ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಸಂಘಗಳಿಗೆ ಚೆಕ್‌ ನೀಡಿದ್ದ ಸುಧಾಕರ್‌

ಬಿಎಸ್ಪಿ ರಾಜ್ಯ ಘಟಕ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಆರೋಪ : ಮೂಲಸೌಕರ್ಯದ ಭರವಸೆ
Last Updated 26 ನವೆಂಬರ್ 2019, 5:49 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಡಿಯುವ ನೀರು ಮತ್ತು ನಿವೇಶನಗಳನ್ನು ಒದಗಿಸುತ್ತೇವೆ ಎಂದು ಕ್ಷೇತ್ರದ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದ ಡಾ.ಕೆ.ಸುಧಾಕರ್‌, ಇಂದು ಜನರಿಗೆ ಮೋಸ ಮಾಡಿದ್ದಾರೆ. ಹಣದ ಆಸೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಬಹುಜನ ಸಮಾಜ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಎಂ.ಕೃಷ್ಣಮೂರ್ತಿ ಆರೋಪಿಸಿದರು.

ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,‘ಚಿಕ್ಕಬಳ್ಳಾಪುರ ಕ್ಷೇತ್ರದ ಜನರಿಗೆ ಕಳೆದ 70 ವರ್ಷಗಳಿಂದ ಕುಡಿಯಲು ನೀರು ಕೊಡಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಂಪೂರ್ಣ ವಿಫಲವಾಗಿವೆ’ ಎಂದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸುಧಾಕರ್‌ ಅವರು ಅಂದಾರ್ಲಹಳ್ಳಿ, ದೊಡ್ಡಕಿರುಗಂಬಿ ಸೇರಿದಂತೆ ವಿವಿಧ ಹಳ್ಳಿಗಳ ಮಹಿಳಾ ಸ್ವಸಹಾಯ ಸಂಘಗಳಿಗೆ ₹ 50,000 ಮೌಲ್ಯದ ಚೆಕ್‌ಗಳನ್ನು ನೀಡಿದ್ದಾರೆ. ಚುನಾವಣೆ ನಂತರ ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಪಡೆಯಲು ಹೋದರೆ ಬ್ಯಾಂಕ್‌ನ ಅಧಿಕಾರಿಗಳು ಚೆಕ್‌ಗಳನ್ನು ಹರಿದು ಹಾಕಿದ್ದಾರೆ. ಈ ಘಟನೆಯನ್ನು ನಾನು ಚುನಾವಣಾ ಪ್ರಚಾರಕ್ಕೆ ಹೋದಾಗ ನೊಂದ ಮಹಿಳೆಯರು ಅಳಲು ತೊಡಿಕೊಂಡರು ಎಂದು ಆರೋಪಿಸಿದರು.

ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಈ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಆದ್ದರಿಂದ ಕ್ಷೇತ್ರದ ಮತದಾರರು ಕ್ಷೇತ್ರದ ಅಭಿವೃದ್ಧಿಗಾಗಿ ಹೊಸ ಮುಖಕ್ಕೆ ಮಣೆ ಹಾಕಲಿದ್ದಾರೆ. ಬಹುಜನ ಸಮಾಜ ಪಕ್ಷ ಚುನಾವಣೆ ಪ್ರಣಾಳಿಕೆ ಹೊರಡಿಸುವುದಿಲ್ಲ. ನಮ್ಮ ಸಂವಿಧಾನವೇ ನಮ್ಮ ಪ್ರಣಾಳಿಕೆಯಾಗಿದೆ. ನಾವು ಹೆಚ್ಚು ಮಾತನಾಡುವುದಿಲ್ಲ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

ಮಾಜಿ ಶಾಸಕ ಎಚ್‌.ಡಿ.ಬಸವರಾಜು, ಅನರ್ಹ ಶಾಸಕರು ಯಾಕೆ ರಾಜೀನಾಮೆ ನೀಡಿದ್ದಾರೆ, ಇದರ ಸತ್ಯಾಂಶವನ್ನು ಮತದಾರರಿಗೆ ತಿಳಿಸಬೇಕು. ಅಭಿವೃದ್ದಿ ಕಾರ್ಯಕ್ರಮಗಳು ಮಾಡಲು ವಿಫಲರಾದಾಗ ರಾಜೀನಾಮೆ ಕೊಟ್ಟು ನೇರವಾಗಿ ಜನರ ಬಳಿ ಬರಬೇಕಾಗಿತ್ತು.ಆದರೆ, ಮುಂಬೈಗೆ ಯಾಕೆ ಹೋಗಿದ್ದು ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಾತಿ ರಾಜಕಾರಣ ಮಾಡುವುದನ್ನು ಬಿಡಬೇಕು ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ ಜಾತಿ ರಾಜಕಾರಣ ಮಾಡಬಾರದು. ಜಾತಿ ರಾಜಕಾರಣ ಮಾಡಿದರೆ ಬಿಎಸ್ಪಿ ಪಕ್ಷ ಪರಿಶಿಷ್ಟ ಜಾತಿ, ವರ್ಗ, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರೊಂದಿಗೆ ಸೇರಿ ಬಿಜೆಪಿಯನ್ನು ಧೂಳಿಪಟ ಮಾಡುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ನಾಗಪ್ಪ, ಜಿಲ್ಲಾ ಸಂಯೋಜಕ ಎಂ.ಮುನಿಕೃಷ್ಣಯ್ಯ ಇದ್ದರು.

*

ಅನರ್ಹರು ಸ್ವಂತ ಹಿತಾಸಕ್ತಿ, ಹಣ ಮತ್ತು ಅಧಿಕಾರದ ಆಸೆಗಾಗಿ ಪಕ್ಷಾಂತರಗೊಂಡಿದ್ದಾರೆ. ಅನರ್ಹರು ಚುನಾವಣೆ ತಂದು ಜನರ ತೆರಿಗೆ ಹಣ ಪೋಲು ಮಾಡುತ್ತಿದ್ದಾರೆ.
-ಎಂ.ಕೃಷ್ಣಮೂರ್ತಿ, ರಾಜ್ಯ ಘಟಕ ಅಧ್ಯಕ್ಷ, ಬಿಎಸ್ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT