ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯದ ಮೇಲೆ ಮತ್ತೆ ಬರೆ

ಮೊಬೈಲ್ ಫೋನ್‌ಗಳ ಬಿಡಿಭಾಗಗಳ ಘಟಕ ಸ್ಥಾಪನೆ ಒಂದೇ ಜಿಲ್ಲೆಗೆ ಹೊಸ ಯೋಜನೆ, ನೀರಾವರಿ ವಿಚಾರದಲ್ಲಿ ಸರ್ಕಾರದ ಮೇಲೆ ಹೋರಾಟಗಾರರ ಮುನಿಸು
Last Updated 5 ಜುಲೈ 2018, 14:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿದ ಮೈತ್ರಿ ಸರ್ಕಾರದ ಮೊದಲ ಬಜೆಟ್ ಜಿಲ್ಲೆಯ ಜನರಲ್ಲಿ ನಿರಾಸೆ ಮೂಡಿಸಿದೆ.

ಕಳೆದ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಕೊನೆಯ ಬಜೆಟ್‌ ಸಹ ಜಿಲ್ಲೆಯ ನಾಗರಿಕರಲ್ಲಿ ಬೇಸರದ ನಿಟ್ಟುಸಿರು ಹೊರಡಿಸಿತ್ತು. ಹೀಗಾಗಿ ಈ ಬಜೆಟ್‌ನ್ನು ಇದೀಗ ಜನರು ‘ಗಾಯದ ಮೇಲೆ ಬರೆ’ ಎಂಬಂತೆ ವ್ಯಾಖ್ಯಾನಿಸುತ್ತಿದ್ದಾರೆ.

ಕಾಂಗ್ರೆಸ್ ಸರ್ಕಾರದ ಕೊನೆಯ ಬಜೆಟ್‌ ಉಂಟು ಮಾಡಿದ್ದ ನೋವನ್ನು ಮರೆಯುವ ಮುನ್ನವೇ ಕುಮಾರಸ್ವಾಮಿ ಅವರು ಐದು ತಿಂಗಳ ಅಂತರದಲ್ಲಿ ಮಂಡಿಸಿದ ಹೊಸ ಬಜೆಟ್‌ನಲ್ಲಿ ‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೊಬೈಲ್ ಫೋನ್‌ಗಳ ಬಿಡಿಭಾಗಗಳ ಘಟಕ ಸ್ಥಾಪನೆ’ ಎಂಬ ಹೊಸ ಅಂಶವೊಂದನ್ನು ಬಿಟ್ಟು ಹೇಳಿಕೊಳ್ಳುವಂತಹದ್ದು ಏನೂ ಇಲ್ಲ ಎಂಬುದು ನಾಗರಿಕರ ನಿಟ್ಟುಸಿರು ಭರಿತ ಪ್ರತಿಕ್ರಿಯೆ.

‘ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ಅವರ ಹುಟ್ಟೂರು ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ ನರಸಿಂಹಯ್ಯ ಅವರ ಸ್ಮರಣಾರ್ಥ ಖಾಸಗಿ ಸಹಭಾಗಿತ್ವದಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುವುದು’ ಎಂಬುದು ಈ ಬಜೆಟ್‌ನಲ್ಲಿ ಜಿಲ್ಲೆಗೆ ಸಂಬಂಧಿತ ಎರಡನೇ ಅಂಶವಾಗಿದೆ. ಆದರೆ ಇದು ಹೊಸ ಘೋಷಣೆಯಲ್ಲ. ಈಗಾಗಲೇ ಹೊಸೂರಿನಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದೆ.

ದಶಕದ ಹಿಂದೆ ಚಿಕ್ಕಬಳ್ಳಾಪುರವನ್ನು ನೂತನ ಜಿಲ್ಲೆಯಾಗಿ ಘೋಷಿಸಿದ್ದ ಕುಮಾರಸ್ವಾಮಿ ಅವರು ಈ ಬಜೆಟ್‌ನಲ್ಲಿ ಜಿಲ್ಲೆಗೆ ಮತ್ತಷ್ಟು ಅನುಕೂಲ ಕಲ್ಪಿಸಿಕೊಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ಜನರು ಚಾತಕ ಪಕ್ಷಿಗಳಂತಾಗಿದ್ದರು. ಆದರೆ ನಿರೀಕ್ಷೆ ತಕ್ಕ ಪ್ರತಿಫಲ ಈ ಆಯವ್ಯಯದಿಂದ ದಕ್ಕಲಿಲ್ಲ ಎನ್ನುವುದು ಪ್ರಜ್ಞಾವಂತರ ಆರೋಪ.

ಸದಾ ಅಭಿವೃದ್ಧಿಯ ಕನವರಿಕೆಯಲ್ಲಿಯೇ ಇರುವ ಜಿಲ್ಲೆಯ ಜನರು ‘ಶಾಶ್ವತ ನೀರಾವರಿ’ ಎನ್ನುವ ಪದವನ್ನು ನಿದ್ದೆಯಲ್ಲೂ ಬಡಬಡಿಸುತ್ತಾರೆ. 1,500 ಅಡಿ ಕೊರೆದರೂ ಜೀವಜಲ ಉಕ್ಕದ ಈ ಭಾಗಕ್ಕೆ ತುರ್ತಾಗಿ ಶಾಶ್ವತವಾಗಿ ನೀರು ಒದಗಿಸುವ ಯೋಜನೆ ಬೇಕು ಎನ್ನುವುದು ಪಕ್ಷಾತೀತವಾಗಿ ಎಲ್ಲರ ಒತ್ತಾಯ.

ಕಳೆದ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಕುಮಾರಸ್ವಾಮಿ ಅವರು ಬಯಲು ಸೀಮೆ ಜಿಲ್ಲೆಗಳಿಗೆ 60 ಟಿಎಂಸಿ ನೀರು ಹರಿಸುವುದಾಗಿ ಘೋಷಿಸಿದ್ದನ್ನು ಮರೆತಿರದ ಜಿಲ್ಲೆಯ ಜನರು ಈ ಬಜೆಟ್‌ನಲ್ಲಿ ಆ ವಿಚಾರವಾಗಿ ಸರ್ಕಾರದ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಎದುರು ನೋಡುತ್ತಿದ್ದರು. ಆದರೆ ಆ ಬಗ್ಗೆ ಮುಖ್ಯಮಂತ್ರಿ ಅವರು ಒಂದೇ ಒಂದು ಪ್ರಸ್ತಾಪಿಸದಿರುವುದು ಭಾರಿ ನಿರಾಸೆಯ ಜತೆಗೆ ಆಕ್ರೋಶ ಮೂಡಿಸಿದೆ.

ಫೆಬ್ರುವರಿಯಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ಬಜೆಟ್‌ನಲ್ಲಿ, ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಮೊದಲ ಹಂತದ ಲಿಫ್ಟ್ ಕಾಮಗಾರಿಗಳನ್ನು ₨3,716 ಕೋಟಿ ವೆಚ್ಚದಲ್ಲಿ ಐದು ಪ್ಯಾಕೇಜ್‌ಗಳಲ್ಲಿ ಕೈಗೊಳ್ಳಲಾಗಿದ್ದು, 2017ರ ಡಿಸೆಂಬರ್ ಅಂತ್ಯದವರೆಗೆ ₨2,565 ಕೋಟಿ ವೆಚ್ಚ ಮಾಡಲಾಗಿದೆ.

ಲಿಫ್ಟ್ ಕಾಮಗಾರಿ 2018ರ ಮೇ ಪೂರ್ಣಗೊಳಿಸಿ ಮುಂಗಾರಿನಲ್ಲಿ ಚಾಲನೆಗೊಳಿಸಲು ಯೋಜಿಸಲಾಗಿದೆ. ಇದಲ್ಲದೆ ನೀರು ಹರಿಸುವ ಕಾಲುವೆ ಕಾಮಗಾರಿ, ಅಕ್ವಾಡಕ್ಟ್ ಮತ್ತು ಜಲಾಶಯ ಕಾಮಗಾರಿ ₨3,255 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ’ ಎಂದು ಹೇಳಲಾಗಿದೆ.

ಜತೆಗೆ ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಬಯಲು ಸೀಮೆಯ ಮೂರು ಜಿಲ್ಲೆಗಳ ಕೆರೆಗಳನ್ನು ತುಂಬಿಸುವ ಏತ ನೀರಾವರಿ ಯೋಜನೆಗೆ ಬಗ್ಗೆ ಉಲ್ಲೇಖಿಸಲಾಗಿದೆ. ಇದರಾಚೆ ಎಲ್ಲಿಯೂ ಶಾಶ್ವತ ನೀರಾವರಿಯ ವಿಚಾರ ಇರಲಿಲ್ಲ. ಅದು ಈ ಬಜೆಟ್‌ನಲ್ಲಿ ಸಹ ಪ್ರಸ್ತಾಪವಾಗದೆ ಹೋದದ್ದು ಬದಲಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ತೀವ್ರ ಆಘಾತ ಮೂಡಿಸಿದೆ.

‘ಕುಮಾರಸ್ವಾಮಿ ಅವರು ಚುನಾವಣೆ ಪ್ರಣಾಳಿಕೆಯಲ್ಲಿ ಬಯಲು ಸೀಮೆ ಜಿಲ್ಲೆಗಳಿಗೆ 60 ಟಿಎಂಸಿ ನೀರು ಹರಿಸುತ್ತೇನೆ ಎಂದು ಹೇಳಿದ್ದರು. ಆದರೆ ಅದು ಕಾಂಗ್ರೆಸ್‌ನವರ ಕರಿನೆರಳಿನಲ್ಲಿ ಮಾಯವಾಗಿದೆ. ಇದು ಬಹಳ ನೋವು ತಂದಿದೆ. ಬಯಲು ಸೀಮೆ ಭಾಗದ ನೀರಿನ ಭದ್ರತೆಗಾಗಿ ಆ 60 ಟಿಎಂಸಿ ನೀರು ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡುತ್ತೇವೆ’ ಎಂದು ಅಸಮಾಧಾನ ಹೊರಹಾಕುತ್ತಾರೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT