ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ

ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ವತಿಯಿಂದ ಶಿಬಿರ ಆಯೋಜನೆ
Last Updated 14 ಜೂನ್ 2020, 13:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿಶ್ವ ರಕ್ತದಾನಿಗಳ ದಿನಾಚರಣೆ ಪ್ರಯುಕ್ತ ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ರಕ್ತನಿಧಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 85 ಯೂನಿಟ್‌ ರಕ್ತ ಸಂಗ್ರಹಿಸಲಾಯಿತು.

ಈ ವೇಳೆ ಮಾತನಾಡಿದ ರೆಡ್‌ಕ್ರಾಸ್‌ ಸಂಸ್ಥೆ ರಾಜ್ಯ ಸಮಿತಿ ಸದಸ್ಯ ಡಾ.ಕೆ.ಪಿ.ಶ್ರೀನಿವಾಸ್‌ ಮೂರ್ತಿ, ‘ಈ ಹಿಂದೆಲ್ಲ ವಿಶ್ವ ರಕ್ತದಾನಿಗಳ ದಿನಾಚರಣೆ ದಿನ ವಿವಿಧ ಸಂಘಟನೆಗಳು ಶಿಬಿರ ಆಯೋಜಿಸುತ್ತಿದ್ದವು. ಇದೇ ಮೊದಲ ಬಾರಿಗೆ ಕೋವಿಡ್‌ ಕಾರಣಕ್ಕೆ ರೆಡ್‌ಕ್ರಾಸ್‌ ಜಿಲ್ಲಾ ನಿಧಿಯಿಂದಲೇ ಶಿಬಿರ ಆಯೋಜಿಸಲಾಗಿದೆ’ ಎಂದು ಹೇಳಿದರು.

‘ರಕ್ತದಾನದಿಂದ ಸಂಕಷ್ಟದಲ್ಲಿರುವವರಿಗೆ ಹೊಸ ಜೀವನ ಕಲ್ಪಿಸಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡಲು ಮುಂದೆ ಬರಬೇಕು. ಒಂದು ಯೂನಿಟ್ ರಕ್ತದಿಂದ ಸಂಕಷ್ಟದಲ್ಲಿರುವ ಮೂರು ಜನರಿಗೆ ಸಹಾಯವಾಗುತ್ತದೆ’ ಎಂದು ತಿಳಿಸಿದರು.

‘ರಕ್ತದಾನದಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಜನರಲ್ಲಿದೆ. ಅದನ್ನು ಹೋಗಲಾಡಿಸಬೇಕಿದೆ. ರಕ್ತದಾನದಿಂದ ಆರೋಗ್ಯ ವೃದ್ಧಿಸುತ್ತದೆ. ದೇಹದಲ್ಲಿರುವ ಕೊಬ್ಬಿನಾಂಶ, ಬ್ಯಾಕ್ಟೀರಿಯಾ ಸೇರಿದಂತೆ ಹಲವು ಅಂಶಗಳನ್ನು ಹೊರಹಾಕುವುದರಿಂದ ದೇಹಕ್ಕೆ ಹೊಸ ಚೈತನ್ಯ ಬರಲಿದೆ’ ಎಂದರು.

‘ತುರ್ತು ಸಂದರ್ಭಗಳಲ್ಲಿ ರಕ್ತ ಸಿಗದೆ ರೋಗಿಗಳು, ಗಾಯಾಳುಗಳು ತೊಂದರೆಗೆ ಒಳಗಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮೂರು ತಿಂಗಳಿಗೊಮ್ಮೆ ಆರೋಗ್ಯವಂತ ವ್ಯಕ್ತಿಗಳು ತಪ್ಪದೇ ರಕ್ತದಾನ ಮಾಡುವುದು ರೂಢಿಸಿಕೊಳ್ಳಬೇಕು. ಮೂಢನಂಬಿಕೆಯನ್ನು ಬದಿಗೊತ್ತಿ, ರಕ್ತದಾನ ಮಾಡುವ ಮೂಲಕ ಪ್ರಾಣದಾತರಾಗಬೇಕು’ ಎಂದು ಹೇಳಿದರು.

ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾ ರಕ್ತನಿಧಿ ಉಪಾಧ್ಯಕ್ಷ ಪ್ರೊ.ಕೋಡಿರಂಗಪ್ಪ ಮಾತನಾಡಿ, ‘ಆಸ್ಟ್ರೇಲಿಯಾದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಕಾರ್ಲ್ ಲಾ೦ಡ್ಸ್ಟೈನರ್ ಅವರು ಮೊದಲ ಬಾರಿಗೆ ರಕ್ತವನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿದರು. ಜೀವಶಾಸ್ತ್ರ ಅಥವಾ ವೈದ್ಯಕೀಯ ವಿಭಾಗದಲ್ಲಿನ ಅವರ ಸೇವೆಯ ಸ್ಮರಣಾರ್ಥ ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ’ ಎಂದು ತಿಳಿಸಿದರು.

‘ರಕ್ತದಾನ ಎಲ್ಲ ದಾನಗಳಲ್ಲಿಯೇ ಶ್ರೇಷ್ಠವಾದ್ದದ್ದು. ರಕ್ತದಾನದಿಂದ ಸಂಕಷ್ಟದಲ್ಲಿರುವವರಿಗೆ ಹೊಸ ಜೀವನ ಕಲ್ಪಿಸಿದಂತಾಗುತ್ತದೆ. ಜತೆಗೆ, ರಕ್ತದಾನ ಮನುಷ್ಯರಿಗೆ ಸಹಾಯ ಮಾಡುವುದು ಮಾತ್ರವಲ್ಲ ರಕ್ತದ ಸಂಬಂಧ ಸಹಜೀವಿಗಳಲ್ಲಿ ಮಮತೆ, ಪ್ರೀತಿ, ಕರುಣೆ ಉಕ್ಕಿಸಿ ಸಮಾಜದಲ್ಲಿ ಸೌಹಾರ್ದತೆ ಪಸರಿಸುವಂತೆ ಮಾಡುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಕೋವಿಡ್‌ನಂತಹ ಈ ಸಂಕಷ್ಟ ಕಾಲದಲ್ಲಿ ರಕ್ತದ ಕೊರತೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಜ್ಞಾವಂತ ಯುವಜನತೆ ಅಂಜಿಕೆ ಪಡದೆ ರಕ್ತದಾನಕ್ಕೆ ಮುಂದಾಗಬೇಕು. ಸಂಘಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತದ ಕೊರತೆ ನೀಗುವ ನಿಟ್ಟಿನಲ್ಲಿ ರೆಡ್‌ಕ್ರಾಸ್‌ ರಕ್ತನಿಧಿಯೊಂದಿಗೆ ಸಹಕಾರ ನೀಡಬೇಕು’ ಎಂದರು.

ಲಯನ್ಸ್‌ ಸಂಸ್ಥೆ ಅಧ್ಯಕ್ಷ ಮಹೇಶ್‌, ರೆಡ್‌ಕ್ರಾಸ್‌ ಜಿಲ್ಲಾ ನಿಧಿಯ ಸಭಾಪತಿ ಡಾ.ಬಾಬುರೆಡ್ಡಿ, ಖಜಾಂಚಿ ಎಂ.ಜಯರಾಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT