ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟದಲ್ಲಿ ಬಸ್‌ ಕೊರತೆ: ನೂಕುನುಗ್ಗಲಿನ ಪ್ರಯಾಣ

ವಿದ್ಯಾರ್ಥಿಗಳು, ಪ್ರಯಾಣಿಕರ ಪರದಾಟ
Last Updated 17 ಫೆಬ್ರುವರಿ 2021, 4:18 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಸ್ಥಗಿತಗೊಳಸಿದ್ದ ಶಾಲಾ ಕಾಲೇಜುಗಳು ಪುನಾರಂಭವಾಗಿದೆ. ಆದರೆ, ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಿ ಬರಲು ನಿಗದಿತ ಸಮಯಕ್ಕೆ ಸಾರಿಗೆ ಬಸ್ ಸೌಲಭ್ಯವಿಲ್ಲದೆ, ದಿನನಿತ್ಯ ಹಳ್ಳಿಗಳಿಂದ ನಗರದ ಶಾಲಾ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ವಿವಿಧ ಗ್ರಾಮೀಣ ಭಾಗದ ಕಡೆಗೆ ವಿದ್ಯಾರ್ಥಿಗಳು ಹೋಗಿಬರಲು ಕೆ.ಎಸ್.ಆರ್.ಟಿ.ಸಿ ಬಸ್‌ಗಳನ್ನು ಅವಲಂಬಿಸಿದ್ದಾರೆ. ಶಿಡ್ಲಘಟ್ಟದಿಂದ ಕೈವಾರ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ನಿಗದಿತ ಸಮಯಕ್ಕೆ ಬರುತ್ತಿಲ್ಲ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಲವು ಬಸ್‌ಗಳನ್ನು ನಿಲ್ಲಿಸಲಾಗಿದೆ. ಇದರಿಂದ ಬಸ್‌ಗಳಲ್ಲಿ, ಎರಡು ಬಸ್ಸಿನ ಜನರನ್ನು ಒಂದೇ ಬಸ್ಸಿನಲ್ಲಿ ಕುರಿಗಳಂತೆ ತುಂಬಿಸಿಕೊಂಡು ಹೋಗುತ್ತಿವೆ.

‘ಮಹಿಳೆಯರು ಪುರಷರ ಜೊತೆಗೆ ನೂಕು ನುಗ್ಗಾಟದ ಮೂಲಕ ಬಸ್‌ನಲ್ಲಿ ಪ್ರಯಾಣಿಸಬೇಕಿದೆ. ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಮುಜುಗರಕ್ಕೆ ಈಡಾಗುವಂತಾಗಿದೆ. ಸರ್ಕಾರಿ ಸಾರಿಗೆ ವಾಹನಗಳಿಂದ ಗ್ರಾಮೀಣ ಭಾಗದ ಜನತೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ’ ಎಂದು ಶಿಕ್ಷಕಿ ಗೊರಮಡುಗು ಸುಧಾ ಆಕ್ರೋಶ ಹೊರಹಾಕಿದರು.

ಕೈವಾರ ಮಾರ್ಗವಾಗಿ ಸಂಚರಿಸುತ್ತಿದ್ದ ಹಲವು ಬಸ್‌ಗಳನ್ನೂ ಈಗಾಗಲೇ ಬೇರೆ ಮಾರ್ಗವಾಗಿ ಸಂಚರಿಸುತ್ತಿರುವುದರಿಂದ ಸರಿಯಾದ ಸಮಯಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ಸೌಲಭ್ಯವಿಲ್ಲದೆ ಸಾಕಷ್ಟು ವೃದ್ಧರು, ಗರ್ಭಿಣಿ ಮತ್ತು ಬಾಣಂತಿಯರು ಹಾಗೂ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಪರದಾಡುವಂತಾಗಿದೆ.

ನಗರದ ಬಸ್ ನಿಲ್ದಾಣದಿಂದ ವಿವಿಧ ಗ್ರಾಮಗಳಿಗೆ ಸಂಜೆ 5 ಗಂಟೆಗೆ ಹೋಗುವ ಬಸ್ಸಿನಲ್ಲಿ, ಬಾಗಿಲು ತನಕ ವಿದ್ಯಾರ್ಥಿಗಳನ್ನು ನೇತಾಡಿಕೊಂಡು ವಿವಿಧ ಗ್ರಾಮಗಳಿಗೆ ಪ್ರಯಾಣಿಸುತ್ತಿದ್ದಾರೆ. ಬಸ್‌ನಲ್ಲಿ ಜಾಗ ಇಲ್ಲದೆ ಹಲವು ವಿದ್ಯಾರ್ಥಿಗಳು ಆಟೊ ಮಾಡಿಕೊಂಡು ತಮ್ಮ ಮನೆಗಳಿಗೆ ತೆರಳುವಂತಾಗುತ್ತಿದೆ. ಒಟ್ಟಾರೆ ವಿದ್ಯಾರ್ಥಿಗಳು ನರಕಯಾತನೆ ಅನುಭವಿಸುವ ಮೂಲಕ ಸರ್ಕಾರಿ ಬಸ್ಸುಗಳಲ್ಲಿ ಸಾಗುವಂತಾಗಿದೆ.

ಬಸ್ ನಿಲ್ದಾಣದ ಟಿಸಿ ನೀಡುವ ಹಾರಿಕೆ ಉತ್ತರದಿಂದ ವಿದ್ಯಾರ್ಥಿಗಳು ರೊಚ್ಚಿಗೆದ್ದು, ಈಗಾಗಲೇ ಸ್ಥಗಿತಗೊಳಿಸಿರುವ ಬಸ್‌ಗಳನ್ನು ಪುನರಾರಂಭಿಬೇಕೆಂದು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೂ ಸಂಬಂಧಪಟ್ಟ ಡಿಪೋ ಅಧಿಕಾರಿಗಳು ಮಾತ್ರ ಜಾಣ ಕುರುಡರಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆ ಇದ್ದ ಮಾರ್ಗಸೂಚಿಯಂತೆ ಬಸ್ಸುಗಳು ತೆರಳುವಂತಾಗಬೇಕು. ಬಸ್‌ನಲ್ಲಿ ಸಾಮಾಜಿಕ ಅಂತರವಿಲ್ಲದೆ ಪ್ರಯಾಣಿಕರು ಪ್ರಯಾಣಿಸುವುದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೆಕಿದೆ. ಕಾರುಗಳಲ್ಲಿ ಸಂಚರಿಸುವ ಜನಪ್ರತಿನಿಧಿಗಳೂ ಸಹ ಈ ಬಗ್ಗೆ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT