ಸಾಲ ಮನ್ನಾ ವಿಚಾರ: ರೈತ ಸಂಘದ ಪದಾಧಿಕಾರಿಗಳ ಮೌನ ಪ್ರತಿಭಟನೆ

7

ಸಾಲ ಮನ್ನಾ ವಿಚಾರ: ರೈತ ಸಂಘದ ಪದಾಧಿಕಾರಿಗಳ ಮೌನ ಪ್ರತಿಭಟನೆ

Published:
Updated:
Deccan Herald

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪ್ರಣಾಳಿಕೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಾಲ ಸಂಪೂರ್ಣ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ತಾವು ಈ ಹಿಂದೆ ಕೊಟ್ಟ ಮಾತು ತಪ್ಪಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ರೈತಸಂಘದ ಪದಾಧಿಕಾರಿಗಳು ಬುಧವಾರ ನಗರದಲ್ಲಿ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿ, ಮೌನ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಸಂಚಾರ ಪೊಲೀಸ್ ಠಾಣೆ ಚೌಕಿ ಮುಂದೆ ಮಹಾತ್ಮಾ ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಧರಣಿ ಕುಳಿತ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಲಕ್ಷ್ಮೀನಾರಾಯಣರೆಡ್ಡಿ, ‘ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಣಾಳಿಕೆಯಲ್ಲಿ ಹೇಳಿದಂತೆ ಮತ್ತು ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ರೈತ ಮುಖಂಡರಿಗೆ ಭರವಸೆ ನೀಡಿದಂತೆ ಮೊದಲ ಹಂತದಲ್ಲಿ ರೈತರ ಎಲ್ಲಾ ಬೆಳೆ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಿ ರೈತರ ಋಣ ತೀರಿಸಬೇಕು’ ಎಂದು ಆಗ್ರಹಿಸಿದರು.

‘ರೈತರು ಕೃಷಿ ಅಭಿವೃದ್ಧಿಗೆ ಮತ್ತು ಪರಿಕರಗಳನ್ನು ಖರೀದಿಸಲು ಮಾಡಿದ ಸಾಲಗಳನ್ನು ಎರಡನೇ ಹಂತದಲ್ಲಿ ಮನ್ನಾ ಮಾಡಬೇಕು. ಜತೆಗೆ ಕುರಿ, ಹಸು, ಕೋಳಿ ಸಾಕಾಣಿಕೆ, ಎತ್ತಿನಗಾಡಿ, ಚಿನ್ನ, ಟ್ರ್ಯಾಕ್ಟರ್‌ ಮೇಲೆ ಮಾಡಿರುವ ಸಾಲಗಳನ್ನು ಮತ್ತು ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡಬೇಕು’ ಎಂದು ಹೇಳಿದರು.

‘ಸಂಕಷ್ಟದಲ್ಲಿರುವ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಾಗೂ ಗ್ರಾಮೀಣ ಪ್ರದೇಶದ ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಶೇ 65 ರಷ್ಟು ಮತ್ತು ರಾಜ್ಯ ಸರ್ಕಾರ ಶೇ 35 ರಷ್ಟು ಅನುಪಾತದಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ರಾಜ್ಯದ ಎಲ್ಲಾ ಶಾಸಕರು ಮತ್ತು ಸಂಸದರ ಮನೆ, ಕಚೇರಿ ಮುಂದೆ ಚಳವಳಿ ಹಮ್ಮಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

‘ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸುವ ಜತೆಗೆ ರೈತರಿಗೆ ಪ್ರತಿ ಎಕರೆಗೆ ತಲಾ ₨25 ಸಾವಿರದಂತೆ ಪರಿಹಾರ ವಿತರಿಸಬೇಕು. ರೇಷ್ಮೆ ಮತ್ತು ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಬಾಕಿ ಪ್ರೋತ್ಸಾಹಧನ ಕೂಡಲೇ ಬಿಡುಗಡೆಗೊಳಿಸಬೇಕು. ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರ ವರದಿಯನ್ನು ಜಾರಿಗೆ ತರುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕು. ಜತೆಗೆ ಜಲತಜ್ಞ ಜಿ.ಎಸ್.ಪರಮಶಿವಯ್ಯ ಅವರ ವರದಿ ಆಧರಿಸಿ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.

ರೈತಸಂಘದ ಪದಾಧಿಕಾರಿಗಳಾದ ಎಸ್.ಎಂ.ರವಿಪ್ರಕಾಶ್, ಭಕ್ತರಹಳ್ಳಿ ಪ್ರತೀಶ್, ಅನುಸೂಯಮ್ಮ, ಜೆ.ಎಸ್.ವೆಂಕಟಸ್ವಾಮಿ, ರಮೇಶ್‌ಬಾಬು, ಪದ್ಮಮ್ಮ, ರೆಡ್ಡಪ್ಪ, ಶಂಕರರೆಡ್ಡಿ, ಹುಸೇನ್ ಸಾಬ್ ಕೆ.ನಾರಾಯಣಸ್ವಾಮಿ, ಎಚ್.ಎಸ್.ಬಾಜಿಸಾಬ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !