಿಭಾಗೀಯ ಮಟ್ಟಕ್ಕೂ ಕಳುಹಿಸಿದೆ. ಇಲ್ಲಿಂದ ಈ ಪಟ್ಟಿ ಸಚಿವ ಸುಧಾಕರ್ ಕೈ ಸೇರಿದೆ ಎನ್ನುತ್ತವೆ ಬಿಜೆಪಿ ಮೂಲಗಳು.

ಚಿಕ್ಕಬಳ್ಳಾಪುರ, ಚಿಂತಾಮಣಿ, ಶಿಡ್ಲಘಟ್ಟ, ಗೌರಿಬಿದನೂರು, ಬಾಗೇಪಲ್ಲಿ ನಗರ, ಪಟ್ಟಣ ಅಭಿವೃದ್ಧಿ ಯೋಜನಾ ಪ್ರಾಧಿಕಾರಗಳಿಗೆ ಅಧ್ಯಕ್ಷರು ನೇಮಕವಾಗಿಲ್ಲ. ಈ ಪ್ರಾಧಿಕಾರಗಳಿಗೆ ಅಧ್ಯಕ್ಷರ ಜತೆ ಮೂವರು ಅಧಿಕಾರೇತರ ಸದಸ್ಯರನ್ನೂ ನೇಮಕ ಮಾಡುವ ಅವಕಾಶವಿದೆ. ಜತೆಗೆ ನಗರಸಭೆಗೆ ಐದು ಮತ್ತು ‍ಪುರಸಭೆಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡಲು ಅವಕಾಶವಿದೆ.

ಈ ಎಲ್ಲ ಆಯ್ಕೆಗಳಿಗೂ ಬಿಜೆಪಿಯ ಸ್ಥಳೀಯ, ಜಿಲ್ಲಾ ಘಟಕದ ಮುದ್ರೆ ಅಗತ್ಯ. ಸ್ಥಳೀಯ ಹಂತದಲ್ಲಿ ಹೆಸರುಗಳನ್ನು ಅಂತಿಮಗೊಳಿಸಿ ಆಗಿದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ನೇಮಕಕ್ಕೆ ಮನಸ್ಸು ಮಾಡಿಲ್ಲ.

‘ಕೋವಿಡ್ ಪೂರ್ವದಲ್ಲಿಯೇ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆಗೆ ಅನುಮೋದನೆ ಪಡೆಯಲಾಗಿದೆ. ಅರ್ಹರ ಹೆಸರನ್ನು ಶಿಫಾರಸು ಮಾಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕೈಗೆ ಈ ಪಟ್ಟಿ ಸೇರಿದೆ. ವಿವಾದಾತೀತವಾದ ಮತ್ತು ಪಕ್ಷಕ್ಕೆದುಡಿದವರನ್ನೇ ಶಿಫಾರಸು ಮಾಡಲಾಗಿದೆ. ಆದರೆ ಯಾವುದೇ ಪ್ರಕ್ರಿಯೆಗಳು ನಡೆಯುತ್ತಿಲ್ಲ’ ಎಂದು ತಾಲ್ಲೂಕು ಮಟ್ಟದ ಬಿಜೆಪಿ ಮುಖಂಡರೊಬ್ಬರು ತಿಳಿಸುವರು.

‘ಪಿಎಲ್‌ಡಿ ಬ್ಯಾಂಕ್, ಎಪಿಎಂಸಿ ಸೇರಿದಂತೆ ಮತ ಚಲಾವಣೆಯ ಹಕ್ಕು ಹೊಂದಿರುವ ಕಡೆಗಳಲ್ಲಿ ಈಗಾಗಲೇ ನೇಮಕವಾಗಿದೆ. ಆಸ್ಪತ್ರೆ ಸಂದರ್ಶಕ ಸಮಿತಿ, ಯೋಜನಾ ಪ್ರಾಧಿಕಾರಗಳು, ನಗರಸಭೆ, ಪುರಸಭೆಯಲ್ಲಿ ನಾಮನಿರ್ದೇಶನವಾಗಿಲ್ಲ. ಒಂದೊಂದು ತಾಲ್ಲೂಕಿನಲ್ಲಿ ಕನಿಷ್ಠ 30ರಿಂದ 40 ಕಾರ್ಯಕರ್ತರಿಗೆ ಅಧಿಕಾರವನ್ನು ಕೊಡಿಸಬಹುದು. ಅವಕಾಶ ಸಿಕ್ಕದೆ ಕಾರ್ಯಕರ್ತರು ಆಕಾಶ ಭೂಮಿ ನೋಡುತ್ತಿದ್ದಾರೆ’ ಎಂದರು.

‘ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಕೆಲವೇ ದಿನಗಳಲ್ಲಿ ಘೋಷಣೆಯಾಗಲಿದೆ. ಕಾರ್ಯಕರ್ತರು ಮತ್ತು ಮುಖಂಡರಿಗೆ ಅಧಿಕಾರ ನೀಡಿದರೆ ಅವರು ಕೆಲಸ ಮಾಡಲು ಮತ್ತಷ್ಟು ಹುಮ್ಮಸ್ಸು ಮೂಡುತ್ತದೆ. ಪಕ್ಷಕ್ಕೂ ಅನುಕೂಲವಾಗುತ್ತದೆ’ ಎನ್ನುವರು ಕಾರ್ಯಕರ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT