ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಬಸ್‌ ಪ್ರಯಾಣಕ್ಕೆ ನೀರಸ ಪ್ರತಿಕ್ರಿಯೆ

ಜಿಲ್ಲೆಯಲ್ಲಿ 71 ಬಸ್‌ಗಳ ಸಂಚಾರ, ಕಡ್ಡಾಯವಾಗಿ ಪ್ರಯಾಣಿಕರ ಆರೋಗ್ಯ ತಪಾಸಣೆ
Last Updated 19 ಮೇ 2020, 15:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ಕಾರಣಕ್ಕೆ ಜಿಲ್ಲೆಯಲ್ಲಿ ಸ್ಥಗಿತಗೊಂಡಿಸಿದ್ದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳ ಸೇವೆ 55 ದಿನಗಳ ಬಳಿಕ ಮಂಗಳವಾರ ಪುನರಾರಂಭಗೊಂಡಿತು. ಆದರ, ಮೊದಲ ದಿನ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಬಸ್‌ ವ್ಯವಸ್ಥೆ ಮಾಡಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ನಿರ್ಧರಿಸಿ, ಜಿಲ್ಲೆಯಲ್ಲಿ 70 ರಿಂದ 100 ಬಸ್‌ ಓಡಿಸಲು ವ್ಯವಸ್ಥೆ ಮಾಡಿಕೊಂಡಿದ್ದರು. ಆದರೆ, ಮಂಗಳವಾರ ಚಿಕ್ಕಬಳ್ಳಾಪುರ 20, ಚಿಂತಾಮಣಿ 12, ಶಿಡ್ಲಘಟ್ಟ 13, ಬಾಗೇಪಲ್ಲಿ 9, ಗೌರಿಬಿದನೂರು 17 ಬಸ್‌ಗಳು ಸೇರಿದಂತೆ ದಿನವಿಡೀ 71 ಬಸ್‌ಗಳು ಸಂಚರಿಸಿದವು. ಈ ಪೈಕಿ 47 ಬಸ್‌ಗಳು ಬೆಂಗಳೂರಿಗೆ ಸಂಚರಿಸಿದವು.

ತಾಲ್ಲೂಕಿನ ಪ್ರತಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಆರೋಗ್ಯ ತಪಾಸಣೆ ನಡೆಸಿ, ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಎಲ್ಲಾ ಪ್ರಯಾಣಿಕರಿಗೆ ಮುಖಗವಸು ಕಡ್ಡಾಯಗೊಳಿಸಲಾಗಿತ್ತು. ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರಯಾಣಿಕರ ಆಧಾರಕಾರ್ಡ್‌ ಪರಿಶೀಲಿಸಿ ಮಾಹಿತಿ ದಾಖಲಿಸಿಕೊಳ್ಳುತ್ತಿದ್ದರು.

ಬಸ್‌ನಲ್ಲಿ ಎರಡು ಸೀಟಿರುವ ಸ್ಥಳಗಳಲ್ಲಿ ಒಬ್ಬರು, ಮೂರು ಸೀಟಿರುವ ಸ್ಥಳಗಳಲ್ಲಿ ಇಬ್ಬರರಂತೆ ಒಂದು ಬಸ್ಸಿನಲ್ಲಿ 30 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಚಿಕ್ಕ ಮಕ್ಕಳು, ಹಿರಿಯ ನಾಗರಿಕರಿಗೆ ಪ್ರಯಾಣಕ್ಕೆ ಅನುಮತಿಸಲಿಲ್ಲ.

ಕೊರೊನಾ ಸೋಂಕು ನಿಯಂತ್ರಿಸಲು ಜಾರಿಗೊಳಿಸಿದ ಲಾಕ್‌ಡೌನ್ ಕಾರಣಕ್ಕೆ ಕಳೆದ ಮಾರ್ಚ್ 22ರಿಂದ ಬಸ್‌ಗಳು ಸಂಚಾರ ನಿಲ್ಲಿಸಿದ್ದವು. ಸರ್ಕಾರ ಲಾಕ್‌ಡೌನ್‌ ನಿರ್ಬಂಧ ಒಂದಷ್ಟು ಸಡಿಲಗೊಳಿಸಿರುವ ಕಾರಣ ಕೆಎಸ್‌ಆರ್‌ಟಿಸಿ ಬೆಳಿಗ್ಗೆ 7 ರಿಂದ ಸಂಜೆ 7ರ ವರೆಗೆ ಪ್ರಯಾಣಿಕರ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು. ಸಂಜೆ 5ರ ಬಳಿಕ ಬಸ್‌ ವ್ಯವಸ್ಥೆ ಸ್ಥಗಿತಗೊಳಿಸಿ, ಬರೀ 7ರ ವರೆಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

’ಪ್ರಯಾಣಿಕ ಒತ್ತಡ, ಪರಿಸ್ಥಿತಿ ನೋಡಿಕೊಂಡು ಬೇಡಿಕೆಗೆ ಅನುಗುಣವಾಗಿ ಬಸ್‌ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ. ಪ್ರಸ್ತುತ, 100 ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್‌ಗಳನ್ನು ವೈರಾಣು ನಾಶಕ ಸಿಂಪಡಿಸುವ ಮೂಲಕ ಪ್ರಯಾಣಕ್ಕೆ ಸಜ್ಜುಗೊಳಿಸಲಾಗುತ್ತಿದೆ‘ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಂಜುನಾಥ್ ತಿಳಿಸಿದರು.

ಚಿಕ್ಕಬಳ್ಳಾಪುರದ ಬಸ್‌ ನಿಲ್ದಾಣದಿಂದ ನಿತ್ಯ ಸುಮಾರು 30 ಸಾವಿರ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ, ಮಂಗಳವಾರ ನಿಲ್ದಾಣದಿಂದ ಕೇವಲ 526 ಜನರು ಪ್ರಯಾಣ ಬೆಳೆಸಿದರು. ಅದರಲ್ಲೂ ಬಹುಪಾಲು ಜನರು ಬೆಂಗಳೂರಿಗೆ ಹೋದರು.

ನಗರದಲ್ಲಿ ಮಂಗಳವಾರ ಆಟೊ ಸಂಚಾರ ಆರಂಭಗೊಂಡಿದ್ದರಿಂದ ಚಾಲಕರ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ, ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT