ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಟ್‌ನಲ್ಲೇ ಬುಡಬುಡಿಕೆ ಕುಟುಂಬ ವಾಸ

ಬಾಗೇಪಲ್ಲಿ ತಾಲ್ಲೂಕಿನ ಜಿ.ಮದ್ದೇಪಲ್ಲಿ ಕ್ರಾಸ್ ಬಳಿ ಸೀರೆ, ಜಮಕಾನ ಹಾಕಿ ಜೀವನ
Last Updated 22 ಆಗಸ್ಟ್ 2020, 6:19 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ನಲ್ಲಚೆರುವು (ನಗರ್ಲು) ಗ್ರಾಮದ ಬುಡಬುಡಿಕೆ ಸಮುದಾಯದರ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆ ಸುಟ್ಟಿದ್ದರಿಂದ ಕಳೆದ 3 ವರ್ಷಗಳಿಂದ ಮನೆ ಇಲ್ಲದೇ ಟೆಂಟ್‌ಗಳಲ್ಲಿ ಜೀವನ ನಡೆಸುತ್ತಿದ್ದಾರೆ.

ಇದೀಗ ತಾಲ್ಲೂಕಿನ ಜಿ.ಮದ್ದೇಪಲ್ಲಿ ಕ್ರಾಸ್ ಬಳಿ ಖಾಲಿ ಜಾಗದಲ್ಲಿ 4 ಕುಟುಂಬದವರು ಸೀರೆ, ಜಮಕಾನಗಳನ್ನು ಹಾಕಿ ದಯನೀಯ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.

ತಾಲ್ಲೂಕಿನ ತಿಮ್ಮಂಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಿ.ಮದ್ದೇಪಲ್ಲಿ ಗ್ರಾಮ ಇದೆ. ವಿದ್ಯುತ್ ಪ್ರಸರಣ ಕೇಂದ್ರದ ಮುಂದೆ ಖಾಲಿ ಜಾಗದಲ್ಲಿ 4 ಬುಡಬುಡಿಕೆ ಕುಟುಂಬ, ಮಹಿಳೆಯರು, ಚಿಕ್ಕಮಕ್ಕಳು ಜೀವನ ನಡೆಸುತ್ತಿದ್ದಾರೆ.

ತಾಲ್ಲೂಕಿನ ನಲ್ಲಚೆರುವು (ನಗರ್ಲು) ಗ್ರಾಮದ ನಿವಾಸಿಯಾಗಿದ್ದ ರಾಮಲಕ್ಷ್ಮಮ್ಮ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸುಟ್ಟಿತ್ತು. ಪತಿಯು ಸಹ ಅಕಾಲಿಕ ಮರಣ ಹೊಂದಿದ್ದಾರೆ. ಮನೆ ಇಲ್ಲದ ರಾಮಲಕ್ಷ್ಮಮ್ಮಗೆ ಆಧಾರ್, ಪಡಿತರ ಚೀಟಿ, ಮತದಾನ ಗುರುತಿನ ಚೀಟಿಹಾಗೂ ಪತಿಯ ಸಾವಿನ ಪ್ರಮಾಣ ಪತ್ರ ಇದೆ. ವಿಧವಾ ವೇತನ ಮಾಡಿಸಿಕೊಳ್ಳಲು ಒಂದು ವರ್ಷ ಕಚೇರಿಗೆ ಅಲೆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿಧವಾ ವೇತನ ಸಿಕ್ಕಿಲ್ಲ. ಮನೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ, ಮನೆ ಮಂಜೂರು ಆಗಿಲ್ಲ.

ಮತ್ತೊಬ್ಬ ವೆಂಕಟರವಣಪ್ಪ ಕುಟುಂಬದಲ್ಲಿ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ. ಮೊದಲಿನಿಂದಲೂ ಮನೆ ಇಲ್ಲ. ಬುಡಬುಡಿಕೆ ವೇಷ ಹಾಕಿ ಮನೆ ಮನೆಗೂ ಭೇಟಿ ನೀಡಿ ಅಕ್ಕಿ, ಬೇಳೆ ತಂದು ಕುಟುಂಬ ಪೋಷಿಸುತ್ತಿದ್ದಾರೆ. ಹಾಗೂ ಚೇಳೂರು ತಾಲ್ಲೂಕಿನ ಗೆರಿಗಿರೆಡ್ಡಿಪಾಳ್ಯದ ಆದಿನಾರಾಯಣ ಕುಟುಂಬದಲ್ಲಿ ಪತ್ನಿ, ಚಿಕ್ಕಮಕ್ಕಳು ಗುಡಿಸಲು ಕಟ್ಟಿಕೊಂಡು ಸ್ಟೌವ್, ಗ್ಯಾಸ್ ರಿಪೇರಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಕಲ್ಲರೋಳ್ಳಪಲ್ಲಿ ಗ್ರಾಮದ ವೃದ್ಧ ಆಂಜಿನಪ್ಪ ಅವರ ಮನೆಯು ಸುಟ್ಟಿದ್ದರಿಂದ ಮೊಮ್ಮಗನ ಜತೆಯಲ್ಲಿ ಇದ್ದಾರೆ.

ಕೂಲಿಗೆ ಹೋಗಿ ಗಳಿಸಿದ ಹಣದಲ್ಲಿ ಕುಟುಂಬಗಳು ಜೀವನ ನಡೆಸುತ್ತಿವೆ. ಮಳೆ ಬಂದರೆ ಮಲಗಲು ಜಾಗ ಇಲ್ಲ. ನೆಲದ ಮೇಲೆ ನೀರು ಹರಿದರೆ, ನಿಂತುಕೊಂಡಿರಬೇಕು. ಭಿಕ್ಷೆಯಾಗಿ ಬಂದ ಧವಸಧಾನ್ಯಗಳು ನೆನೆದರೆ, ಬಿಸಿಲಿಗೆ ಒಣಗಿಸಿ ಊಟ ಮಾಡುವ ಸ್ಥಿತಿ ಇದೆ.

‘3 ವರ್ಷದ ಹಿಂದೆ ಮನೆ ಬೆಂಕಿ ಬಿದ್ದು ಸುಟ್ಟಿದೆ. ಮನೆ ಕಟ್ಟಿಸಿಕೊಡಿ ಹಾಗೂ ವಿಧವಾ ವೇತನ ಮಾಡಿಸಿ ಕೊಡಿ ಎಂದು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದೆ. ಅಧಿಕಾರಿಗಳು ಬಡವರಿಗೆ ಸ್ಪಂದಿಸುವುದಿಲ್ಲ. ಮನೆ ಇಲ್ಲದಿರುವುದರಿಂದ, 3 ವರ್ಷಗಳಿಂದ ಸೀರೆ, ಜಮಕಾನಗಳನ್ನು ಹಾಕಿಕೊಂಡು, ಮಕ್ಕಳ, ಮೊಮ್ಮಕ್ಕಳ ಜತೆ ವಾಸವಾಗಿದ್ದೇನೆ ಎಂದು ರಾಮಲಕ್ಷ್ಮಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT