ಬುಧವಾರ, ಏಪ್ರಿಲ್ 21, 2021
32 °C
ಹಿರೇನಾಗವಲ್ಲಿಯಲ್ಲಿ ಸ್ಫೋಟ ಪ್ರಕರಣ; ಕಣಿವೆ ನಾರಾಯಣಪುರ ಕ್ಲಸ್ಟರ್‌ನಲ್ಲಿ ಗಣಿಗಾರಿಕೆ ಆರಂಭ ಸಾಧ್ಯತೆ

ಎಂಟು ತಂಡಗಳಿಂದ ಬಿರುಸಿನ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಿರೇನಾಗವಲ್ಲಿ ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದ ನಂತರ ಜಿಲ್ಲೆ ಕ್ವಾರಿಗಳಿಗೆ ಮತ್ತು ಕ್ರಷರ್‌ಗಳ ಬಾಗಿಲು ಬಂದ್ ಆಗಿವೆ. ಅಕ್ರಮ ಗಣಿಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ರಘುನಂದನ್ ನೇತೃತ್ವದ ತಂಡ ಕ್ವಾರಿಗಳು ಮತ್ತು ಕ್ರಷರ್‌ಗಳನ್ನು ಪರಿಶೀಲಿಸುತ್ತಿದೆ.

ಜಿಲ್ಲೆಯಲ್ಲಿ ಒಟ್ಟು 113 ಕ್ವಾರಿಗಳು ಸಕ್ರಿಯವಾಗಿದ್ದು ಇವುಗಳ ದಾಖಲೆಗಳ ಪರಿಶೀಲನೆ ನಡೆಯಲಿದೆ. ಆ ನಂತರವೇ ಕಾರ್ಯಾರಂಭಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಲಿದೆ.

ಕಣಿವೇ ನಾರಾಯಣಪುರ, ಪೆರೇಸಂದ್ರದ ಒಂದು ಮತ್ತು ಎರಡನೇ ಕ್ಲಸ್ಟರ್, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಗೌರಿಬಿದನೂರು ಮತ್ತು ಚಿಂತಾಮಣಿ ಕ್ಲಸ್ಟರ್‌ಗಳ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸುತ್ತಿರುವವರು ಪರವಾನಗಿ ಪಡೆದಿದ್ದಾರೆಯೇ, ಸ್ಪೋಟಗಳ ಬಳಕೆ ಬಗ್ಗೆ ಪರಿಶೀಲಿಸಲು ಜಿಲ್ಲಾಧಿಕಾರಿ ಆರ್. ಲತಾ 8 ತಂಡಗಳನ್ನು ರಚಿಸಿದ್ದಾರೆ.

ಈ ಪರಿಶೀಲನೆ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ನಡೆಯುತ್ತಿದೆ. ತಹಶೀಲ್ದಾರರು, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಅಧಿಕಾರಿಗಳು ಈ ತಂಡದಲ್ಲಿ ಇದ್ದಾರೆ. ಈಗಾಗಲೇ ಕಣಿವೆ ನಾರಾಯಣಪುರ ವ್ಯಾಪ್ತಿಯ ಕ್ವಾರಿಗಳ ಪರಿಶೀಲನೆ ಪೂರ್ಣವಾಗಿದೆ.

‘ಕಣಿವೆ ನಾರಾಯಣಪುರ ಕ್ಲಸ್ಟರ್‌ನ 14 ಕ್ವಾರಿ 6 ಕ್ರಷರ್‌ಗಳನ್ನು ತನಿಖೆ ಮಾಡಲಾಗಿದೆ. ಮುಂದಿನ ಒಂದು ವಾರದಿಂದ 15 ದಿನಗಳಲ್ಲಿ ತನಿಖೆ ಪೂರ್ಣವಾಗಲಿದೆ. ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು‘ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ವಿಜ್ಞಾನಿ ಕೆ.ಎಂ.ನಂಜುಂಡಸ್ವಾಮಿ ತಿಳಿಸಿದರು.

‘ಮೂಲ ಪರವಾನಗಿ ದಾಖಲೆಗಳು, ಸ್ಫೋಟ ಮಾಡಿರುವ ಬಗೆಯ ಕುರಿತು ಪರಿಶೀಲಿಸಲಾಗುವುದು. ಲೆಕ್ಕಪರಿಶೋಧನೆ ಮಾಡಿದಂತೆ ಕ್ವಾರಿಗಳ ಪರಿಶೋಧನೆ ಮಾಡುತ್ತಿದ್ದೇವೆ‘ ಎಂದರು.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಭಾಗದಲ್ಲಿ ಕಾಮಗಾರಿಗಳು ಹೆಚ್ಚಿರುವ ಕಾರಣ ಅಲ್ಲಿಗೆ ತುರ್ತಾಗಿ ಕಚ್ಚಾ ವಸ್ತುಗಳ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಲೋಪಗಳು ಇಲ್ಲದ ಕ್ವಾರಿಗಳ ಬಗ್ಗೆ ಜಿಲ್ಲಾಧಿಕಾರಿ ಅವರು ಪರಿಶೀಲಿಸಿ ಕ್ವಾರಿ ಕಾರ್ಯಾರಂಭಕ್ಕೆ ತುರ್ತಾಗಿ ಸೂಚಿಸುವ ಸಾಧ್ಯತೆ ಇದೆ‘ ಎಂದು ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು