ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಚೇನಳ್ಳಿ ಅಭಿವೃದ್ಧಿಯೇ ಆದ್ಯತೆ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ

ಚುನಾವಣೆ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ
Last Updated 27 ನವೆಂಬರ್ 2019, 6:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕ್ಷೇತ್ರಕ್ಕೆ ಕೇವಲ ಒಂದೂವರೆ ತಿಂಗಳಲ್ಲಿ ಡಾ.ಕೆ. ಸುಧಾಕರ್ ಅವರ ವಿಶೇಷ ಪ್ರಯತ್ನದಿಂದ ಹೊಸ ತಾಲ್ಲೂಕು, ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಮತದಾರರು ಇದನ್ನು ಗಮನದಲ್ಲಿಟ್ಟುಕೊಂಡು ಸುಧಾಕರ್ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ತಾಲ್ಲೂಕಿನ ಮಂಚೇನಹಳ್ಳಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ‘ಇಂದು ಚುನಾವಣೆ ಪ್ರಚಾರಕ್ಕೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಂದಿರುವುದು ಸುಧಾಕರ್‌ಗೆ ಆನೆ ಬಲ ತಂದಿದೆ. ಮಂಚೇನಹಳ್ಳಿ ಪ್ರತ್ಯೇಕ ತಾಲ್ಲೂಕು ಮಾಡಿಸಿದ್ದಕ್ಕೆ ಒಂದು ಮತ ಕೂಡ ಬೇರೆ ಪಕ್ಷಗಳಿಗೆ ಹೋಗದಂತೆ ಎಲ್ಲಾ ವರ್ಗದವರೂ ಒಟ್ಟಾಗಿ ಸುಧಾಕರ್‌ಗೆ ಮತ ನೀಡುವಂತೆ ಮನವಿ ಮಾಡಿದರು.

ಮಂಚೇನಹಳ್ಳಿಗೆ ನೀರಾವರಿ ಸೌಲಭ್ಯದ ಅಗತ್ಯ ಅಪಾರವಾಗಿದೆ. ಮುಂದಿನ ದಿನಗಳಲ್ಲಿ ಅಗತ್ಯವಿರುವ ಸೌಲಭ್ಯ ಕಲ್ಪಿಸಿ, ನೀರಾವರಿ ಸೌಲಭ್ಯ ಹೆಚ್ಚಿಸಿ ಕೆರೆ ಕಟ್ಟೆ ತುಂಬಿಸಿ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಿಸುವ ಕೆಲಸ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್ ಗೆಲುವಿಗೆ ಮಂಚೇನಹಳ್ಳಿಯಲ್ಲಿ 14 ಸಾವಿರ ಮತಗಳ ಅಂತರ ಕೊಟ್ಟಿದ್ದೀರಿ. ಈ ಬಾರಿ 25 ಸಾವಿರಕ್ಕಿಂತ ಹೆಚ್ಚಾಗಬೇಕು. ನಿಮಗೆ ಏನು ಸವಲತ್ತು ಬೇಕು ಕೇಳಿ. ಅದನ್ನೆಲ್ಲಾ ನೀಡಲು ನಾನು ಸಿದ್ಧವಿದ್ದೇನೆ ಎಂದರು.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಾತನಾಡಿ, ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಗೆಲುವು ಅನಿವಾರ್ಯವಾಗಿದೆ. ಅವರು ಮಾಡಿದ ತ್ಯಾಗದಿಂದ ಇಂದು ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್‌ ಮಾತನಾಡಿ, ಸತತ 20 ವರ್ಷಗಳ ಮಂಚೇನಳ್ಳಿ ಪ್ರತ್ಯೇಕ ತಾಲ್ಲೂಕಿನ ಹೋರಾಟ ಉಪವಾಸವನ್ನು ಕೇವಲ ಎರಡು ತಿಂಗಳಲ್ಲಿ ಈಡೇರಿಸುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಡಿದ್ದಾರೆ.

ಮಂಚೇನಹಳ್ಳಿ ಪ್ರತ್ಯೇಕ ತಾಲ್ಲೂಕು ಆಗಿರುವುದರಿಂದ ಜನರಿಗೆ ಆಡಳಿತ ಹತ್ತಿರವಾಗಲಿದೆ. ಆದರೆ ಕೆಲವರು ಇದನ್ನು ಸ್ವಾರ್ಥದ ರಾಜಕಾರಣ ಎಂದು ಹೇಳುತ್ತಿದ್ದಾರೆ. ರಾಜಕೀಯ ಉದ್ದೇಶಕ್ಕಾಗಿ ಇದು ಪ್ರತ್ಯೇಕ ತಾಲ್ಲೂಕು ಆಗಿಲ್ಲ. ಭೌಗೋಳಿಕವಾಗಿ ಅತ್ಯಂತ ಅರ್ಹತೆ ಇದ್ದಂತ ಪ್ರದೇಶವನ್ನು ತಾಲ್ಲೂಕು ಮಾಡಲಾಗಿದೆ ಎಂದರು.

ಮಂಚೇನಹಳ್ಳಿ ಬರಡು ಭೂಮಿಯಾಗಿದೆ. 1500 ಅಡಿ ಆಳಕ್ಕೆ ಅಂತರ್ಜಲ ಕುಸಿದಿದೆ. ಅಂತರ್ಜಲ ವೃದ್ಧಿ ಮಾಡುತ್ತೇವೆ ಎಂದು ಕಾಂಗ್ರೆಸ್-ಜೆಡಿಎಸ್‌ನವರು ಸುಳ್ಳು ಹೇಳಿಕೊಂಡು ಬಂದರು. ಆದರೆ ನಾನು ಮುಂದಿನ ಮೂರುವರೆ ವರ್ಷದಲ್ಲಿ ನೀರಾವರಿ ಯೋಜನೆಯನ್ನು ತಂದು ಇಲ್ಲಿನ ಭೂಮಿಯನ್ನು ಹಸಿರಾಗಿಸುತ್ತೇವೆ ಎಂದರು.

ಇಂದು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯನ್ನು ಯಾರಾದರೂ ಆರಂಭಿಸಿದ್ದರೆ ಅದು ಶಾಸಕ ಶಿವಶಂಕರ್ ರೆಡ್ಡಿಯವರು. ಎರಡು ಬಾರಿ ಮಂಚೇನಹಳ್ಳಿ ಜನರ ಮತ ಪಡೆದು ಶಾಸಕರಾದ ನೀವು ಪ್ರತ್ಯೇಕ ತಾಲ್ಲೂಕು ಮಾಡಲು ಅವಕಾಶ ನೀಡಿಲ್ಲ. ಆದರೆ ಈಗ ತಾಲ್ಲೂಕು ಮಾಡುವ ಅವಕಾಶವನ್ನೂ ತಪ್ಪಿಸುವ ಯತ್ನ ಮಾಡುತ್ತಿದ್ದೀರಿ. ನಿಮಗೆ ಯಾವ ನೈತಿಕತೆ ಇದೆ ಮಂಚೇನಹಳ್ಳಿ ಜನರ ಬಳಿ ಮತ ಕೇಳಲು ಎಂದು ಪ್ರಶ್ನಿಸಿದರು.

ಎರಡು ವರ್ಷದಲ್ಲಿ ಮಂಚೇನಹಳ್ಳಿ ಪರಿಪೂರ್ಣ ತಾಲ್ಲೂಕು ಆಗಲಿದೆ. ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಒದಗಿಸುವ ನೇತೃತ್ವವನ್ನು ಮುಖ್ಯ ಮಂತ್ರಿ ಬಿಎಸ್ ಯಡಿಯೂರಪ್ಪ ತೆಗೆದುಕೊಳ್ಳುತ್ತಾರೆ ಎಂದರು.

ಇಂದು ಮತದಾರರ ಆಯ್ಕೆ ಅತ್ಯಂತ ಸರಳವಾಗಿದೆ, ಸ್ಪಷ್ಟವಾಗಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಚಿಕ್ಕಬಳ್ಳಾಪುರಕ್ಕೆ ಲಭಿಸಿದ್ದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರಿಸಿದ್ದು ಚಿಕ್ಕಬಳ್ಳಾಪುರಕ್ಕೆ ಮಾಡಿದ ಅನ್ಯಾಯ ಅಲ್ಲವಾ? ರಾಮನಗರದಲ್ಲಿ ಮೆಡಿಕಲ್ ಕಾಲೇಜು ಆರೋಗ್ಯ ವಿಶ್ವವಿದ್ಯಾಲಯ ಈಗಾಗಲೇ ಇದೆ. 10 ಕಿ.ಮಿ. ದೂರದಲ್ಲಿರುವ ಕನಕಪುರಕ್ಕೆ ಮೆಡಿಕಲ್ ಕಾಲೇಜಿನ ಅಗತ್ಯವಿತ್ತಾ? ಎಂದು ಪ್ರಶ್ನಿಸಿದರು.

ಕಮಿಷನ್‌ ನಿಮಗೆಷ್ಟು ಬಂತು...
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು ಅವರ ತಂದೆ ಎಚ್.ಡಿ. ದೇವೇಗೌಡರ ಆಶೀರ್ವಾದದಿಂದ. ನನ್ನಂತೆ ಪರಿಶ್ರಮದಿಂದ ನೀವು ಗೆದ್ದು ಬಂದಿದ್ದಲ್ಲ. ಆದರೆ ನಾನು ಒಬ್ಬ ಶಿಕ್ಷಕ, ರೈತನ ಮಗನಾಗಿ ಜನರ ಮಧ್ಯದಿಂದ ಗೆದ್ದು ಬಂದವನು. ತಂದೆ ಹೆಸರು ಹೇಳಿಕೊಂಡು ಬಂದವನಲ್ಲ. ಕಮಿಷನ್‌ಗಾಗಿ ನಾನು ಕಾಲೇಜು ತರುವ ನೀಚ ಕೆಲಸ ಮಾಡಿಲ್ಲ ಎಂದು ಸುಧಾಕರ್‌ ಹೇಳಿದರು. ನೀವು ಮುಖ್ಯಮಂತ್ರಿಯಾಗಿದ್ದಾಗ ₹ 2 ಲಕ್ಷ ಕೋಟಿ ಮೊತ್ತದ ಆಯವ್ಯಯ ಮಂಡಿಸಿದ್ದೀರಿ. ಅದರಿಂದ ಎಷ್ಟು ಕಮಿಷನ್‌ ಬಂತು ಅಂತ ಕೇಳಲಾ? ಎಂದು ಸುಧಾಕರ್ ಪ್ರಶ್ನಿಸಿದರು.

ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಸಂಸದ ಪಿ.ಸಿ. ಮೋಹನ್, ಶಾಸಕರಾದ ಸುರೇಶ್‍ಗೌಡ, ಗೂಳಿಹಟ್ಟಿ ಶೇಖರ್, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ, ಶಾಸಕ ಪ್ರಾಣೇಶ್, ರಾಜರಾಜೇಶ್ವರಿ ನಗರ ಅನರ್ಹ ಶಾಸಕ ಮುನಿರತ್ನ, ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಡಾ.ಜಿ ವಿ ಮಂಜುನಾಥ್, ಮಾಜಿ ಶಾಸಕರಾದ ಶಿವಾನಂದ, ಜ್ಯೋತಿ ರೆಡ್ಡಿ, ರವಿನಾರಾಯಣರೆಡ್ಡಿ, ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT